
ಜಗಳೂರು: ಹರಿಹರದಲ್ಲಿ ಜನವರಿ 15ರಂದು ಜರುಗಲಿರುವ ಹರ ಜಾತ್ರಾ ಮಹೋತ್ಸವದಲ್ಲಿ ರಾಜ್ಯದ ವಿವಿಧೆಡೆಯಿಂದ 25 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ವೀರಶೈವ ಪಂಚಮಸಾಲಿ ಸಮುದಾಯದ ರಾಜ್ಯ ಘಟಕದ ಅಧ್ಯಕ್ಷ ಸೋಮನಗೌಡ ಪಾಟೀಲ್ ಹೇಳಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಹರ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಜಾತ್ರೆಯಲ್ಲಿ ನಡೆಯುವ ದಾಸೋಹಕ್ಕಾಗಿ ವೀರಶೈವ ಪಂಚಮಸಾಲಿ ಸಮುದಾಯದಿಂದ 50 ಸಾವಿರ ರೊಟ್ಟಿ, ಅಕ್ಕಿ ಹಾಗೂ ದವಸ ಧಾನ್ಯಗಳನ್ನು ಭಕ್ತರು ಒದಗಿಸುತ್ತಿದ್ದಾರೆ. ಮಠದ ಆವರಣದಲ್ಲಿ ₹50 ಕೋಟಿ ವೆಚ್ಚದಲ್ಲಿ ಧ್ಯಾನ, ದಾಸೋಹ ಮಂದಿರ ಮತ್ತು ವಸತಿಗೆ ಕೊಠಡಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಮಕರ ಸಂಕ್ರಮಣದಂದು ನಡೆಯುವ ವಿಶೇಷ ಜಾತ್ರೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮಹಿಳಾ ವಿಭಾಗದ ರಾಜ್ಯ ಘಟಕದ ಅಧ್ಯಕ್ಷೆ ರಶ್ಮಿ ನಾಗರಾಜ್ ಹೇಳಿದರು.
ವೀರಶೈವ ಪಂಚಮಸಾಲಿ ಸಮುದಾಯದ ತಾಲ್ಲೂಕು ಘಟಕದ ಅಧ್ಯಕ್ಷ ಯು.ಜಿ.ಶಿವಕುಮಾರ್, ಮುಖಂಡರಾದ ಅಜ್ಜಪ್ಪ ನಾಡಿಗರ್, ಮಲ್ಲಿನಾಥ್, ಹೊಸಕೆರೆ ಮುಕುಂದ, ಶಂಭುಲಿಂಗಪ್ಪ, ಗಡಿಮಾಕುಂಟೆ ಸಿದ್ದೇಶ್, ಎಂ.ಎಸ್. ಪಾಟೀಲ್ ಹಾಗೂ ಇನ್ನಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.