ADVERTISEMENT

ದಾವಣಗೆರೆ: ಅತಿಥಿ ಉಪನ್ಯಾಸಕರಿಗೆ ವಿಶೇಷ ಪ್ಯಾಕೇಜ್ ಘೋಷಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 12:50 IST
Last Updated 13 ಜುಲೈ 2020, 12:50 IST

ದಾವಣಗೆರೆ: ಅಸಂಘಟಿತ ವಲಯಗಳಿಗೆ ಪ್ಯಾಕೇಜ್ ಘೋಷಿಸಿದಂತೆ ಶಿಕ್ಷಕ ವರ್ಗಕ್ಕೂ ಪರಿಹಾರ ನೀಡಬೇಕು. ಲಾಕ್‍ಡೌನ್ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸಿ ಅತಿಥಿ ಉಪನ್ಯಾಸಕರಿಗೂ ಮತ್ತು ಖಾಸಗಿ ಶಾಲೆ ಶಿಕ್ಷಕರಿಗೆ 12 ತಿಂಗಳ ವೇತನ ನೀಡಬೇಕು ಎಂದು ಸರ್ಕಾರಿ ಪದವಿ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಕೊಟ್ರೇಶ್ ಆಗ್ರಹಿಸಿದರು.

‘ರಾಜ್ಯದಲ್ಲಿ 412ಕ್ಕೂ ಹೆಚ್ಚು ಪ್ರಥಮದರ್ಜೆ ಕಾಲೇಜುಗಳು ಇದ್ದು, 14,500ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜದಲ್ಲಿ ಗೌರವ ಸ್ಥಾನದಲ್ಲಿರುವ ಶಿಕ್ಷಕ ವರ್ಗವನ್ನು ಅತ್ಯಂತ ಗೌರವದಿಂದ ಕಾಣಬೇಕಾಗಿರುವುದು ಸರ್ಕಾರದ ಕರ್ತವ್ಯ. ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರು ಇಂದು ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ನಿಯಮಾನುಸಾರ ವೈದ್ಯಕೀಯ ಸೌಲಭ್ಯ, ಭವಿಷ್ಯ ನಿಧಿ ನೀಡಬೇಕು ಹಾಗೂ ಉದ್ಯೋಗ ಭದ್ರತೆ ಒದಗಿಸಬೇಕು’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಕೊರೊನಾದಿಂದ ಉಂಟಾದ ಆರ್ಥಿಕ ಸಂಕಷ್ಟದಿಂದ ರಾಜ್ಯದಲ್ಲಿ 8 ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ದರಿಂದ ಹೊರ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭದ್ರತೆ ಕಲ್ಪಿಸಿದ್ದು, ವೇತನ ಹೆಚ್ಚಳ ಮಾಡಲಾಗಿದೆ. ಅದೇ ರೀತಿ ರಾಜ್ಯದಲ್ಲೂ ಮಾಡಬೇಕು ಎಂದು ಒತ್ತಾಯಿಸಿದ ಅವರು, ವಿಶೇಷ ಪ್ಯಾಕೇಜ್ ನೀಡುವಂತೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಪ್ರದೇಶ ಕಾಂಗ್ರೆಸ್‍ನ ಶಿಕ್ಷಕರ ಮತ್ತು ಪದವೀಧರರ ವಿಭಾಗದ ಜಿಲ್ಲಾಧ್ಯಕ್ಷ ಎಸ್.ಎಸ್. ಗಿರೀಶ್ ಮಾತನಾಡಿ, ‘ಕೋರೋನಾ ವೈರಸ್‍ನ ಕಾರಣದಿಂದಾಗಿ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳ ಅತಿಥಿ ಶಿಕ್ಷಕರು ಹಾಗೂ ಉಸನ್ಯಾಸಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ ಆದ್ದರಿಂದ ಮುಖ್ಯಮಂತ್ರಿಗಳು ವಿಶೇಷ ಪ್ಯಾಕೇಜ್ ಮೂಲಕ ನೆರವು ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಕಂಕಣ ಬದ್ದರಾಗಿರುವ ಶಿಕ್ಷಕ ವರ್ಗ ಕೋರೋನಾದಿಂದಾಗಿ ಸಂಕಷ್ಟದಲ್ಲಿದೆ. ಮಕ್ಕಳ ಸುಂದರ ಜೀವನಕ್ಕೆ ಭದ್ರ ಅಡಿಪಾಯ ಹಾಕುತ್ತಾ ಅವರನ್ನು ಸಮಾಜದ ಸತ್ಪ್ರಜೆಗಳನ್ನಾಗಿ ರೂಪಿಸುತ್ತಿರುವ ಶಿಕ್ಷಕ ವರ್ಗ ಇಂದು ಬೀದಿಗೆ ಬಂದು ನಿಂತಿದ್ದಾರೆ. ಹೊಟ್ಟೆಪಾಡಿಗಾಗಿ ತರಕಾರಿ ಮಾರುತ್ತಾ, ಕೂಲಿ ಸೇರಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದಾರೆ ಕಳೆದ ಮಾರ್ಚ್‍ನಿಂದಲೂ ಶಾಲಾ-ಕಾಲೇಜುಗಳು ಮುಚ್ಚಿರುವುದರಿಂದ ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಸರ್ಕಾರ ಕನಿಷ್ಠ ಸೌಲಭ್ಯವನ್ನೂ ನೀಡಿಲ್ಲ’ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮೊಹಮದ್ ಮುಜಾಹಿದ್, ಪ್ರವೀಣ್ ಕುಮಾರ್, ತಿಪ್ಪೇಸ್ವಾಮಿ, ಅರುಣ್‌ಕುಮಾರ್, ಸಂತೋಷ್, ಶ್ರೀನಿವಾಸ್, ನವೀನ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.