ADVERTISEMENT

ಜಗಳೂರು: ವಕೀಲ ವೃತ್ತಿ ಯಶಸ್ಸಿಗೆ ನೈಪುಣ್ಯತೆ ಮುಖ್ಯ

ಜಿಲ್ಲಾ ಮಟ್ಟದ ಕಾನೂನು ಕಾರ್ಯಾಗಾರದಲ್ಲಿ ನ್ಯಾಯಾಧೀಶ ಜಿ.ತಿಮ್ಮಯ್ಯ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 4:59 IST
Last Updated 7 ಅಕ್ಟೋಬರ್ 2021, 4:59 IST
ಜಗಳೂರಿನಲ್ಲಿ ಬುಧವಾರ ನಡೆದ ಕಾನೂನು ಕಾರ್ಯಾಗಾರವನ್ನು ನ್ಯಾಯಾಧೀಶ ಜಿ. ತಿಮ್ಮಯ್ಯ ಉದ್ಘಾಟಿಸಿದರು. ಎಸ್.ಪಿ. ರಿಷ್ಯಂತ್, ಹೈಕೋರ್ಟ್ ವಕೀಲ ಶಂಕರಪ್ಪ ಇದ್ದರು.
ಜಗಳೂರಿನಲ್ಲಿ ಬುಧವಾರ ನಡೆದ ಕಾನೂನು ಕಾರ್ಯಾಗಾರವನ್ನು ನ್ಯಾಯಾಧೀಶ ಜಿ. ತಿಮ್ಮಯ್ಯ ಉದ್ಘಾಟಿಸಿದರು. ಎಸ್.ಪಿ. ರಿಷ್ಯಂತ್, ಹೈಕೋರ್ಟ್ ವಕೀಲ ಶಂಕರಪ್ಪ ಇದ್ದರು.   

ಜಗಳೂರು:ನ್ಯಾಯಾಂಗ, ವಕೀಲರು ಹಾಗೂ ಪ್ರಾಸಿಕ್ಯೂಷನ್ ಪರಸ್ಪರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದಲ್ಲಿ ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಸಾಧ್ಯ ಎಂದು ಇಲ್ಲಿನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಜಿ. ತಿಮ್ಮಯ್ಯ ಹೇಳಿದರು.

ಪಟ್ಟಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾನೂನು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನುರಿತ ಕಾನೂನು ತಜ್ಞರು ಹಾಗೂ ವಕೀಲರ ಕಾನೂನು ಕುರಿತ ಕಾರ್ಯಾಗಾರಗಳು ಕಾನೂನಿನ ವೈಶಾಲ್ಯ ಮತ್ತು ಸ್ಪಷ್ಟತೆಯನ್ನು ತಿಳಿಸುತ್ತದೆ. ಪ್ರತಿನಿತ್ಯ ಕಾನೂನುಗಳು ಹೊಸರೂಪದಲ್ಲಿ ಜಾರಿ ಬರುತ್ತಿದ್ದು, ವೃತ್ತಿ ನೈಪುಣ್ಯತೆ ಪಡೆಯುವುದು ಅಗತ್ಯ. ವಕೀಲ ಶಂಕರಪ್ಪ ಅವರು ಕೇವಲ ವೃತ್ತಿಗೆ ಸೀಮಿತವಾಗದೆ ರಾಜ್ಯಾದ್ಯಂತ ಸುತ್ತಿ ಕಾನೂನುಅರಿವು ಮೂಡಿಸುವಲ್ಲಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ‘ಕೊಲೆ ಅಥವಾ ಅತ್ಯಾಚಾರ ಅಥವಾ ಕಳವು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಹಿಡಿಯುವುದು ಮಾತ್ರ ಮುಖ್ಯವಲ್ಲ. ಬಂಧನದ ನಂತರದ ತನಿಖೆ ಅತ್ಯಂತ ಮಹತ್ವದ್ದಾಗಿದೆ. ಪ್ರಕರಣಕ್ಕೆ ಅಗತ್ಯವಾಗಿರುವ ಸಾಕ್ಷ್ಯಗಳನ್ನು ತಾಂತ್ರಿಕ ನೈಪುಣ್ಯದ ಆಧಾರದಲ್ಲಿ ಸಂಗ್ರಹಿಸಿ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಬೇಕು. ಇದರಿಂದ ಯಾವುದೇ ಆರೋಪಿ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ತರಬೇತಿ ಅವಧಿಯಲ್ಲಿ ಪಡೆದ ಜ್ಞಾನದ ಜೊತೆಗೆ ಕ್ಷೇತ್ರ ಕಾರ್ಯದಲ್ಲಿ ಗಳಿಸುವ ಅನುಭವ ಅತ್ಯಂತ ಮುಖ್ಯ. ಕಾರ್ಯಾಗಾರಗಳು ಹೆಚ್ಚಿನ ಕಾನೂನು ಜ್ಞಾನ ಹೊಂದಲು ಅನುಕೂಲವಾಗುತ್ತದೆ’ ಎಂದು ಹೇಳಿದರು.

