ADVERTISEMENT

ಪ್ರಜಾವಾಣಿ ಫೋನ್‌ ಇನ್‌ | SSLC: ಈ ಬಾರಿ ವಿದ್ಯಾರ್ಥಿ ಸ್ನೇಹಿ ಪರೀಕ್ಷಾ ವಿಧಾನ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 6:47 IST
Last Updated 24 ಫೆಬ್ರುವರಿ 2024, 6:47 IST
   

ದಾವಣಗೆರೆ: ‘ಮಾರ್ಚ್‌ 25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದೆ. ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೇ, ಹಬ್ಬದಂತೆ ಸಂಭ್ರಮಿಸಿ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಜಿ.ಕೊಟ್ರೇಶ್ ಕಿವಿಮಾತು ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತ ಗೊಂದಲಗಳ ನಿವಾರಣೆ ಹಿನ್ನೆಲೆಯಲ್ಲಿ ಶುಕ್ರವಾರ ‘ಪ್ರಜಾವಾಣಿ’ ದಾವಣಗೆರೆ ಕಚೇರಿಯಲ್ಲಿ ಏರ್ಪಡಿಸಿದ್ದ ‘ಫೋನ್ ಇನ್’ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಕರೆ ಮಾಡಿದ್ದ ವಿದ್ಯಾರ್ಥಿಗಳು ಮತ್ತು ಪಾಲಕರ ಪ್ರಶ್ನೆಗಳಿಗೆ ಉತ್ತರಿಸಿದರು. ವಿಷಯ ಪರಿವೀಕ್ಷಕರು ಗಣಿತ, ವಿಜ್ಞಾನ ಹಾಗೂ ಹಿಂದಿ ವಿಷಯಗಳಿಗೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳಲ್ಲಿದ್ದ ಸಂದೇಹ ನಿವಾರಿಸಿ ಧೈರ್ಯ ತುಂಬಿದರು.

‘ಪರೀಕ್ಷೆ ಬಗ್ಗೆ ಭಯ ಹೊಂದಬಾರದು. ಯಾವುದೇ ವಿಷಯವನ್ನು ಓದಿದ ಬಳಿಕ ಒಂದು ಬಾರಿ ಬರೆಯಬೇಕು. ಒಂದು ಸಲ ಬರೆಯುವುದು 10 ಸಲ ಓದಿದ್ದಕ್ಕೆ ಸಮ. ಯಾವುದೇ ಕ್ಷೇತ್ರದಲ್ಲೂ ಆತಂಕ ಇರುತ್ತವೆ. ಅದನ್ನು ಧೈರ್ಯವಾಗಿ ಎದುರಿಸಬೇಕು. ಓದಿದ್ದನ್ನು ಪುನರ್ಮನನ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಪ್ರಸಕ್ತ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಿಲ್ಲೆಯ 21,411 ವಿದ್ಯಾರ್ಥಿಗಳು ನೋಂದಾಯಿಸಿದ್ದು, ಪೂರಕ ಪರೀಕ್ಷೆಯ ಬದಲಾಗಿ ಮೂರು ಹಂತದಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. ಇದರಿಂದ ಮೊದಲ ಬಾರಿ ನಿರೀಕ್ಷಿತ ಅಂಕಗಳು ಲಭಿಸದಿದ್ದಲ್ಲಿ ಮತ್ತೊಂದು ಅವಕಾಶದಲ್ಲಿ ಫಲಿತಾಂಶ ಸುಧಾರಿಸಿಕೊಳ್ಳಬಹುದಾಗಿದೆ’ ಎಂದು ಅವರು ಹೇಳಿದರು.

