ದಾವಣಗೆರೆ: ಪ್ರತಿಷ್ಠಿತ ಬಡಾವಣೆಗಳು, ಶಾಲೆ– ಕಾಲೇಜುಗಳು, ರಿಂಗ್ ರಸ್ತೆ, ರಾಷ್ಟ್ರೀಯ ಹೆದ್ದಾರಿ, ಮಾರುಕಟ್ಟೆಯಂತಹ ಜನನಿಬಿಡ ಪ್ರದೇಶ, ಆಟದ ಮೈದಾನಗಳು ಹಾಗೂ ಆಸ್ಪತ್ರೆಗಳೇ ಸಾಲುಸಾಲಾಗಿರುವ ಪಿ.ಜೆ. ಬಡಾವಣೆ ಸೇರಿದಂತೆ ನಗರದ ವಿವಿಧೆಡೆ ಇರುವ ಪ್ರಮುಖ ಪ್ರದೇಶಗಳಲ್ಲಿನ ಬಹುತೇಕ ಬೀಡಾ, ಪೆಟ್ಟಿಗೆ ಅಂಗಡಿ, ಚಿಕ್ಕಪುಟ್ಟ ಹೋಟೆಲ್‌ಗಳ ಹಿಂಭಾಗದಲ್ಲಿ ಸಿಗರೇಟು ಸೇದಿಸುವುದಕ್ಕೆಂದೇ ಪ್ರತ್ಯೇಕ ‘ಅಡ್ಡೆ’ಗಳನ್ನು ನಿರ್ಮಿಸಲಾಗಿದೆ.
ಬೆಳಿಗ್ಗೆ 7ರಿಂದ ರಾತ್ರಿ 10– 11ರವರೆಗೆ ಈ ಅಡ್ಡೆಗಳಲ್ಲಿ ಹೈಸ್ಕೂಲು, ಪಿಯುಸಿ, ಪದವಿ ಓದುವವರು ಅದರಲ್ಲೂ ವಿಶೇಷವಾಗಿ ಎಂಜಿನಿಯರಿಂಗ್, ಮೆಡಿಕಲ್ ವಿದ್ಯಾರ್ಥಿಗಳು ಹಿಂದಿಯ ‘ಧಮ್ ಮಾರೋ ಧಮ್’ ಹಾಡನ್ನು ನೆನಪಿಗೆ ತರುವಂತೆ ಸಿಗರೇಟು ಸೇದುವುದರಲ್ಲಿ ತಲ್ಲೀನರಾಗಿರುತ್ತಾರೆ.
ಇತ್ತೀಚಿನ ದಶಕಗಳಲ್ಲಿ ದಾವಣಗೆರೆ ನಗರ ವಿದ್ಯಾ ಕೇಂದ್ರವಾಗಿ ಬದಲಾಗಿದೆ. ಇಲ್ಲಿ ಕೆ.ಜಿ.ಯಿಂದ ಪಿ.ಜಿ.ವರೆಗೆ ಶಿಕ್ಷಣ ಲಭ್ಯವಿದೆ. ಸುತ್ತಮುತ್ತಲಿನ ಜಿಲ್ಲೆಗಳಿಂದಲೂ, ಉತ್ತರ ಭಾರತದ ರಾಜ್ಯಗಳೂ ಸೇರಿ ನೆರೆಹೊರೆಯ ರಾಜ್ಯಗಳಿಂದಲೂ ವಿದ್ಯಾರ್ಥಿಗಳು ಎಂಜಿನಿಯರಿಂಗ್, ಡಿಪ್ಲೊಮಾ, ಮೆಡಿಕಲ್, ನರ್ಸಿಂಗ್ ಸೇರಿದಂತೆ ಇತರ ಶಿಕ್ಷಣ ಪಡೆಯಲು ಇಲ್ಲಿನ ಕಾಲೇಜುಗಳಿಗೆ ಪ್ರವೇಶ ಪಡೆಯುತ್ತಾರೆ. ಅಂಥವರ ಸಂಖ್ಯೆಯೇ 15ರಿಂದ 20 ಸಾವಿರದಷ್ಟಿದೆ. ಇಂತಿಪ್ಪ ವಿದ್ಯಾ ಕೇಂದ್ರಗಳ ಸುತ್ತಮುತ್ತ ‘ಪ್ರಮುಖ ಆಕರ್ಷಣೆ’ ಎಂಬಂತೆ ಮಾದಕ ವ್ಯಸನವನ್ನು ಅಂಟಿಸುವ ‘ಅಡ್ಡೆ’ಗಳು ಕೈಬೀಸಿ ಕರೆಯುತ್ತಿವೆ.
