ADVERTISEMENT

ದಾವಣಗೆರೆ: ಭಿಕ್ಷೆಯ ಹಣದಲ್ಲಿ ಸಮಾಜಕ್ಕೆ ಅಳಿಲು ಸೇವೆ

ಜಿಲ್ಲೆಯ ಸವಳಂಗ ಗ್ರಾಮದ ವಾಸಿ ಲಿಂಗತ್ವ ಅಲ್ಪಸಂಖ್ಯಾತೆ ಮಂಜಮ್ಮ ಕಾಳಜಿ

ಅನಿತಾ ಎಚ್.
Published 28 ಫೆಬ್ರುವರಿ 2025, 7:08 IST
Last Updated 28 ಫೆಬ್ರುವರಿ 2025, 7:08 IST
ದಾವಣಗೆರೆ ಜಿಲ್ಲೆಯ ಸವಳಂಗ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಲಿಂಗತ್ವ ಅಲ್ಪಸಂಖ್ಯಾತೆ ಮಂಜಮ್ಮ ಅವರು ಈಚೆಗೆ 100 ಊಟದ ತಟ್ಟೆಗಳನ್ನು ಕೊಡುಗೆಯಾಗಿ ನೀಡಿದರು
ದಾವಣಗೆರೆ ಜಿಲ್ಲೆಯ ಸವಳಂಗ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಲಿಂಗತ್ವ ಅಲ್ಪಸಂಖ್ಯಾತೆ ಮಂಜಮ್ಮ ಅವರು ಈಚೆಗೆ 100 ಊಟದ ತಟ್ಟೆಗಳನ್ನು ಕೊಡುಗೆಯಾಗಿ ನೀಡಿದರು   

ದಾವಣಗೆರೆ: ರೈಲು ನಿಲ್ದಾಣ, ಬಸ್‌ ನಿಲ್ದಾಣ, ಮಾರುಕಟ್ಟೆಯಲ್ಲಿ ಒತ್ತಾಯಪೂರ್ವಕ ಭಿಕ್ಷೆ ಬೇಡುವವರನ್ನು ಕಂಡು ಮೂಗು ಮುರಿಯುವವರೇ ಹೆಚ್ಚು. ಆದರೆ, ನ್ಯಾಮತಿ ತಾಲ್ಲೂಕಿನ ಸವಳಂಗ ಗ್ರಾಮದಲ್ಲಿ ವಾಸವಾಗಿರುವ ಲಿಂಗತ್ವ ಅಲ್ಪಸಂಖ್ಯಾತೆ ಮಂಜಮ್ಮ ಅವರೆಂದರೆ ಎಲ್ಲರಿಗೂ ಅಚ್ಚುಮೆಚ್ಚು.

ದೇವಸ್ಥಾನ, ಅಂಗಡಿ ಮುಂತಾದೆಡೆಗಳಲ್ಲಿ ಭೀಕ್ಷೆ ಬೇಡಿ ಬಂದ ಹಣದಲ್ಲಿ ತಮ್ಮ ಜೀವನಕ್ಕೆ ಎಷ್ಟು ಬೇಕೋ ಅಷ್ಟನ್ನು ಇಟ್ಟುಕೊಂಡು ಉಳಿದುದನ್ನು ಸಮಾಜಕ್ಕೆ ಮರಳಿ ನೀಡುವ ಮೂಲಕ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.

ಸವಳಂಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬಿಸಿಯೂಟಕ್ಕೆ ₹ 8,000 ಮೌಲ್ಯದ 100 ಸ್ಟೀಲ್‌ ತಟ್ಟೆಗಳನ್ನು ಈಚೆಗೆ ದೇಣಿಗೆ ನೀಡಿದ್ದಾರೆ. ಶಿವಮೊಗ್ಗದ ಆಯನೂರು ಸಮೀಪದ ಹಾರನಹಳ್ಳಿ ಗ್ರಾಮದ ಶಾಲೆಯ ಶೌಚಾಲಯದಲ್ಲಿ ಕೈ ತೊಳೆಯುವ ವ್ಯವಸ್ಥೆ ಇರಲಿಲ್ಲ. ₹ 3,000ದಿಂದ ₹ 4,000 ವೆಚ್ಚದ ಸಾಮಾಗ್ರಿಗಳನ್ನು ಕೊಂಡು ತಂದು ಸ್ವತಃ ಕೆಲಸ ಮಾಡಿಕೊಟ್ಟಿರುತ್ತಾರೆ. ತೀರ್ಥಹಳ್ಳಿ ತಾಲ್ಲೂಕಿನ ಹಿಂದೂ–ಮುಸ್ಲಿಂ ಸೌಹಾರ್ದ ಕೇಂದ್ರ ಹಣಗೆರೆಕಟ್ಟೆ ದೇವಸ್ಥಾನಕ್ಕೆ ₹ 35,000 ಮೌಲ್ಯದ 6 ಬ್ಯಾರಿಕೇಡ್‌ ಮಾಡಿಸಿ ಕೊಟ್ಟಿರುತ್ತಾರೆ. ಪಂಡಿತ್‌ ಪಂಚಾಕ್ಷರ ಗವಾಯಿ ಅಂಧಮಕ್ಕಳ ಹಾಗೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಆಗಾಗ ಊಟ ನೀಡುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ ಎಂದು ಮಂಜಮ್ಮ ಅವರನ್ನು ಬಲ್ಲ ಗ್ರಾಮಸ್ಥರು ಹೇಳುತ್ತಾರೆ.