‘ಪರೀಕ್ಷೆ ಕುರಿತಂತೆ ವಿದ್ಯಾರ್ಥಿಗಳಲ್ಲಿರುವ ಭಯ ನಿವಾರಿಸುವ ನಿಟ್ಟಿನಲ್ಲಿ ಶಿಕ್ಷಕರು ಕೌನ್ಸೆಲಿಂಗ್ ಮಾಡುತ್ತಾರೆ. ಅಕ್ಟೋಬರ್ ತಿಂಗಳಲ್ಲಿ ಧಾರವಾಡದ ಗ್ರಾಮ ವಿಕಾಸ ಸೊಸೈಟಿಯಿಂದ ಕ್ಲಸ್ಟರ್‌ ಕೇಂದ್ರಕ್ಕೆ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಪ್ರೇರಣಾ ಶಿಬಿರ ಆಯೋಜಿಸಿದ್ದೇವೆ. ಅಲ್ಲದೇ, ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾದ ನಂದೀಶ ಶೆಟ್ಟರ್ ಅವರಿಂದ ಜ.11ರಿಂದ ಜಿಲ್ಲೆಯ ಎಲ್ಲ ತಾಲ್ಲೂಕು ವ್ಯಾಪ್ತಿಯಲ್ಲೂ ಎರಡು ಭಾಗಗಳಲ್ಲಿ 800–1000 ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಪರೀಕ್ಷೆಯ ಭಯ ನಿವಾರಿಸಲಾಗಿದೆ’ ಎಂದರು.

‘ವರ್ಷಪೂರ್ತಿ ಕಲಿತದ್ದನ್ನು ಮೂರೇ ಗಂಟೆಯಲ್ಲಿ ಉತ್ತರಿಸಬೇಕು. ಕೇವಲ ಗೈಡ್, ನೋಟ್ಸ್‌ಗಳನ್ನು ಅವಲಂಬಿಸದಂತೆ ಸೂಚಿಸುವ ಶಿಕ್ಷಕರು ಪಠ್ಯವನ್ನು ಸಮಗ್ರವಾಗಿ ಬೋಧಿಸುವ ಮೂಲಕ ಅಣಿಗೊಳಿಸಿದ್ದಾರೆ’ ಎಂದು ಹೊಳೆಸಿರಿಗೆರೆಯ ಮಂಜಪ್ಪ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

‘ಇಡೀ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರು ಘಟಕ ಪರೀಕ್ಷೆಗಳನ್ನು ನಡೆಸಿ ಎಲ್ಲಾ ವಿಷಯಗಳನ್ನು ಪುನರ್ಮನನ ಮಾಡಿರುತ್ತಾರೆ. ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಸರಿಯಾಗಿ ಓದಿಕೊಂಡು, ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ. ನಿತ್ಯ ಕನಿಷ್ಠ ಬೆಳಿಗ್ಗೆ ಎರಡರಿಂದ ಮೂರು ಗಂಟೆ, ಸಂಜೆಯೂ ಅಷ್ಟೇ ಅವಧಿಗೆ ಅಭ್ಯಾಸ ಮಾಡಿರಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಶಾಲೆಗಳಲ್ಲಿ ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಭಯಪಡಬಾರದು’ ಎಂದು ಸಲಹೆ ನೀಡಿದರು.

‘ನಿಮ್ಮ ಮಕ್ಕಳನ್ನು ಇತರ ವಿದ್ಯಾರ್ಥಿಗಳೊಂದಿಗೆ ಹೋಲಿಕೆ ಮಾಡಿ ಅವರ ಆತ್ಮವಿಶ್ವಾಸ ಕುಗ್ಗಿಸಬೇಡಿ. ಆ ಚಾಳಿಯನ್ನು ಬಿಡಬೇಕು. ಅವರನ್ನು ಪ್ರೋತ್ಸಾಹಿಸಿ’ ಎಂದು ಪಾಲಕರಲ್ಲಿ ಮನವಿ ಮಾಡಿದರು.

