ADVERTISEMENT

ಕೌಶಲಯುಕ್ತ ಎಂಜಿನಿಯರ್‌ಗಳು ಅಗತ್ಯ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 13:46 IST
Last Updated 15 ಫೆಬ್ರುವರಿ 2020, 13:46 IST
ದಾವಣಗೆರೆಯ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನಲ್ಲಿ ಶನಿವಾರ ನಡೆದ ವಿದ್ಯಾರ್ಥಿಗಳ ಮಾರ್ಗದರ್ಶನ ಸಮಾರೋಪ ಸಮಾರಂಭದಲ್ಲಿ ಪ್ರೊ.ವೈ. ವೃಷಭೇಂದ್ರಪ್ಪ, ಡಾ.ಬಿಪ್ಲಾಬ್ ಕೆ.ಬಿಸ್ವಾಲ್, ರವಿರಂಜನ್ ಕುಮಾರ್, ಡಾ.ಎಂ.ಸಿ.ನಟರಾಜ ಇದ್ದರು
ದಾವಣಗೆರೆಯ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನಲ್ಲಿ ಶನಿವಾರ ನಡೆದ ವಿದ್ಯಾರ್ಥಿಗಳ ಮಾರ್ಗದರ್ಶನ ಸಮಾರೋಪ ಸಮಾರಂಭದಲ್ಲಿ ಪ್ರೊ.ವೈ. ವೃಷಭೇಂದ್ರಪ್ಪ, ಡಾ.ಬಿಪ್ಲಾಬ್ ಕೆ.ಬಿಸ್ವಾಲ್, ರವಿರಂಜನ್ ಕುಮಾರ್, ಡಾ.ಎಂ.ಸಿ.ನಟರಾಜ ಇದ್ದರು   

ದಾವಣಗೆರೆ: ಒಂದು ದೇಶ ಅಭಿವೃದ್ಧಿಯಾಗಬೇಕಾದರೆ ಕೌಶಲ ಹಾಗೂ ಮೌಲ್ಯಯುಕ್ತ ಎಂಜಿನಿಯರ್‌ಗಳು ಅವಶ್ಯಕ ಎಂದು ಹರಿಹರದ ಕಿರ್ಲೋಸ್ಕರ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಸ್ಟಡೀಸ್ ನಿರ್ದೇಶಕ ಡಾ. ಬಿಪ್ಲಾಬ್ ಕೆ.ಬಿಸ್ವಾಲ್ ಅಭಿಪ್ರಾಯಪಟ್ಟರು.

ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಎರಡನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ಮಾರ್ಗದರ್ಶನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪ್ರಸ್ತುತದಲ್ಲಿ ಎಂಜಿನಿಯರ್‍ಗಳು ಕೇವಲ ಪಠ್ಯಕ್ಕಷ್ಟೇ ಸೀಮಿತವಾಗಿದ್ದಾರೆ. ಅವರಲ್ಲಿ ಕೌಶಲದ ಕೊರತೆ ಇದೆ. ಭಾರತದಲ್ಲಿ ಕೌಶಲಯುಕ್ತ ಎಂಜಿನಿಯರ್‍ಗಳ ಕೊರತೆ ಇದೆ. ಕೇವಲ ಪದವಿಯಿಂದ ಮಾತ್ರವೇ ಎಂಜಿನಿಯರ್ ಆಗುವ ಕಾಲ ಬದಲಾಗಿ ಹೋಗಿದೆ. ಯಾವ ವ್ಯಕ್ತಿ ತನ್ನಲ್ಲಿ ಹೆಚ್ಚಿನ ಕೌಶಲ ಹೊಂದಿರುತ್ತಾನೋ ಆತ ಮಾತ್ರ ನಿಜವಾದ ಎಂಜಿನಿಯರ್ ಆಗಲು ಸಾಧ್ಯ’ ಎಂದರು.

ADVERTISEMENT

ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಎಲ್ಲಾ ವಿಷಯಗಳಿಗೂ ಗೂಗಲ್ ಅನ್ನೇ ಅವಲಂಬಿಸಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುತ್ತಿಲ್ಲ. ಬದಲಾಗಿ ವಾಟ್ಸ್‌ ಆ್ಯಪ್ ಹಾಗೂ ಫೇಸ್‌ಬುಕ್‌ಗಳಲ್ಲಿ ಹೆಚ್ಚಿನ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲರೂ ಜ್ಞಾನ ಬೆಳೆಸಿಕೊಳ್ಳಬೇಕು. ಜ್ಞಾನವಿದ್ದರೆ ಮಾತ್ರ ಜೀವನವನ್ನು ನಿಭಾಯಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ.ಎಂ.ಸಿ. ನಟರಾಜ ಮಾತನಾಡಿ, ‘ಸಮಾಜದಕ್ಕೆ ಮೌಲ್ಯಯುತ ಎಂಜಿನಿಯರ್‍ಗಳನ್ನು ನೀಡುವಲ್ಲಿ ಇಂತಹ ಶಿಬಿರಗಳು ಅವಶ್ಯಕ’ ಎಂದರು.

ಕಾಲೇಜಿನ ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ ಮಾತನಾಡಿ, ‘ಉತ್ತಮ ಸಂಸ್ಕಾರ ಇರುವ ಎಂಜಿನಿಯರ್‍ಗಳ ಅವಶ್ಯಕತೆ ಇದೆ’ ಎಂದರು.

ಕಾರ್ಯಕ್ರಮದ ಸಂಚಾಲಕ ಡಾ.ಕೆ.ಎಸ್. ಬಸವರಾಜಪ್ಪ ಮಾತನಾಡಿ, ‘ಬಾಳುವಷ್ಟು ದಿನವೂ ಕಲಿಯುತ್ತಲೇ ಇರಬೇಕು. ವಿದ್ಯಾರ್ಥಿಗಳು ಇದನ್ನು ಅಳವಡಿಸಿಕೊಳ್ಳಬೇಕು. ಜ್ಞಾನಕ್ಕೆ ಸಮಾನಾದ ಪವಿತ್ರ ವಸ್ತು ಬೇರೊಂದಿಲ್ಲ’ ಎಂದು ಹೇಳಿದರು.

ಕಾರ್ಯಕ್ರಮದ ಸಂಚಾಲಕ ಡಾ.ಎ.ಜಿ. ಶಂಕರಮೂರ್ತಿ, ಹರಿಹರದ ಸಿಆರ್‍ಸಿ ಪ್ಲೇಸ್‍ಮೆಂಟ್ ಅಧಿಕಾರಿ ರವಿರಂಜನ್‍ಕುಮಾರ್, ವಿವಿಧ ವಿಭಾಗಗಳ ಪ್ರೊ. ಸದಾಶಿವಪ್ಪ ಕಣಕುಪ್ಪಿ, ಜಿ.ಪಿ.ದೇಸಾಯಿ, ಎಂ.ಎಸ್. ನಾಗರಾಜ್, ಎಸ್. ಕುಮಾರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.