ADVERTISEMENT

‘ಮಂಜಮ್ಮ ಅವರ ಸ್ವಂತ ಊರು ಯಾವುದೆಂಬುದು ಗೊತ್ತಿಲ್ಲ. ಆದರೆ, ಭಿನ್ನ ವ್ಯಕ್ತಿತ್ವದವರು. ಗ್ರಾಮದಲ್ಲಿಯೇ ಬಾಡಿಗೆ ಮನೆಯಲ್ಲಿದ್ದು, ಗೌರವಯುತ ಜೀವನ ನಡೆಸುತ್ತಿದ್ದಾರೆ. ಅಂಗಡಿಗಳೆದುರು ಭಿಕ್ಷೆ ಬೇಡಲು ಬರುತ್ತಾರೆ. ಕೊಟ್ಟರೆ ತೆಗೆದುಕೊಳ್ಳುತ್ತಿದ್ದರು. ಇಲ್ಲದಿದ್ದರೆ ಇಲ್ಲ. ಅವರು ಮಾಡುವ ಸಮಾಜಮುಖಿ ಕೆಲಸಗಳ ಬಗ್ಗೆ ತಿಳಿದುಬಂದಾಗ ಅವರ ಮೇಲಿನ ಗೌರವ ಹೆಚ್ಚಿತು. ಗ್ರಾಮದ ಎಲ್ಲ ಅಂಗಡಿಯವರೀಗ ಮಂಜಮ್ಮ ಬಂದ ಕೂಡಲೇ ಭೀಕ್ಷೆ ನೀಡಿ ಕಳುಹಿಸುತ್ತೇವೆ’ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

‘ನಮ್ಮ ಮನೆಯಲ್ಲಿ ಬಾಡಿಗೆಗೆ ಇದ್ದವರಿಗೆ ಮಂಜಮ್ಮ ಪರಿಚಿತರು. ಆ ಕಾರಣಕ್ಕೆ ಸಣ್ಣ ಕೊಠಡಿಯನ್ನು ಬಾಡಿಗೆಗೆ ನೀಡಿದ್ದು, ಒಂದೂವರೆ ವರ್ಷದಿಂದ ವಾಸವಾಗಿದ್ದಾರೆ. ಅವರಾಯಿತು. ಅವರ ಕೆಲಸವಾಯಿತು. ಅವರು ಮಾಡುತ್ತಿರುವ ಕೆಲಸದ ಬಗ್ಗೆ ತಿಳಿದು ಹೆಮ್ಮಯಾಯಿತು’ ಎಂದು ಸಂತಸ ವ್ಯಕ್ತಪಡಿಸದಿರು ಮಂಜಮ್ಮ ಅವರ ಮನೆಯ ಮಾಲೀಕರಾದ ರಘು ಆಚಾರ್‌.

‘ಮಂಜಮ್ಮ ಅವರ ಸಮಾಜಮುಖಿ ಕೆಲಸಗಳ ಬಗ್ಗೆ ಶಾಲೆಯ ಅಡುಗೆಯವರಿಂದ ತಿಳಿದಿತ್ತು. ವಿದ್ಯಾರ್ಥಿಗಳ ಬಿಸಿಯೂಟಕ್ಕೆ ತಟ್ಟೆಗಳ ಅವಶ್ಯಕತೆ ಇದ್ದು, ನೀಡುವಂತೆ ಅವರನ್ನು ಕೇಳಿದ್ದೆವು. ನಮ್ಮ ಕೋರಿಕೆಗೆ ಸ್ಪಂದಿಸಿದರು. ಅಡುಗೆ ಮನೆಯ ಒಲೆ ಹಾಗೂ ಹಾಳಾಗಿದ್ದ ಕಿಟಕಿಗಳಿಗೆ ವೆಲ್ಡಿಂಗ್‌ ಕೆಲಸವನ್ನು ಸ್ವತಃ ಮಾಡಿಕೊಟ್ಟರು. ಮಕ್ಕಳ ಕಲಿಕೆಗೆ ಅಗತ್ಯ ಏನೇ ಇದ್ದರೂ ತಿಳಿಸುವಂತೆ ಹೇಳಿದ್ದಾರೆ. ಅವರ ಶೈಕ್ಷಣಿಕ ಕಾಳಜಿ ಇತರರಿಗೆ ಮಾದರಿ’ ಎಂದು ಶ್ಲಾಘಿಸಿದರು ಸವಳಂಗ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಯಶೋದಾ.