‘ಶತ ಪ್ರತಿಶತ ಫಲಿತಾಂಶ ಬರಬೇಕು. ನಮ್ಮ ವಿದ್ಯಾರ್ಥಿಗಳೇ ಅಧಿಕ ಅಂಕ ಗಳಿಸಬೇಕು ಎಂಬ ನಿಟ್ಟಿನಲ್ಲಿ ಖಾಸಗಿ ಶಾಲೆಗಳಲ್ಲಿ ಅವೈಜ್ಞಾನಿಕ ಸ್ಪರ್ಧೆ ಏರ್ಪಟ್ಟಿದೆ. ಇದು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದನ್ನು ಬಿಡಬೇಕು’ ಎಂದೂ ಅವರು ಒತ್ತಿಹೇಳಿದರು.

ಸಂದರ್ಶನ ಸಪ್ತಾಹ: ‘ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ರಚಿಸಿ ಆ ಮೂಲಕ ಎಲ್ಲಾ ಪ್ರೌಢಶಾಲೆಗಳ ಗುಣಾತ್ಮಕ ಫಲಿತಾಂಶಕ್ಕೆ ಪ್ರಯತ್ನ ಮಾಡುತ್ತಿದ್ದೇವೆ. ಶಿಕ್ಷಕರ ಜೊತೆ ಚರ್ಚಿಸಿ ಶೈಕ್ಷಣಿಕ ಮಾರ್ಗದರ್ಶನ ನೀಡಲಾಗುತ್ತಿದೆ’ ಎಂದರು.

ಜಿಲ್ಲಾ ಶಿಕ್ಷಣ ಅಧಿಕಾರಿ ಜಿ.ಎಸ್. ರಾಜಶೇಖರಪ್ಪ, ವಿವಿಧ ವಿಷಯಗಳ ಪರಿವೀಕ್ಷಕರಾದ ಶಶಿಕಲಾ ಎಂ., ಸುಧಾ ಕೆ.ಸಿ., ವಸಂತಕುಮಾರಿ ಆರ್.ಬಿ., ಕುಮಾರ ಹನುಮಂತಪ್ಪ ಸಾರಥಿ, ಸುರೇಶಪ್ಪ ಎಂ., ಶಿಕ್ಷಕರಾದ ಶಿವಯ್ಯ ಎಸ್., ಬ್ಯುಲಾ ಶಿರೋನ್ಮನಿ ಡಿ., ಮುಬಾರಕ್ ಅಲಿ, ಕೃಷ್ಣಮೂರ್ತಿ ಎಚ್., ರಮೇಶ ಎಂ., ಎಂ.ಎಚ್.ಸಂತೋಷ್‌, ಶಂಷಾದ್ ಬೇಗಂ, ಜಹಾನ್ ಆರಾ ಬೇಗಂ, ಎಂ.ಡಿ. ಹಿದಾಯತ್ ಉಲ್ಲಾ ಅನ್ಸಾರಿ, ಅಸಾದ್‌ ಉಲ್ಲಾ ಬೇಗ್ ಇದ್ದರು.

ವಿಷನ್–5: ಶಾಲೆಗಳ ದತ್ತು

‘ಪ್ರಸಕ್ತ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಫಲಿತಾಂಶವನ್ನು ರಾಜ್ಯಮಟ್ಟದಲ್ಲಿ 5 ಸ್ಥಾನದೊಳಗೆ ತರಲು ಸಿದ್ಧತೆ ಮಾಡಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಈ ಹಿಂದೆ ಏನು ಹಿನ್ನಡೆಯಾಗಿದೆ ಎಂಬುದನ್ನು ಗುರುತಿಸಿದ್ದೇವೆ. ಕಳೆದ ವರ್ಷ ‘ಸಿ’ ಗ್ರೇಡ್‌ ಪಡೆದಿರುವ 40 ಶಾಲೆಗಳನ್ನು ವಿವಿಧ ಅಧಿಕಾರಿಗಳಿಗೆ ದತ್ತು ನೀಡಲಾಗಿತ್ತು. ಅಧಿಕಾರಿಗಳು ಭೇಟಿ ನೀಡಿ ಈ ಶಾಲೆಗಳಲ್ಲಿ ಮಾರ್ಗದರ್ಶನ ನೀಡಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಇಟ್ನಾಳ್ ಅಧ್ಯಕ್ಷತೆಯಲ್ಲಿ ಶಾಲೆಗಳಲ್ಲಿ ಸಭೆ ನಡೆಸಿ ಶಿಕ್ಷಕರ ಕೊರತೆ, ಮೂಲಸೌಲಭ್ಯ, ವಿದ್ಯಾರ್ಥಿಗಳ ಗೈರು ಹಾಜರಿಯ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

