ದಾವಣಗೆರೆ: ಮೂಲಸೌಲಭ್ಯ ಕಲ್ಪಿಸಿ ಅಭಿವೃದ್ಧಿಯ ಸ್ಪರ್ಶ ನೀಡುವ ಮಹತ್ವಾಕಾಂಕ್ಷೆಯಿಂದ ಕೇಂದ್ರ ಸರ್ಕಾರ ರೂಪಿಸಿರುವ ‘ಸ್ಮಾರ್ಟ್ ಸಿಟಿ’ ಯೋಜನೆಯ ಗಡುವು ಡಿಸೆಂಬರ್‌ವರೆಗೂ ವಿಸ್ತರಣೆಯಾಗಿದೆ. ನಗರದ ಸರ್ವತೋಮುಖ ಬೆಳವಣಿಗೆಗೆ ಸರ್ಕಾರ ₹ 1,000 ಕೋಟಿಗೂ ಹೆಚ್ಚು ಅನುದಾನ ನೀಡಿದೆ. ಈ ಹಣದ ಹೊಳೆಯಲ್ಲಿ ದಾವಣಗೆರೆ ನಿಜಕ್ಕೂ ‘ಸ್ಮಾರ್ಟ್’ ಆಯಿತೇ ಎಂಬ ಪ್ರಶ್ನೆ ಜನರನ್ನು ಕಾಡತೊಡಗಿದೆ.
‘ಮಾದರಿ ನಗರ’ ರೂಪಿಸುವ ಉದ್ದೇಶದಿಂದ ಆಯ್ಕೆ ಮಾಡಲಾದ ದೇಶದ 100 ನಗರಗಳಲ್ಲಿ ದಾವಣಗೆರೆ ಸಹ ಸೇರಿದ್ದು, ಈ ಯೋಜನೆಗೆ ಆಯ್ಕೆಯಾದಾಗ ಜನರು ನಿರೀಕ್ಷೆಯ ಮಹಾಗೋಪುರ ಕಟ್ಟಿಕೊಂಡಿದ್ದರು. ಸುಸ್ಥಿರ ಅಭಿವೃದ್ಧಿಯ ಕನಸು ಬಿತ್ತಿದ್ದ ‘ಸ್ಮಾರ್ಟ್ ಸಿಟಿ’ಯ ಆಶಯ ಎಷ್ಟರ ಮಟ್ಟಿಗೆ ಈಡೇರಿದೆ ಎಂಬ ಜಿಜ್ಞಾಸೆ ಶುರುವಾಗಿದೆ.
ಕೇಂದ್ರ ಸರ್ಕಾರವು 2015ರಲ್ಲಿ ಈ ಯೋಜನೆ ಘೋಷಣೆ ಮಾಡಿತು. ದಾವಣಗೆರೆ ನಗರ 2016ರಲ್ಲಿ ಈ ಪಟ್ಟಿಗೆ ಸೇರ್ಪಡೆಗೊಂಡಿತು. ‘ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್’ 2017ರಲ್ಲಿ ಅಸ್ತಿತ್ವಕ್ಕೆ ಬಂತು. ಕೇಂದ್ರದ ಈ ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರವೂ ಕೈಜೋಡಿಸಿತು. ಐದು ವರ್ಷಗಳ ಅವಧಿಯಲ್ಲಿ ಯೋಜನೆ ಜಾರಿಗೊಳಿಸುವ ಗುರಿ ಹೊಂದಲಾಗಿತ್ತು. ಕೋವಿಡ್ ಮತ್ತು ಅನುದಾನ ಬಿಡುಗಡೆಯಲ್ಲಿ ಉಂಟಾದ ವಿಳಂಬದಿಂದ ಕಾಲಾವಧಿ ವಿಸ್ತರಣೆಯಾಗುತ್ತಲೇ ಬಂದಿತ್ತು.
