
ಹರಿಹರ: ‘ಸಮಾಜವಾದಿ ಸಿದ್ಧಾಂತವನ್ನು ಅಧ್ಯಯನ ಮಾಡಿದರೆ ಇಂದಿನ ರಾಜಕಾರಣಿಗಳು ಜನಮುಖಿಯಾಗಿ ಆಡಳಿತ ನೀಡಲು ಸಾಧ್ಯ’ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ ಹೇಳಿದರು.
ಹೊರವಲಯದ ಮೈತ್ರಿವನದಲ್ಲಿ ಸಮಾಜವಾದಿ ಪಾರ್ಟಿ ಹಾಗೂ ಕರ್ನಾಟಕ ಸೋಷಿಯಲಿಸ್ಟ್ ಫೋರಂನಿಂದ ಶನಿವಾರ ಆಯೋಜಿಸಿದ್ದ ‘ಪ್ರಜಾಪ್ರಭುತ್ವದಲ್ಲಿ ಸಮಾಜವಾದ– ಇಂದಿನ ಸ್ಥಿತಿಗತಿ’ ಕುರಿತ ವಿಚಾರ ಸಂಕಿರಣ ಹಾಗೂ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರಜಾಪ್ರಭುತ್ವ ಮತ್ತು ಸಮಾಜವಾದಿ ಚಿಂತನೆಗಳೆರಡೂ ಒಂದಕ್ಕೊಂದು ಸಾಮ್ಯತೆ ಹೊಂದಿವೆ. ಈಗಿನ ರಾಜಕಾರಣಿಗಳಿಗೆ ಸಮಾಜವಾದಿ ಸಿದ್ಧಾಂತ, ಚಳವಳಿಗಾರರ ಹೆಸರುಗಳೇ ಗೊತ್ತಿಲ್ಲ. ಸಮಾಜವಾದಿ ಸಿದ್ಧಾಂತ ಹಾಗೂ ಆ ಸಿದ್ಧಾಂತವನ್ನು ಅನುಸರಿಸಿದ ನಾಯಕರ ಕುರಿತು ಅಧ್ಯಯನ ಮಾಡಿದರೆ ಆಡಳಿತ ನಡೆಸುತ್ತಿರುವವರು ಹೆಚ್ಚು ಜನಮುಖಿಯಾಗಿ ಆಡಳಿತ ನೀಡಲು ಸಾಧ್ಯವಿದೆ’ ಎಂದರು.
‘ರಾಮ ಮನೋಹರ ಲೋಹಿಯ ಅವರ ಸಮಾಜವಾದಿ ಚಳವಳಿಯನ್ನು ರಾಜ್ಯದಲ್ಲಿ ಪಸರಿಸಿದ ಶಾಂತವೇರಿ ಗೋಪಾಲ ಗೌಡರೊಂದಿಗೆ ಕ್ರೀಯಾಶೀಲರಾಗಿ ಭಾಗವಹಿಸಿದ್ದ ಜೆ.ಎಚ್.ಪಟೇಲ್, ಎಸ್.ಬಂಗಾರಪ್ಪ, ಎಸ್.ಎಂ.ಕೃಷ್ಣ, ದೇವರಾಜ ಅರಸ್ ರಾಜ್ಯದ ಮುಖ್ಯಮಂತ್ರಿಗಳಾಗಿ ಪ್ರಭಾವಿಯಾಗಿ ಆಡಳಿತ ನೀಡಿದರು’ ಎಂದು ಹೇಳಿದರು.
‘ರಾಜ್ಯದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಿಗೆ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ತಡವಾಗಿ ಚುನಾವನೆ ನಡೆಸಿತ್ತು. ಅದನ್ನೇ ಈಗಿನ ಕಾಂಗ್ರೆಸ್ ನೇತೃತ್ವದ ಸರ್ಕಾರವೂ ಮುಂದುವರಿಸಿದೆ. ಇದು ಅಧಿಕಾರ ವಿಕೇಂದ್ರೀಕರಣ ತತ್ವಕ್ಕೆ ವಿರುದ್ಧವಾಗಿದ್ದು, ಗ್ರಾಮೀಣ ಭಾಗದ ಧ್ವನಿ ಅಡಗಿಸುವ ತಂತ್ರವಾಗಿದೆ’ ಎಂದು ಅಧ್ಯಕ್ಷತೆವಹಿಸಿದ್ದ ಸಮಾಜವಾದಿ ಪಾರ್ಟಿ ರಾಜ್ಯ ಘಟಕದ ಅಧ್ಯಕ್ಷ ಮಂಜಪ್ಪ ಎನ್. ಆರೋಪಿಸಿದರು.
ಎಐಟಿಯುಸಿ ರಾಜ್ಯ ಘಟಕದ ಕಾರ್ಯದರ್ಶಿ ಆವರಗೆರೆ ಚಂದ್ರು, ರಾಜನಹಳ್ಳಿ ಮಂಜುನಾಥ್, ಬಿ.ಜಿ.ಶಂಕರರಾವ್ ನಾಡೀಗರ್, ಎಚ್.ವೆಂಕಟೇಶ್ ಮಾತನಾಡಿದರು.
ಸಮಾಜವಾದಿ ಪಾರ್ಟಿಯ ಮುಖಂಡರಾದ ದಾವಣಗೆರೆ ಶಿವಾನಂದಪ್ಪ, ರವಿಕುಮಾರ್, ಕಲಬುರಗಿಯ ರವೀಂದ್ರ, ಜಯಶ್ರೀ, ಚಿತ್ರದುರ್ಗದ ಲಕ್ಷ್ಮಿಕಾಂತ್, ಮೊಳಕಾಲ್ಮುರು ಜಯಣ್ಣ, ಮುದ್ದಾಪುರದ ರಹಮಾನ್‌ಸಾಬ್, ಲೋಕಿಕೆರೆ ಅಂಜಿನಪ್ಪ ಹಾಗೂ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಪ್ರತಿನಿಧಿಗಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.