ವಿಷಯವಾರು ಕಾರ್ಯಾಗಾರ

‘ವಿಷಯಗಳ ಬಗ್ಗೆ ಚರ್ಚೆ ನಡೆಸಿದಷ್ಟು ಶಿಕ್ಷಕರಿಗೆ ಹೊಸ ಅಂಶಗಳು ಬರುತ್ತವೆ. ಈ ನಿಟ್ಟಿನಲ್ಲಿ ಎಲ್ಲಾ ವಿಷಯವಾರು ಶಿಕ್ಷಕರನ್ನು ಒಂದೆಡೆ ಸೇರಿಸಿ ಕ್ಲಿಷ್ಟಕರ ಅಂಶಗಳ ಬಗ್ಗೆ ಚರ್ಚಿಸಲಾಗುತ್ತಿದೆ. ಅಲ್ಲದೇ, ವಿಷಯವಾರು ಕ್ಲಬ್‌ ರಚಿಸಿದ್ದು, ಸಂಪನ್ಮೂಲ ವ್ಯಕ್ತಿಗಳು, ಉಪನ್ಯಾಸಕರನ್ನು ಆಹ್ವಾನಿಸಿ ಆ ವಿಷಯದ ಬಗ್ಗೆ ತಿಳಿಸಲು ಹೇಳುತ್ತಿದ್ದೇವೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲು ಅಂತಿಮ ಪರೀಕ್ಷೆಗೆ ಮುನ್ನ ಮತ್ತೊಂದು ಪ್ರೇರಣಾ ಶಿಬಿರ ಏರ್ಪಡಿಸಲಾಗಿದೆ’ ಎಂದು ಜಿ. ಕೊಟ್ರೇಶ್‌ ಹೇಳಿದರು.

ಪ್ರಶ್ನೋತ್ತರ:

ಎಸ್ಸೆಸ್ಸೆಲ್ಸಿ ಪರೀಕ್ಷೆ 1,2, 3 ಪರೀಕ್ಷೆ ಹೊಸ ವಿಧಾನದ ಬಗ್ಗೆ ತಿಳಿಸಿ. 3 ಬಾರಿಯೂ ಕಡ್ಡಾಯವಾಗಿ ಪರೀಕ್ಷೆ ಬರೆಯಬೇಕಾ? ಯಾವ ಪರೀಕ್ಷೆಯ ಅಂಕಗಳನ್ನು ಪರಿಗಣಿಸುತ್ತೀರಿ. ಪರೀಕ್ಷೆ ಹೇಗಿರಲಿದೆ? -ಶ್ರೇಯಾ, ನ್ಯಾಮತಿ, ಕುಸುಮಾ, ದಾವಣಗೆರೆ, ಅವಿನಾಶ್‌, ಬನ್ನಿಕೋಡು

