ADVERTISEMENT

ಚಿತ್ರದುರ್ಗ: ರಾರಾಜಿಸುತ್ತಿರುವ ಹಣದ ಗುಲಾಮಿತನ- ಶಿವಮೂರ್ತಿ ಮುರುಘಾ ಶರಣರು ವಿಷಾದ

ಮುರುಘರಾಜೇಂದ್ರ ಬೃಹನ್ಮಠ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 7:22 IST
Last Updated 5 ಅಕ್ಟೋಬರ್ 2021, 7:22 IST
ದಾವಣಗೆರೆಯ ಶಿವಯೋಗಾಶ್ರಮದಲ್ಲಿ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರ 65ನೇ ವರ್ಷದ ಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ವಚನಗ್ರಂಥ ಮೆರವಣಿಗೆ ಮತ್ತು ಸರಳ ರಥೋತ್ಸವಕ್ಕೆ ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಪುಷ್ಪಾರ್ಚನೆ ಸಲ್ಲಿಸಿ ಚಾಲನೆ ನೀಡಿದರು. ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ವಿವಿಧ ಮಠಗಳ ಸ್ವಾಮೀಜಿಗಳು ಹಾಗೂ ಭಕ್ತರು ಇದ್ದಾರೆ–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಶಿವಯೋಗಾಶ್ರಮದಲ್ಲಿ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರ 65ನೇ ವರ್ಷದ ಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ವಚನಗ್ರಂಥ ಮೆರವಣಿಗೆ ಮತ್ತು ಸರಳ ರಥೋತ್ಸವಕ್ಕೆ ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಪುಷ್ಪಾರ್ಚನೆ ಸಲ್ಲಿಸಿ ಚಾಲನೆ ನೀಡಿದರು. ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ವಿವಿಧ ಮಠಗಳ ಸ್ವಾಮೀಜಿಗಳು ಹಾಗೂ ಭಕ್ತರು ಇದ್ದಾರೆ–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಇಪ್ಪತೊಂದನೇ ಶತಮಾನ ಎನ್ನುವುದು ಅಪವ್ಯಯದ ಶತಮಾನವಾಗಿದೆ. ಇಲ್ಲಿ ಎಲ್ಲ ಕಡೆಗಳಲ್ಲಿ ಹಣದ ಗುಲಾಮಿತನ ರಾರಾಜಿಸುತ್ತಿದೆ. ಈ ಗುಲಾಮಿತನ ಹೋಗುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ ಎಂದು ಚಿತ್ರದುರ್ಗದ ಮುರುಘಾರಾಜೇಂದ್ರ ಬೃಹನ್ಮಠದ ಶೂನ್ಯ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಇಲ್ಲಿನ ಬಸವಕೇಂದ್ರ ಶಿವಯೋಗಾಶ್ರಮದಲ್ಲಿ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರ 65ನೇ ವರ್ಷದ ಸರಳ ರಥೋತ್ಸವ, ವಚನ ಗ್ರಂಥ ಮೆರವಣಿಗೆ ಕಾರ್ಯಕ್ರಮದಲ್ಲಿ ಶರಣರು ಮಾತನಾಡಿದರು.

ಮಹಾತ್ಮ ಗಾಂಧಿ ಸೇರಿದಂತೆ ಅನೇಕ ಮಹಾನೀಯರು ಸೇರಿ ಸ್ವಾತಂತ್ರ್ಯ ತಂದು ಕೊಟ್ಟರು. ಬ್ರಿಟಿಷರು ಹೋದರೂ ಜನರಲ್ಲಿ ಗುಲಾಮಿತನ ಹೋಗಲಿಲ್ಲ. ಹಣದ ಹಿಂದೆ ಓಡುತ್ತಿದ್ದಾರೆ. ಹಣವೇ ಸರ್ವಸ್ವ ಎಂಬ ಪರಿಕಲ್ಪನೆಯಲ್ಲಿದ್ದಾರೆ ಎಂದು ವಿಷಾದಿಸಿದರು.

ADVERTISEMENT

ಹಣ ಮಾಡುವುದೊಂದೇ ಬದುಕಲ್ಲ. ಜನರ ಸೇವೆ ಮಾಡುವುದು ಶ್ರೇಷ್ಠ ಬದುಕು. ಸೇವಾ ಪ್ರವೃತಿ ಹೆಚ್ಚಾಗಬೇಕಿದೆ ಎಂದರು.