2025ರ ಮಾರ್ಚ್‌ಗೆ ಯೋಜನೆಯ ಗಡುವನ್ನು ಕೇಂದ್ರ ಸರ್ಕಾರ ಅಂತ್ಯಗೊಳಿಸಿತು. ದಾವಣಗೆರೆಯೂ ಸೇರಿದಂತೆ ದೇಶದ ಹಲವೆಡೆ ಈ ಯೋಜನೆ ಇನ್ನೂ ಪೂರ್ಣವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಹೀಗಾಗಿ, ಇನ್ನಷ್ಟು ಕಾಲಾವಕಾಶಕ್ಕೆ ಕೋರಿಕೆಗಳು ಸಲ್ಲಿಕೆಯಾಗಿದ್ದವು. ಕೂಲಂಕಷವಾಗಿ ಪರಿಶೀಲಿಸಿದ ಕೇಂದ್ರ ಸರ್ಕಾರ, ಡಿಸೆಂಬರ್‌ವರೆಗೆ ಗಡುವು ವಿಸ್ತರಿಸಿದೆ. ಈ ಹೊತ್ತಿಗೆ ಎಲ್ಲ ಕಾಮಗಾರಿಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಹಸ್ತಾಂತರಿಸಲು ಸೂಚಿಸಿದೆ. ಹೊಸ ಕಾಮಗಾರಿ ಕೈಗೆತ್ತಿಕೊಳ್ಳದಂತೆ ನಿರ್ದೇಶನ ನೀಡಿದೆ.
‘ಸ್ಮಾರ್ಟ್‌ಸಿಟಿ’ ಯೋಜನೆಯಡಿ ದಾವಣಗೆರೆಯಲ್ಲಿ 124 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈಜುಗೊಳ, ಥೀಮ್ ಪಾರ್ಕ್, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣ, ಪಾದಚಾರಿ ಮಾರ್ಗ, ಮಳೆ ನೀರು ಚರಂಡಿ ಪುನರ್ ನಿರ್ಮಾಣ, ರಸ್ತೆ ಸೇರಿ 114 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ಮಾಣ ಸೇರಿ ಇನ್ನೂ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ. 7 ಕಾಮಗಾರಿಗಳಿಗೆ ಕಾನೂನು ತೊಡಕು ಎದುರಾಗಿದೆ. ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಹಂತದಲ್ಲಿ 1 ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ 3 ಕಾಮಗಾರಿಗಳಿವೆ. ಈ ಎಲ್ಲವೂ ವರ್ಷಾಂತ್ಯಕ್ಕೆ ಮುಗಿಯುವುದು ಅನುಮಾನ.
ಬ್ಯಾರೇಜ್ ಗೇಟ್ ಅಳವಡಿಕೆ ಬಾಕಿ:
ದಾವಣಗೆರೆಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ‘ಸ್ಮಾರ್ಟ್‌ಸಿಟಿ’ ಯೋಜನೆಯಡಿ ಹರಿಹರ ತಾಲ್ಲೂಕಿನ ರಾಜನಹಳ್ಳಿ ಸಮೀಪ, ತುಂಗಭದ್ರಾ ನದಿಗೆ ‘ಬ್ಯಾರೇಜ್’ ನಿರ್ಮಿಸಲಾಗುತ್ತಿದೆ. ₹ 76 ಕೋಟಿ ವೆಚ್ಚದ ಈ ಕಾಮಗಾರಿ ಇನ್ನೂ ಮುಕ್ತಾಯವಾಗಿಲ್ಲ. 16 ಆಟೊ ಫಾಲ್ ಗೇಟ್ ಅಳವಡಿಕೆಯ ಕಾಮಗಾರಿ ನಡೆಯುತ್ತಿದೆ. ಮಳೆಗಾಲ ಪ್ರಾರಂಭವಾಗುತ್ತಿದ್ದು, ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿರುವ ಪರಿಣಾಮ ಮುಂದಿನ ಬೇಸಿಗೆಯವರೆಗೂ ಕಾಯುವುದು ಅನಿವಾರ್ಯ.