ಸಮಾಜಮುಖಿ ಕಾರ್ಯಗಳ ಬಗ್ಗೆ ವಿವರ ನೀಡುವಂತೆ ಕೇಳಿದಾಗ ‘ಮಾಡಿದ್ದನ್ನು ಹೇಳಿಕೊಳ್ಳಬಾರದು’ ಎಂದು ನುಣುಚಿಕೊಂಡರು ಮಂಜಮ್ಮ.

ಶಿವಮೊಗ್ಗ ತಾಲ್ಲೂಕಿನ ಹಾರನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಶೌಚಾಲಯದಲ್ಲಿ ಕೈ ತೊಳೆಯುವ ಬೇಸಿನ್‌ ನಿರ್ಮಿಸಿಕೊಟ್ಟಿರುವ ಲಿಂಗತ್ವ ಅಲ್ಪಸಂಖ್ಯಾತೆ ಮಂಜಮ್ಮ 
ಮಂಜಮ್ಮ ಅನೇಕ ಶಾಲೆಗಳಿಗೆ ನೆರವು ನೀಡಿದ್ದಾರೆ. ಆದರೆ ಹೇಳಿಕೊಳ್ಳುವುದಿಲ್ಲ. ವೃದ್ಧಾಶ್ರಮ ಸ್ಥಾಪಿಸುವ ಉದ್ದೇಶ ಹೊಂದಿದ್ದು ನಾವೂ ಕೈಲಾದ ಸಹಾಯ ಮಾಡುತ್ತೇವೆ
ಎನ್‌.ಆರ್‌.ಗಿರೀಶ್‌ ಸವಳಂಗ ಗ್ರಾಮಸ್ಥ
ಭೀಕ್ಷೆಯಿಂದ ದಿನಕ್ಕೆ ₹ 2000ದಿಂದ ₹ 3000 ಸಂಗ್ರಹವಾಗುತ್ತದೆ. ಎರಡು ಹೊತ್ತು ಊಟ ಮಾಡುವೆ. ಇತರೆ ಖರ್ಚು ಕಳೆದು ಮಿಕ್ಕುವ ಹಣವನ್ನು ಸಮಾಜಕ್ಕೆ ವಿನಿಯೋಗಿಸುವೆ
ಮಂಜಮ್ಮ ಲಿಂಗತ್ವ ಅಲ್ಪಸಂಖ್ಯಾತೆ ಸವಳಂಗ
ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾದರಿ
ಮಂಜಮ್ಮ ಅವರು ಹೆಣ್ಣಾಗಲು ಬಯಸಿ 16ನೇ ವಯಸ್ಸಿನಲ್ಲಿಯೇ ಮನೆ ಬಿಟ್ಟು ಶಿವಮೊಗ್ಗಕ್ಕೆ ಬಂದರು. ಅಂಗಡಿಗಳಲ್ಲಿ ವೆಲ್ಡಿಂಗ್‌ ಮತ್ತು ನಿರ್ಮಾಣ ಕಾಮಗಾರಿಯ ಸೆಂಟ್ರಿಂಗ್‌ ಕೆಲಸ ಮಾಡುತ್ತಿದ್ದರು. ಈ ವೇಳೆ ಟೀಕೆ ಎದುರಿಸಬೇಕಾಯಿತು. ಮಾನಸಿಕವಾಗಿ ಕುಗ್ಗಿ ಹೋಗಿದ್ದ ಅವರನ್ನು ಆಪ್ತ ಸಮಾಲೋಚನೆ ಚಿಕಿತ್ಸೆ ಮೂಲಕ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದೆವು. ಈಗ ಮಂಜಮ್ಮ ನಮ್ಮ ಸಮುದಾಯದವರಿಗೆ ಮಾದರಿಯಾಗಿದ್ದಾರೆ ಎಂದು ಶಿವಮೊಗ್ಗದ ರಕ್ಷಾ ಸಮುದಾಯದ ಸಂಘಟನೆಯ ಮುಖ್ಯಸ್ಥ ಮೊಹಮ್ಮದ್‌ ಸೈಫುಲ್ಲಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.