ಜಯದೇವ ಶ್ರೀಗಳು ತಮ್ಮ ಪಾಲಿನ ಕರ್ತವ್ಯ, ಹೊಣೆಗಾರಿಕೆ, ಜವಾಬ್ದಾರಿ, ಕಾಯಕವನ್ನು ಮಾಡುವ ಮೂಲಕ ಜಗದ್ಗುರುಗಳಾದರು. ಅವರು ಸ್ವಾಮೀಜಿಗಳಿಗೆ ಅಷ್ಟೇ ಏಕೆ ಜನಸಾಮಾನ್ಯರಿಗೂ ಮಾದರಿ ಆಗಿದ್ದಾರೆ. ಅವರ ಬದುಕು, ಚಿಂತನೆ ಅಧ್ಯಯನ ಮಾಡಬೇಕು. ಆಗ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಜಯದೇವ ಶ್ರೀಗಳು ತನ್ನಲ್ಲಿಗೆ ಬರುವ ವ್ಯಕ್ತಿಯ ಜಾತಿ, ಧರ್ಮ ನೋಡಿಲ್ಲ. ನಾಸ್ತಿಕರು ಬಂದರೂ ಅವರಿಗೆ ಆಶೀರ್ವಾದ ಮಾಡಿದ ಉದಾಹರಣೆಗಳಿವೆ. ಅವರ ನಿಸ್ವಾರ್ಥ ಸೇವೆ, ಸಮಾಜಕ್ಕಾಗಿ ದುಡಿದ ರೀತಿ ನೋಡಿದರೆ ಬಸವಣ್ಣನ ನಂತರ ಅವರ ತತ್ವಗಳನ್ನು ಅನುಸರಿಸಿದ ಮಹಾನ್ ಪುರುಷ ಎಂದು ಶ್ಲಾಘಿಸಿದರು.

ಮುರುಘಾ ಮಠಕ್ಕೆ ವೈಭವದ ಇತಿಹಾಸವಿದೆ. ಮಠದ ಶರಣರೆಲ್ಲರೂ ದಾರ್ಶನಿಕರು, ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರು ಶಿಕ್ಷಣ, ಆರೋಗ್ಯ ನೀಡದಿದ್ದರೇ ಈ ಸಮಾಜ ಇನ್ನೂ ಅನಕ್ಷರತೆ, ಅನಾರೋಗ್ಯದಿಂದ ಬಳಲುತ್ತಿತ್ತು ಎಂದು ವಿವರಿಸಿದರು.

ಹೆಬ್ಬಾಳ್ ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ವೈದ್ಯ ಎಸ್.ಎಂ. ಎಲಿ ಅವರೂಝ ಉಪಸ್ಥಿತರಿದ್ದರು. ಬಸವ ಕಲಾ ಲೋಕದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಎಂ.ಕೆ. ಬಕ್ಕಪ್ಪ ಸ್ವಾಗತಿಸಿದರು.

ಪ್ರತಿಮೆ ಅನಾವರಣ: ಕಾರ್ಯಕ್ರಮಕ್ಕೂ ಮುನ್ನ ಶಿವಯೋಗಿ ಮಂದಿರದ ಆವರಣದಲ್ಲಿರುವ ಜಯದೇವ ಮುರುಘಾ ರಾಜೇಂದ್ರ ಸ್ವಾಮಿಗಳವರ ಗದ್ದುಗೆಯ ಮೇಲೆ ಅವರ ಅಮೃತಶಿಲೆಯ ಪ್ರತಿಮೆಯ ಅನಾವರಣವನ್ನುಶಿವಮೂರ್ತಿ ಮುರುಘಾ ಶರಣರು ಮಾಡಿದರು.

ಬಳಿಕ ರಥೋತ್ಸವ ನಡೆಯಿತು. ಜಯದೇವ ಶ್ರೀಗಳ ಭಾವಚಿತ್ರ ಹಾಗೂ ವಚನ ಗ್ರಂಥಗಳನ್ನು ರಥೋತ್ಸವದಲ್ಲಿಟ್ಟು ಮೆರವಣಿಗೆ ಮಾಡಲಾಯಿತು. ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ, ಬಸವಪ್ರಭು ಸ್ವಾಮೀಜಿ ಸಂಯೋಜನೆಯಲ್ಲಿ ನಡೆದ ಈ ರಥೋತ್ಸವದಲ್ಲಿ ಅಥಣಿ ಗಜ್ಜಿನಮಠ ಶಿವಬಸವ ಸ್ವಾಮೀಜಿ, ಗುರುಮಠಕಲ್‌ ಶಾಂತವೀರ ಸ್ವಾಮೀಜಿ, ಚನ್ನಗಿರಿ ಜಯಬಸವಚಂದ್ರ ಸ್ವಾಮೀಜಿ, ರಾಣೆಬೆನ್ನೂರು ಗುರುಬಸವ ಸ್ವಾಮೀಜಿ, ಹಾವೇರಿ ಬಸವಶಾಂತಲಿಂಗ ಸ್ವಾಮೀಜಿ, ದಾಬಸ್‌ಪೇಟೆ ಬಸವರಮಾನಂದ ಸ್ವಾಮೀಜಿ, ಬ್ಯಾಡಗಿ, ಆಳುವಳ್ಳಿ, ಚಳ್ಳಕೆರೆ, ಕುಂಬಾರಪೀಠ ಗುಬ್ಬಿ ಅಮ್ಮ ಹೀಗೆ ಅನೇಕ ಪೀಠಗಳ ಸ್ವಾಮೀಜಿ, ಅಮ್ಮನವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.