₹ 5 ಕೋಟಿ ವೆಚ್ಚದಲ್ಲಿ ‘ರಾಮ್ ಅಂಡ್ ಕೋ’ ವೃತ್ತವನ್ನು ಮರು ವಿನ್ಯಾಸಗೊಳಿಸುವ ಯತ್ನ ಇನ್ನೂ ಸಾಕಾರಗೊಂಡಿಲ್ಲ. ಆಹಾರ ಸೇವಿಸಲು ವೃತ್ತಕ್ಕೆ ಬರುವವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೈಗೆತ್ತಿಕೊಳ್ಳುವ ಈ ಕಾಮಗಾರಿ ಇನ್ನೂ ಡಿಪಿಆರ್ ಹಂತದಲ್ಲಿದೆ. ರಸ್ತೆ, ನೀರು, ಚರಂಡಿ, ಉದ್ಯಾನ ಸೇರಿ ಹಲವು ಕಾಮಗಾರಿಯ ಬಗ್ಗೆ ಜನರಲ್ಲಿ ತೃಪ್ತಿ ಇದೆ.
ಸ್ವಸಹಾಯ ಸಂಘದ ನೆರವಿಗೆ ಕೋರಿಕೆ:
ಎಲೆಕ್ಟ್ರಿಕ್–ಆಟೊ, ಬೈಸಿಕಲ್ ಶೇರಿಂಗ್ ಹಾಗೂ ಇ–ಶೌಚಾಲಯ ಸೇರಿ ಇತರ ಯೋಜನೆಗಳು ಆರಂಭದಲ್ಲಿಯೇ ವಿಫಲವಾಗಿವೆ. ನಗರದ 9 ಉದ್ಯಾನಗಳಲ್ಲಿ ಅಳವಡಿಸಿದ 18 ಇ–ಶೌಚಾಲಯ ನಿರ್ವಹಣೆಯ ಕೊರತೆಯಿಂದ ಅನೈರ್ಮಲ್ಯದ ತಾಣಗಳಾಗಿವೆ. ಇವುಗಳ ನಿರ್ವಹಣೆಗೆ ಸ್ವ–ಸಹಾಯ ಸಂಘದ ನೆರವು ಪಡೆಯುವಂತೆ ‘ಸ್ಮಾರ್ಟ್ ಸಿಟಿ’ ಮಹಾನಗರ ಪಾಲಿಕೆಗೆ ಪತ್ರ ಬರೆದಿದೆ.
‘ನಗರದ 20 ಸ್ಥಳಗಳಲ್ಲಿ ನಿರ್ಮಿಸಿದ ಶೌಚಾಲಯಗಳನ್ನು ಮುಂದಿನ ಐದು ವರ್ಷಗಳವರೆಗೆ ಗುತ್ತಿಗೆದಾರರೇ ನಿರ್ವಹಣೆ ಮಾಡುತ್ತಿದ್ದಾರೆ. ಇ–ಶೌಚಾಲಯದಲ್ಲಿ ಮಾತ್ರ ಸಮಸ್ಯೆ ಆಗಿದೆ. ಇವುಗಳ ನಿರ್ವಹಣೆಗೆ ಮಹಾನಗರ ಪಾಲಿಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತ ಎಂಬುದಾಗಿ ಸಲಹೆ ನೀಡಲಾಗಿದೆ’ ಎಂದು ‘ಸ್ಮಾರ್ಟ್‌ಸಿಟಿ’ ಮೂಲಗಳು ತಿಳಿಸಿವೆ.
