ADVERTISEMENT

ಹಿಮೋಫಿಲಿಯಾ ರೋಗಿಗಳ ನೆರವಿಗೆ ಮಿಡಿದಿದ್ದ ಎಸ್‌ಪಿಬಿ

ದಾವಣಗೆರೆಯಲ್ಲಿ ಸ್ವರ ಮಾಂತ್ರಿಕನ ನೆನಪು

ಡಿ.ಕೆ.ಬಸವರಾಜು
Published 26 ಸೆಪ್ಟೆಂಬರ್ 2020, 2:58 IST
Last Updated 26 ಸೆಪ್ಟೆಂಬರ್ 2020, 2:58 IST
ದಾವಣಗೆರೆಯ ಹಿಮೋಫಿಲಿಯಾ ಸೊಸೈಟಿಗೆ ಭೇಟಿ ನೀಡಿದ್ದ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರು ಹಿಮೋಫಿಲಿಯಾಪೀಡಿತ ಬಾಲಕನಿಗೆ ಹಸ್ತಲಾಘವ ಮಾಡಿದರು.
ದಾವಣಗೆರೆಯ ಹಿಮೋಫಿಲಿಯಾ ಸೊಸೈಟಿಗೆ ಭೇಟಿ ನೀಡಿದ್ದ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರು ಹಿಮೋಫಿಲಿಯಾಪೀಡಿತ ಬಾಲಕನಿಗೆ ಹಸ್ತಲಾಘವ ಮಾಡಿದರು.   

ದಾವಣಗೆರೆ: ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರ ಸ್ವರ ಮಾಧುರ್ಯ ಹಿಮೋಫಿಲಿಯಾ ರೋಗಿಗಳ ಬಾಳಲ್ಲಿ ಬೆಳಕು ಮೂಡಿಸಿದೆ. ಅವರ ಸ್ವರ ಹಾಗೂ ಹೃದಯದ ಮಿಡಿತ ಒಂದು ಸಂಸ್ಥೆಯ ಹುಟ್ಟಿಗೆ ಕಾರಣವಾಗಿದೆ.

ಇಲ್ಲಿನ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಕಟ್ಟುವಲ್ಲಿ ಅವರು ಪ್ರಮುಖ ಪಾತ್ರವಿದೆ. ಐದು ಮೆಗಾ ಇವೆಂಟ್‌ಗಳನ್ನು ಮಾಡುವ ಮೂಲಕ ಸಂಸ್ಥೆ ಕಟ್ಟುವಲ್ಲಿ ನೆರವಾಗಿದ್ದಾರೆ.

ಸ್ವತಃ ಹಿಮೋಫಿಲಿಯಾ ರೋಗಿಯೂ ಆಗಿರುವ ಡಾ.ಸುರೇಶ್ ಹನಗವಾಡಿ 1994ರಲ್ಲಿ ಅವರ ಮನೆಯಲ್ಲಿಯೇ ಚಿಕಿತ್ಸೆ ಆರಂಭಿಸಿದರು. 1996ರಲ್ಲಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಒಂದು ತಂಡ ರಚಿಸಿ ಹಾಡುವ ಮೂಲಕ ಹಣ ಸಂಗ್ರಹಿದಾಗ ಮನೆಯಲ್ಲಿ ನಡೆಯುತ್ತಿದ್ದ ಸೊಸೈಟಿ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರವಾಯಿತು. ಆದರೆ 1999ರಲ್ಲಿ ಎಸ್‌ಪಿಬಿ ಅವರು ಕಾರ್ಯಕ್ರಮ ನೀಡಿದ್ದು ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ದೊಡ್ಡಮಟ್ಟಕ್ಕೆ ಬೆಳೆಯಲು ಕಾರಣವಾಯಿತು.

ADVERTISEMENT

’ವಿಶ್ವ ಹಿಮೋಫಿಲಿಯಾ ದಿನಾಚರಣೆಗೆ ದಾವಣಗೆರೆಗೆ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲು ವಿದ್ಯಾರ್ಥಿಗಳ ತಂಡವೊಂದು ಎಸ್‌ಪಿಬಿ ಅವರ ಬಳಿ ಹೋಯಿತು. ಕೇವಲ 10 ನಿಮಿಷ ಸಮಯ ಕೊಟ್ಟಿದ್ದ ಅವರು ಸೊಸೈಟಿಯ ಧ್ಯೇಯೋದ್ದೇಶಗಳ ಬಗ್ಗೆ ಹೇಳುತ್ತಿದ್ದಂತೆಯೇ ಸ್ಫೂರ್ತಿಗೊಂಡರು. ‘ನಾನು ಮುಖ್ಯ ಅತಿಥಿಗಳಾಗಿ ಬಂದರೆ ನಿಮಗೆ ಏನು ಪ್ರಯೋಜನವಾಗುತ್ತದೆ? ಅದರ ಬದಲು ನನಗೆ ಹಾಡಲು ಅವಕಾಶ ಕೊಡಿ’ ಎಂದು ಕೇಳಿದರು. ಒಂದು ಪೈಸೆಯೂ ಬೇಡ ಎಂದು ಉಚಿತವಾಗಿ ಕಾರ್ಯಕ್ರಮಕ್ಕೆ ಒಪ್ಪಿಕೊಂಡರು’ ಎಂದು ಸೊಸೈಟಿ ಅಧ್ಯಕ್ಷ ಡಾ.ಸುರೇಶ್ ಹನಗವಾಡಿ ನೆನಪಿಸಿಕೊಂಡರು.

