ADVERTISEMENT

ಎಸ್ಸೆಸ್ಸೆಲ್ಸಿ: ಆಟೊ ಚಾಲಕನ ಮಗ ಕನ್ನಡ ಮಾಧ್ಯಮದಲ್ಲಿ ಟಾಪರ್‌

ಮಗನ ಫಲಿತಾಂಶದ ದಿನ ತಂದೆ ಕ್ರೂಸರ್‌ ಚಾಲಕನಾಗಿ ಬಾಡಿಗೆಗೆ ಹೋಗಿದ್ದರು

ಬಾಲಕೃಷ್ಣ ಪಿ.ಎಚ್‌
Published 11 ಆಗಸ್ಟ್ 2020, 4:16 IST
Last Updated 11 ಆಗಸ್ಟ್ 2020, 4:16 IST
ಎಂ.ಅಭಿಷೇಕ್‌
ಎಂ.ಅಭಿಷೇಕ್‌   

ದಾವಣಗೆರೆ: ತಂದೆ ಆಟೊ ಚಾಲಕ, ತಾಯಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಮನೆಯಲ್ಲಿ ಇರುವವರು. ಮಗ ಎಸ್ಸೆಸ್ಸೆಲ್ಸಿ ಕನ್ನಡ ಮಾಧ್ಯಮದಲ್ಲಿ 623 ಅಂಕ ಗಳಿಸಿ ರಾಜ್ಯದಲ್ಲಿಯೇ ಅತ್ಯುತ್ತಮ ಸಾಧನೆ ತೋರಿದ್ದಾನೆ.

ಹರಿಹರದ ಎಂಕೆಟಿಎಲ್‌ಕೆ ಪ್ರೌಢಶಾಲೆ ವಿದ್ಯಾರ್ಥಿ, ಗುತ್ತೂರಿನ ಮಂಜುನಾಥ–ನೇತ್ರಾವತಿ ದಂಪತಿಯ ಮಗ ಎಂ.ಅಭಿಷೇಕ್‌ ಈ ಸಾಧನೆ ಮಾಡಿದ ವಿದ್ಯಾರ್ಥಿ.

ಮನೆಯಿಂದ ಎರಡೂವರೆಗ ಕಿಲೋಮೀಟರ್‌ ದೂರದಲ್ಲಿ ಇರುವ ಶಾಲೆಗೆ ನಿತ್ಯ ಸೈಕಲ್‌ನಲ್ಲಿ ಹೋಗಿ ಬರುತ್ತಿದ್ದ ಅಭಿಷೇಕ್‌ ಸಮಾಜದಲ್ಲಿ ಮಾತ್ರ 98 ಅಂಕ ಗಳಿಸಿದ್ದಾನೆ. ಉಳಿದ ಎಲ್ಲ ವಿಷಯಗಳಲ್ಲಿ ಶೇ 100 ಅಂಕ ಪಡೆದಿದ್ದಾನೆ. ಕಂಪ್ಯೂಟರ್‌ ಸೈನ್ಸ್‌ ಕಲಿತು, ಸಾಫ್ಟ್‌ವೇರ್‌ ಎಂಜಿನಿಯರ್‌ ಆಗುವ ಆಸೆ ಇಟ್ಟುಕೊಂಡಿದ್ದಾನೆ.

ADVERTISEMENT

ಮಂಜುನಾಥ ಅವರು ನಿತ್ಯ ಆಟೊ ಓಡಿಸುವವರು. ‘ಬಾಡಿಗೆ ಇದೆ, ಚಾಲಕನಾಗಿ ಬಾ’ ಎಂದು ಬೇರೆಯವರು ಕರೆದಿದ್ದರಿಂದ ಸೋಮವಾರ ಕ್ರೂಷರ್‌ ಬದಲಿ ಚಾಲಕನಾಗಿ ಹಾವೇರಿಗೆ ಹೋಗಿದ್ದರು. ಮಗನ ಸಾಧನೆಯನ್ನು ಫೋನ್‌ ಮೂಲಕವೇ ತಿಳಿದು ಖುಷಿಪಟ್ಟಿದ್ದಾರೆ.