ಮೊದಲ ಹಂತದಲ್ಲಿ 20 ಇ–ಆಟೊಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿತ್ತು. ಆಟೊಗಳ ಗುಣಮಟ್ಟದ ಬಗ್ಗೆ ಅನುಮಾನಗೊಂಡ ಚಾಲಕರು ಉತ್ಸುಕತೆ ತೋರಲಿಲ್ಲ. ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಬೈಸಿಕಲ್ ಶೇರಿಂಗ್ ಯೋಜನೆ ಸ್ಥಗಿತಗೊಳಿಸಲಾಗಿದೆ ಎಂದು ‘ಸ್ಮಾರ್ಟ್‌ಸಿಟಿ’ ತಿಳಿಸಿದೆ.
‘ಸ್ಮಾರ್ಟ್ ಸಿಟಿ’ ಯೋಜನೆಯ ಗಡುವು ಡಿಸೆಂಬರ್‌ವರೆಗೆ ವಿಸ್ತರಣೆಯಾಗಿದೆ. ಕೈಗೆತ್ತಿಕೊಂಡ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದುಜಿ.ಎಂ.ಗಂಗಾಧರಸ್ವಾಮಿ ಜಿಲ್ಲಾಧಿಕಾರಿ
ಪ್ರಗತಿಯಲ್ಲಿರುವ ಕಾಮಗಾರಿ ಸೆಪ್ಟೆಂಬರ್‌ಗೆ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ. ಹಸ್ತಾಂತರ ಸೇರಿ ಎಲ್ಲ ಪ್ರಕ್ರಿಯೆ ಡಿಸೆಂಬರ್‌ಗೆ ಮುಗಿಸಲಾಗುವುದುಎನ್.ಮಹಾಂತೇಶ್ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ‘ಸ್ಮಾರ್ಟ್ ಸಿಟಿ’
ಹಸ್ತಾಂತರಕ್ಕೆ ಬಾಕಿ ಇವೆ 16 ಕಾಮಗಾರಿ
‘ಸ್ಮಾರ್ಟ್ ಸಿಟಿ’ ಯೋಜನೆಯಡಿ ಅಭಿವೃದ್ಧಿಪಡಿಸಿದ 16 ಕಾಮಗಾರಿಗಳು ಮಹಾನಗರ ಪಾಲಿಕೆಗೆ ಹಸ್ತಾಂತರಗೊಳ್ಳಲು ಬಾಕಿ ಇವೆ. ಡಿಸೆಂಬರ್ ಹೊತ್ತಿಗೆ ಈ ಎಲ್ಲ ಕಾಮಗಾರಿಗಳನ್ನು ಮಹಾನಗರ ಪಾಲಿಕೆ ಸುಪರ್ದಿಗೆ ನೀಡಲಾಗುತ್ತದೆ. ‘ಸ್ಮಾರ್ಟ್ ಸಿಟಿ’ ಯೋಜನೆಯಡಿ ಕೈಗೆತ್ತಿಕೊಂಡ ಕಾಮಗಾರಿಗಳಲ್ಲಿ ಬಹುತೇಕವು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುತ್ತವೆ. ಮಹಾನಗರ ಪಾಲಿಕೆಗೆ ಒಪ್ಪಿಸಬಹುದಾದ 72 ಕಾಮಗಾರಿಗಳನ್ನು ‘ಸ್ಮಾರ್ಟ್ ಸಿಟಿ’ ಪಟ್ಟಿ ಸಿದ್ಧಪಡಿಸಿದೆ. ಇದರಲ್ಲಿ 54ಕ್ಕೂ ಹೆಚ್ಚು ಕಾಮಗಾರಿಗಳನ್ನು ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಆರೋಗ್ಯ ಶಿಕ್ಷಣ ತೋಟಗಾರಿಕೆ ಯುವಜನ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ದಾವಣಗೆರೆ ವಿಶ್ವವಿದ್ಯಾಲಯಗಳು ಕೂಡ ತಮ್ಮ ಸುಪರ್ದಿಗೆ ಕಾಮಗಾರಿ ಪಡೆದುಕೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.