ಡಿಡಿಪಿಐ: ಈ ವರ್ಷ ಪರೀಕ್ಷೆಯನ್ನು 1, 2, 3ನೇ ಹಂತ ಎಂದು ವಿಂಗಡಿಸಲಾಗಿದೆ. ಈ ಹಿಂದೆ ಇದ್ದ ಪೂರಕ ಪರೀಕ್ಷೆಯ ಬದಲಾಗಿ ಮೂರು ಹಂತಗಳಲ್ಲಿ ಪರೀಕ್ಷೆಯನ್ನು ಬರೆಯಲು ಅವಕಾಶವಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಅನಿವಾರ್ಯ ಕಾರಣದಿಂದ ಮೊದಲ ಹಂತದ ಪರೀಕ್ಷೆ ಬರೆಯಲಾಗದಿದ್ದರೆ ಅಥವಾ ಮೊದಲ ಹಂತದ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದರೆ, 2ನೇ ಅಥವಾ 3ನೇ ಹಂತದಲ್ಲಿ ಪರೀಕ್ಷೆ ಬರೆದು ಹೆಚ್ಚಿನ ಅಂಕ ಪಡೆಯಬಹುದು. ವಿದ್ಯಾರ್ಥಿಗಳು ಯಾವ ಹಂತದಲ್ಲಿ ಹೆಚ್ಚಿನ ಅಂಕ ಪಡೆದಿರುತ್ತಾರೋ ಅದನ್ನೇ ಅಂಕಪಟ್ಟಿಗೆ ಪರಿಗಣಿಸುತ್ತೇವೆ. ಫೇಲಾಗಿರುವ ಅಂಕಪಟ್ಟಿ ಬರುವುದಿಲ್ಲ.

ಕೋವಿಡ್‌ ದಿನಗಳಲ್ಲಿ ವಿದ್ಯಾರ್ಥಿಗಳು 2 ವರ್ಷ ಶಾಲೆಗೆ ಹೋಗಲಿಲ್ಲ, ಇದರಿಂದ ಶಿಕ್ಷಣದಲ್ಲಿ ಕುಂಠಿತವಾಗಿದೆ. ಕೆಲ ವಿದ್ಯಾರ್ಥಿಗಳಿಗೆ ಕನ್ನಡವನ್ನೂ ಬರೆಯಲು, ಓದಲು ಬರುವುದಿಲ್ಲ. ಬೇರೆ ಜಿಲ್ಲೆಗೆ ಹೋಲಿಸಿದರೆ ಜಿಲ್ಲೆಯ ಶೇಕಡಾವಾರು ಫಲಿತಾಂಶವೂ ಕುಸಿತ ಕಂಡಿದೆ. ಸಿಆರ್‌ಪಿ, ಬಿಆರ್‌ಪಿಗಳೂ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಕೆಲವು ಶಾಲೆಗಳಲ್ಲಿ ವಿರಾಮದ ವೇಳೆಯೂ ಪಾಠ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿದೆ –ಎಂ.ಜಿ.ಶ್ರೀಕಾಂತ್‌, ದಾವಣಗೆರೆ

ಡಿಡಿಪಿಐ: ಕೋವಿಡ್‌ ವೇಳೆ ಆದ ಶೈಕ್ಷಣಿಕ ಕೊರತೆಯನ್ನು ನೀಗಿಸಲು ‘ಕಲಿಕಾ ಚೇತರಿಕೆ’ ಕಾರ್ಯಕ್ರಮ ಮಾಡಲಾಯಿತು. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಿದೆ. ಕೋವಿಡ್‌ ದಿನಗಳಲ್ಲಿ ಮೊಬೈಲ್‌ ಮೂಲಕವೂ ಕಲಿಕೆಯನ್ನು ಮುಂದುವರಿಸಲಾಗಿತ್ತು. ಆ ಬಳಿಕವೂ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಿಗೆ ಮಾರ್ಗದರ್ಶನ ನೀಡಲಾಗಿದೆ. ಪ್ರಾಥಮಿಕ ಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳನ್ನು ಗುರುತಿಸಿ ಅವರಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸುವ ಕಾರ್ಯ ಮಾಡಲಾಗುತ್ತಿದೆ. ಸಿಆರ್‌ಪಿ, ಬಿಆರ್‌ಪಿ ಕಾರ್ಯವಿಧಾನ ಹಾಗೂ ‘ವಿರಾಮ’ದ ಬಗ್ಗೆ ನಿಮ್ಮ ದೂರನ್ನು ಪರಿಗಣಿಸಿದ್ದು, ಸಮಸ್ಯೆ ಬಗೆಹರಿಸುವ ಬಗ್ಗೆ ಗಮನ ಹರಿಸಲಾಗುವುದು.