‘ಮಕ್ಕಳು ಓದಿ ವಿದ್ಯಾವಂತರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ, ಕೈತುಂಬ ಸಂಬಳ ಬರುವ ಉದ್ಯೋಗ ಸಂಪಾದಿಸಲಿ’ ಎಂಬ ಕನಸಿನೊಂದಿಗೆ ಪಾಲಕರು ಹಣ ಖರ್ಚು ಮಾಡಿ ಮಕ್ಕಳನ್ನು ಇಲ್ಲಿನ ಶಿಕ್ಷಣ ಸಂಸ್ಥೆಗಳಿಗೆ, ಹಾಸ್ಟೆಲ್‌ಗಳಿಗೆ ಸೇರಿಸುತ್ತಿದ್ದಾರೆ. ಆದರೆ, ಅನೇಕರು ದುಶ್ಚಟಗಳ ದಾಸರಾಗುತ್ತ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದು ಕೆಲವು ಹಿರಿಯರು ‘ಪ್ರಜಾವಾಣಿ’ಗೆ ತಿಳಿಸಿದರು.
‘ನನಗೆ ಸಿಗರೇಟು ಸೇದುವ ಚಟವಿದೆ. ಪ್ರಮುಖ ರಸ್ತೆಯೊಂದರಲ್ಲಿರುವ ಚಹದಂಗಡಿಗಳ ಹಿಂದೆ ಪ್ರತ್ಯೇಕವಾಗಿ ನಿರ್ಮಿಸಿರುವ ಇಂಥ ಅಡ್ಡೆಗಳ ಒಳಗೆ ಹೋದರೆ ಚಿಕ್ಕಚಿಕ್ಕ ಹುಡುಗರು ಸ್ಟೈಲಿಶ್ ಆಗಿ ಸಿಗರೇಟು ಸೇದುವುದನ್ನು ನೋಡಿದರೆ ಹಿರಿಯನಾದ ನನಗೆ ಅವರೆದುರು ಕುಳಿತು ಸೇದುವುದಕ್ಕೆ ಮುಜುಗರವಾಗುತ್ತದೆ. ಹೊರಗಡೆ ಬೈಕ್ ನಿಲ್ಲಿಸಿ, ಅವುಗಳ ಮೇಲೆ ನೋಟ್ ಬುಕ್, ಬುಕ್ಸ್ ಇರಿಸಿ ಒಳಗೆ ಬಿನ್‌ದಾಸ್ ಆಗಿ ಕುಳಿತಿರುವುದು ಸಹಜ ಎಂಬಂತೆ ಕಣ್ಣಿಗೆ ರಾಚುತ್ತದೆ. ಇಷ್ಟು ಮಾತ್ರವಲ್ಲದೆ ಮದ್ಯದ ಅಂಗಡಿಗಳ ಎದುರು, ಬಾರ್, ರೆಸ್ಟೋರಂಟ್‌ಗಳ ಒಳಗೆ ಹದಿಹರೆಯದ ವಿದ್ಯಾರ್ಥಿಗಳ ದಂಡೇ ಕಾಣಸಿಗುತ್ತದೆ. ಯುವಸಮೂಹ ಈ ರೀತಿ ದುಶ್ಚಟಗಳ ದಾಸರಾಗುತ್ತಿದ್ದರೂ ನಿಯಂತ್ರಣಕ್ಕೆ ಕ್ರಮ ಆಗದಿರುವುದು ಸೋಜಿಗ ಮೂಡಿಸುತ್ತದೆ’ ಎಂದು ಎಂಸಿಸಿ ‘ಬಿ’ ಬ್ಲಾಕ್ ನಿವಾಸಿಗಯಾಗಿರುವ ಸರ್ಕಾರಿ ನೌಕರಿಯಲ್ಲಿದ್ದು ನಿವೃತ್ತರಾಗಿರುವ ಹಿರಿಯರೊಬ್ಬರು ಬೇಸರದಿಂದ ಹೇಳಿದರು.
