ದಾವಣಗೆರೆ: ಮಹಾನಗರ ಪಾಲಿಕೆಯ ಕಸ ಸಂಗ್ರಹ ವಾಹನಗಳಿಗೆ ಜಿಪಿಆರ್‌ಎಸ್ ಉಪಕರಣ ಅಳವಡಿಸಲಾಗಿದೆ. ಯಾವ ವಾಹನ, ಎಲ್ಲಿ ಕಸ ಸಂಗ್ರಹಿಸುತ್ತದೆ ಎಂಬುದನ್ನು ಪರಿಶೀಲಿಸಲು ಅನುಕೂಲವಾಗಿದೆ. ಕಸ ಸಂಗ್ರಹ ಕಾರ್ಯವನ್ನು ಇನ್ನಷ್ಟು ಜನಸ್ನೇಹಿಯಾಗಿ ರೂಪಿಸಲಾಗಿದೆ ಎಂದು ‘ಸ್ಮಾರ್ಟ್‌ಸಿಟಿ’ ಉಪಪ್ರಧಾನ ವ್ಯವಸ್ಥಾಪಕಿ ಜಿ.ಆರ್.ಮಮತಾ ತಿಳಿಸಿದರು.
ನಗರದ ದುರ್ಗಾಶಕ್ತಿ ಮಹಿಳಾ ಸ್ವಸಹಾಯ ಸಂಘದ ವತಿಯಿಂದ ಗಾಜಿನ ತ್ಯಾಜ್ಯ ಮತ್ತು ಒಣ ಕಸ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಹಾನಗರ ಪಾಲಿಕೆ ವ್ಯಾಪ್ತಿಯ ಕುಟುಂಬ, ಜನಸಂಖ್ಯೆ, ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣ, ಸಂಗ್ರಹವಾಗುವ ತ್ಯಾಜ್ಯಕ್ಕೆ ಅನುಗುಣವಾಗಿ ಪೌರಕಾರ್ಮಿಕರನ್ನು ನೇಮಕ ಮಾಡಲಾಗಿದೆ. ವಾಹನ ಸಂಚಾರದ ನಕ್ಷೆ ರಚಿಸಲಾಗಿದೆ. ಪ್ರತಿ ವಾಹನದ ಮೇಲೆ ನಿಗಾ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದೆ. ಪೌರಕಾರ್ಮಿಕರಿಂದ ಅಧಿಕಾರಿಗಳವರೆಗೆ ಯಾರೊಬ್ಬರೂ ಕರ್ತವ್ಯದಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಬಿಸಾಡುವಂತಿಲ್ಲ’ ಎಂದು ಹೇಳಿದರು.
‘ಮರುಬಳಕೆ ಮಾಡಬಹುದಾದ ಜೈವಿಕ ತ್ಯಾಜ್ಯ ಹಾಗೂ ಒಣ ತ್ಯಾಜ್ಯಗಳನ್ನು ಸಂಗ್ರಹಿಸಿ ಮರುಬಳಕೆ ಕೇಂದ್ರಗಳಿಗೆ ರವಾನಿಸಲಾಗುತ್ತದೆ. ಇಂತಹ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯ’ ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಮಾಹಿತಿ ನೀಡಿದರು.
‘ಸ್ಮಾರ್ಟ್ ಸಿಟಿ’ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವೀರೇಶ್ ಕುಮಾರ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ರಾಜಶೇಖರ ಬಿ.ಪುರಾಣಿಕ, ಪರಿಸರ ಎಂಜಿನಿಯರ್ ಜಗದೀಶ್, ಮಾತೃದೇವೊ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಪೋತುಲ ಶ್ರೀನಿವಾಸ್, ಒಣ ಕಸ ಮರು ಸಂಗ್ರಹಣಾ ಘಟಕದ ಸಂಯೋಜಕ ನವೀನ ಗುಬ್ಬಿ, ಕೆ.ಎನ್.ಪ್ರಜ್ವಲ್, ನಂದಾಮಣಿ, ರೇಖಾ, ಡಿ.ಸಾವಿತ್ರಮ್ಮ, ಡಿ.ಅರ್.ಚೇತನಾ ಇದ್ದರು.
Quote - ಮಹಿಳಾ ಸ್ವಸಹಾಯ ಸಂಘಗಳು ಸರ್ಕಾರದ ನೆರವು ಪಡೆಯದೇ ತ್ಯಾಜ್ಯ ನಿರ್ವಹಣೆಗೆ ಮುಂದಾಗಿದ್ದು ಶ್ಲಾಘನೀಯ. ಇಂತಹ ಕಾರ್ಯಗಳಿಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ. ಜಿ.ಎಂ. ಗಂಗಾಧರಸ್ವಾಮಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.