‘ಹಗಲಿಗಿಂತ ರಾತ್ರಿಯೇ ಹೆಚ್ಚು ಓದುತ್ತಿದ್ದೆ. ರಾತ್ರಿ 12 ಗಂಟೆಯ ವರೆಗೆ, ಬೆಳಿಗ್ಗೆ 5ರಿಂದ 7ರವರೆಗೆ ಸ್ಟಡಿ ಮಾಡುತ್ತಿದ್ದೆ. ಶಾಲೆಯಲ್ಲಿ ನಮ್ಮ ತರಗತಿಯವರನ್ನೆಲ್ಲ ಸೇರಿಸಿ ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿದ್ದರು. ಅದರಲ್ಲಿ ನೀಡುತ್ತಿದ್ದ ಸಮಸ್ಯೆಗಳನ್ನು ಬಿಡಿಸುತ್ತಿದ್ದೆ’ ಎಂದು ಅಭಿಷೇಕ್‌ ನೆನಪು ಮಾಡಿಕೊಂಡನು.

‘ನಾನು 7ನೇ ಕ್ಲಾಸ್‌. ಮನೆಯವರು 8ನೇ ಕ್ಲಾಸ್‌ ಅಷ್ಟೇ ಓದಿದ್ದೇವೆ. ನಮ್ಮ ಮೂವರು ಮಕ್ಕಳು ಚೆನ್ನಾಗಿ ಓದಬೇಕು ಎಂಬುದು ನಮ್ಮ ಆಸೆ. ಅಭಿಷೇಕ್‌ ಮೂವರಲ್ಲಿ ದೊಡ್ಡವನು. ಮನೆಯಲ್ಲಿ ಒಂದು ಕಾಗದದಲ್ಲಿ 100ಕ್ಕೆ 100 ತೆಗೆಯಬೇಕು ಎಂದು ಬರೆದಿಟ್ಟು ಓದುತ್ತಿದ್ದ. ಅವನಂದುಕೊಂಡಂತೆ ಆಗಿದೆ’ ಎಂದು ತಾಯಿ ನೇತ್ರಾವತಿ ‘ಪ್ರಜಾವಾಣಿ’ ಜತೆ ಸಂತಸ ಹಂಚಿಕೊಂಡರು.

‘ಟ್ಯೂಷನ್‌ಗೆ ಹೋಗದೇ ನಮ್ಮ ವಿದ್ಯಾರ್ಥಿ ಸಾಧನೆ ಮಾಡಿದ್ದಾನೆ. ಅನುಮಾನಗಳು ಬಂದಾಗ ಶಿಕ್ಷಕರ ಬೆನ್ನುಹತ್ತಿ ಪರಿಹರಿಸಿಕೊಳ್ಳುತ್ತಾನೆ. ಓದಿನಲ್ಲಿ ಮಾತ್ರವಲ್ಲ, ಆಟೋಟ ಸ್ಪರ್ಧೆಗಳಲ್ಲಿ, ಭಾಷಣ, ಕ್ವಿಜ್‌ ಮುಂತಾದ ಚಟುವಟಿಕೆಯಲ್ಲೂ ನಿರಂತರ ತೊಡಗಿಸಿಕೊಂಡಿದ್ದಾನೆ. ಶಿಕ್ಷಕರ ಪ್ರೋತ್ಸಾಹ ಮತ್ತು ಅವನ ಸ್ವಪ್ರಯತ್ನ ಸಾಧನೆಗೆ ಕಾರಣ’ ಎಂದು ಎಂಕೆಟಿಎಲ್‌ಕೆ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ವಿನೋದ್‌ ಹೆಗಡೆ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.