‘ನಗರದಲ್ಲಿ ಹಗಲು– ರಾತ್ರಿ ಎನ್ನದೇ ಅತಿ ವೇಗದಿಂದ ಬೈಕ್, ಸ್ಕೂಟಿ ಒಳಗೊಂಡ ದ್ವಿಚಕ್ರ ವಾಹನಗಳನ್ನು ಓಡಿಸುತ್ತ ಅಪಘಾತಕ್ಕೀಡಾಗಿ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಂಥವರಲ್ಲಿ ಹದಿ ಹರೆಯದ ಯುವಕರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಸಿಗರೇಟು, ಗುಟ್ಕಾ ಮಾತ್ರವಲ್ಲ ಅನೇಕರು ಮದ್ಯದ ನಶೆಯಲ್ಲೇ ಅಪಘಾತಕ್ಕೆ ಈಡಾಗುತ್ತಿದ್ದರೂ ಅದರ ತಡೆಗೆ ಕ್ರಮಗಳಾಗುತ್ತಿಲ್ಲ’ ಎಂದು ಬಿಐಟಿ ರಸ್ತೆಯಲ್ಲಿರುವ ಕಾಲೇಜೊಂದರ ಉಪನ್ಯಾಸಕರೊಬ್ಬರು ನೊಂದು ನುಡಿದರು.
‘ಪಾಲಕರೂ ಮಕ್ಕಳ ಚಲನಚಲನದ ಮೇಲೆ ನಿಗಾ ಇರಿಸಬೇಕಿದೆ. ಖರ್ಚಿಗೆ ಕೈಗೆ ಸಿಕ್ಕಷ್ಟು ದುಡ್ಡುಕೊಟ್ಟು ಸುಮ್ಮನಿರದೆ ಮಕ್ಕಳು ಆ ದುಡ್ಡನ್ನು ಎಲ್ಲಿ ಖರ್ಚು ಮಾಡುತ್ತಿದ್ದಾರೆ? ಶಾಲೆ– ಕಾಲೇಜಿಗೆ ತಪ್ಪದೇ ಹಾಜರಾಗುತ್ತಿದ್ದಾರೋ ಇಲ್ಲವೋ? ದಾರಿ ತಪ್ಪಿದ್ದಾರೋ ಅಥವಾ ಸರಿದಾರಿಯಲ್ಲೇ ಸಾಗುತ್ತೊದ್ದಾರೋ? ದುಷ್ಟರ ಸಹವಾಸ ಮಾಡಿದ್ದಾರೋ? ಎಂಬ ಬಗ್ಗೆ ಗಮನ ಹರಿಸುವ ಕರ್ತವ್ಯ ತಂದೆ– ತಾಯಿಯರದ್ದಾಗಿದೆ. ಹದಿ ವಯಸಿನಲ್ಲಿ ಹಾಳಾಗುವುದಕ್ಕೆ ಸಾಕಷ್ಟು ಅವಕಾಶಗಳಿರುತ್ತವೆ. ಆ ಕುರಿತು ಪಾಲಕರೂ ಎಚ್ಚರ ವಹಿಸಬೇಕು’ ಎಂದು ಅವರು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.