‘1999ರ ಏಪ್ರಿಲ್ 18ರಂದು ಎಸ್‌ಪಿಬಿ ಅವರಿಗೆ ಸೇಲಂನಲ್ಲಿ ಬೇರೊಂದು ಕಾರ್ಯಕ್ರಮ ನಿಗದಿಯಾಗಿತ್ತು. ಸೆ.17ರಂದು ನಮ್ಮ ಕಾರ್ಯಕ್ರಮ ಮುಂದೂಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಅಂದೇ ಏಕೆ ಕಾರ್ಯಕ್ರಮ ಮಾಡಬೇಕು ಎಂದು ನಮ್ಮನ್ನು ಪ್ರಶ್ನಿಸಿದರು. ’ವಿಶ್ವ ಹಿಮೋಫಿಲಿಯಾ ದಿನ‘ ಎಂದು ಹೇಳಿದಾಗ, ‘ಕಾರ್ಯಕ್ರಮ ಮುಂದೂಡಬೇಡಿ, ಅಂದೇ ಹಾಡುತ್ತೇನೆ’ ಎಂದು ಕಾರ್ಯಕ್ರಮ ನಡೆಸಿಕೊಟ್ಟರು. ಅದರಲ್ಲಿ ಬಂದ ಹಣದಿಂದ ಹಿಮೋಫಿಲಿಯಾ ಸೊಸೈಟಿ ಕಟ್ಟಿದೆವು. ಕಿರುವಾಡಿ ಜಯಮ್ಮ ಅವರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಕೊಡಿಸಿದ್ದರು. ಎಸ್‌ಪಿಬಿ ಅವರೇ ಶಂಕು ಸ್ಥಾಪನೆ ನರೆವೇರಿಸಿದ್ದರು’ ಎಂದು ಸುರೇಶ್‌ ಹನಗವಾಡಿ ಸ್ಮರಿಸಿಕೊಂಡರು.

‘ಆನಂತರ 2001ರಲ್ಲಿ ಹಿಮೋಫಿಲಿಯಾ ಕುರಿತ ಕಾರ್ಯಾಗಾರದಲ್ಲೂ ಭಾಗವಹಿಸಿ ಗಾಯನ ನಡೆಸಿಕೊಟ್ಟರು. 2005ರಲ್ಲಿ ಹುಬ್ಬಳ್ಳಿಯಲ್ಲಿ, 2010ರಲ್ಲಿ ದಾವಣಗೆರೆಯ ಶಿವಯೋಗಿ ಮಂದಿರದಲ್ಲಿ ಹಾಗೂ 2015ರಲ್ಲಿ ಚಿತ್ರದುರ್ಗದಲ್ಲಿ ಕಾರ್ಯಕ್ರಮ ನಡೆಸಿಕೊಡುವ ಮೂಲಕ ನಮ್ಮ ಸಂಸ್ಥೆಗೆ ನೆರವಾಗಿದ್ದರು. ಹಂಸಲೇಖ ಅವರು ಹಿಮೋಫಿಲಿಯಾ ಕುರಿತು ರಚಿಸಿದ್ದ ಹಾಡುಗಳನ್ನು ಎಸ್‌ಪಿಬಿ ತಮ್ಮ ಕಂಠಸಿರಿಯಲ್ಲಿ ಹಾಡಿದ್ದರು. ಸೊಸೈಟಿ ಕಟ್ಟಡ ಅರ್ಧಕ್ಕೆ ನಿಂತಾಗ ದಾನಿಗಳಿಂದ ಮನವಿ ಮಾಡಿ ಹಣ ಕೊಟ್ಟಿದ್ದರು. ಸಂಸ್ಥೆಯ ಅಡಿಪಾಯವೇ ಎಸ್‌ಪಿ ಬಾಲಸುಬ್ರಹ್ಮಣ್ಯಂ’ ಎಂದು ನೆನಪಿಸಿಕೊಂಡರು.

‘2020ರ ಜನವರಿ ತಿಂಗಳಲ್ಲಿ ಹಿಮೋಫಿಲಿಯಾ ಸೊಸೈಟಿಯಲ್ಲಿ ಹೈಡ್ರೋಥೆರಪಿ ಪೂಲ್‌ನ ಉದ್ಘಾಟನೆ ನೆರವೇರಿಸಿ, ಹಿಮೋಫಿಲಿಯಾ ರೋಗಿಗಳ ಜೊತೆ ಸಮಯ ಕಳೆದಿದ್ದರು. ‘ನನಗೀಗ 74 ವರ್ಷ. ಇನ್ನೂ 5 ವರ್ಷ ಚುರುಕಾಗಿರಬಲ್ಲೆ. ನನ್ನಿಂದ ಏನು ಸಹಾಯ ಬೇಕೋ ಅಷ್ಟು ಪಡೆದುಕೊಳ್ಳಿ’ ಎಂದಿದ್ದರು’ ಎಂದು ಸ್ಮರಿಸಿಕೊಂಡರು.

ಸೋಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಗಾಯನ:2020ರ ಜನವರಿ 12ರಂದು ಸೋಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ‘ಸೋಮೇಶ್ವರೋತ್ಸ’ವದ ಅಂಗವಾಗಿ ಆಯೋಜಿಸಿದ್ದ ಸಂಗೀತೋತ್ಸವದಲ್ಲಿ ಎಸ್‌ಪಿಬಿ ಹಾಡಿ ಮೋಡಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.