ಉಪನ್ಯಾಸ ನೀಡಿದ ಹೈಕೋರ್ಟ್ ವಕೀಲ ಶಂಕರಪ್ಪ, ‘ಜನರು ಶಾಸಕಾಂಗ ಹಾಗೂ ಕಾರ್ಯಾಂಗದಲ್ಲಿ ವಿಶ್ವಾಸ ಕಳೆದುಕೊಂಡಿದ್ದು, ನ್ಯಾಯಾಂಗದ ಬಗ್ಗೆ ಅಪಾರ ನಂಬಿಕೆ ಮತ್ತು ಗೌರವ ಭಾವನೆ ಹೊಂದಿದ್ದಾರೆ. ನ್ಯಾಯಾಂಗದ ಘನತೆ ಉಳಿಯಬೇಕಿದ್ದಲ್ಲಿ ನ್ಯಾಯಾಧೀಶರು ಹಾಗೂ ವಕೀಲರ ಪಾತ್ರ ನಿರ್ಣಾಯಕ. ಸೈಬರ್ ಹಾಗೂ ಎಲೆಕ್ಟ್ರಾನಿಕ್ ಅಪರಾಧಗಳ ಈ ಕಾಲಘಟ್ಟದಲ್ಲಿ ಸಾಂಪ್ರದಾಯಿಕ ಕಾನೂನಿನ ಜ್ಞಾನದ ಜೊತೆಗೆ ಹೊಸ ತಂತ್ರಜ್ಞಾನ ಆಧಾರಿತ ಕಾನೂನನ್ನು ಆಳವಾಗಿ ಅರಿತಲ್ಲಿ ಮಾತ್ರ ನ್ಯಾಯವನ್ನು ಹೆಕ್ಕಿ ಹೊರ ತೆಗೆಯಬಹುದು’ ಎಂದು ಅಭಿಪ್ರಾಯಪಟ್ಟರು.

ಕಾನೂನು ಸೇವಾ ಪ್ರಾಧಿಕಾರದಸದಸ್ಯ ಎಲ್.ಎಚ್. ಅರುಣಕುಮಾರ, ‘ರಾಜ್ಯದಲ್ಲೇ ದಾವಣಗೆರೆ ಜಿಲ್ಲೆಯ ಕಾನೂನು ಸೇವಾ ಪ್ರಾಧಿಕಾರ ಹೆಚ್ಚಿನ ಪ್ರಮಾಣದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಗಳನ್ನು ಆಯೋಜಿಸುವ ಮೂಲಕ ಪ್ರಥಮ ಸ್ಥಾನದಲ್ಲಿದೆ’ ಎಂದರು.

ಜಿಲ್ಲೆ ವಿವಿಧೆಡೆಯ ಪೊಲೀಸ್ ಸಿಬ್ಬಂದಿ ಹಾಗೂ ವಕೀಲರು ಭಾಗವಹಿಸಿದ್ದರು.

ಎ.ಎಸ್.ಪಿ. ಕನ್ನಿಕಾ, ಎಪಿಪಿ ಡಿ. ರೂಪ, ಸಿಪಿಐ ಮಂಜುನಾಥ್ ಪಂಡಿತ್, ವಕೀಲರ ಸಂಘದ ಕೆ.ಎನ್.ಪರಮೇಶ್ವರಪ್ಪ, ಶಿವಲಿಂಗಪ್ಪ, ವೈ. ಹನುಮಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.