3 ಹಂತದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ತಾತ್ಸಾರ ಮನೋಭಾವ ಮೂಡುವುದಿಲ್ಲವೇ? –ಶ್ರೀಧರ್, ಸಂತೇಬೆನ್ನೂರು

ಡಿಡಿಪಿಐ: 3 ಹಂತದಲ್ಲಿ ಪರೀಕ್ಷೆ ನಡೆಯುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ. ಅನಾರೋಗ್ಯ, ಅಪಘಾತ ಹಾಗೂ ಇನ್ನಿತರ ಕಾರಣಗಳಿಂದ ಒಂದನೇ ಪರೀಕ್ಷೆಯನ್ನು ತಪ್ಪಿಸಿಕೊಂಡರೆ ಇನ್ನುಳಿದ 2ನೇ ಅಥವಾ 3ನೇ ಪರೀಕ್ಷೆಗಳನ್ನು ಬರೆಯಬಹುದು. ಇದರಿಂದ ಖಂಡಿತವಾಗಿಯೂ ತಾತ್ಸಾರ ಮನೋಭಾವ ಮೂಡುವುದಿಲ್ಲ. ಬದಲಾಗಿ ಸುಧಾರಣೆಗೆ ಇದೊಂದು ಒಳ್ಳೆಯ ಅವಕಾಶವಾಗಿದೆ.

ಪರೀಕ್ಷೆಗೆ ಇರುವುದು 3 ಗಂಟೆ ಮಾತ್ರ. ಕಡಿಮೆ ಅವಧಿಯನ್ನು ಸಮರ್ಪಕವಾಗಿ ಹೇಗೆ ಬಳಸಿಕೊಳ್ಳುವುದು? ಬೆಳಿಗ್ಗೆ ಹಾಗೂ ಸಂಜೆ ಎಷ್ಟು ಗಂಟೆ ಅಧ್ಯಯನ ನಡೆಸಬೇಕು? –ಗೌಸಿಯಂ ಖಾನಂ, ಮಲೇಬೆನ್ನೂರು

ಡಿಡಿಪಿಐ: ಮೊದಲು ಪ್ರಶ್ನೆ ಪರೀಕ್ಷೆಯನ್ನು ಸರಿಯಾಗಿ ಓದಬೇಕು. ಯಾವೆಲ್ಲ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಬಲ್ಲೇ ಎಂಬುದನ್ನು ಗುರುತಿಸಿ, ಆ ಪ್ರಶ್ನೆಗಳಿಗೆ ಮೊದಲು ಉತ್ತರಿಸಬೇಕು. ಆರಂಭದಿಂದಲೇ ಪರೀಕ್ಷೆಗೆ ಪ್ರತಿ ದಿನ ಅಭ್ಯಾಸ ಮಾಡಬೇಕು. ಓದಿದ್ದನ್ನು ಪುನರ್‌ ಮನನ ಮಾಡಿಕೊಳ್ಳಬೇಕು. ವಿದ್ಯಾರ್ಥಿ ದಿಸೆಯಲ್ಲಿ ಬೆಳಿಗ್ಗೆ 5 ಗಂಟೆಯಿಂದ 8ರವರೆಗೆ ಓದಿ, ಸಂಜೆ 7ರಿಂದ 10, 11ರವರೆಗೆ ಅಧ್ಯಯನದಲ್ಲಿ ತೊಡಗಬೇಕು. ಶಿಕ್ಷಕರು ಕೊಟ್ಟ ಹೋಂ ವರ್ಕ್‌ ಅಂದೇ ಮುಗಿಸಬೇಕು.

‘ನಿಮಗಿದು ತಿಳಿದಿರಲಿ’ ಎಂಬುವ ಅಂಶಗಳು ಪರೀಕ್ಷಾ ಪ್ರಶ್ನೆ ಪತ್ರಿಕೆಯಲ್ಲಿ ಬರುತ್ತವೆಯೇ? –ಗಗನಾ, ಬನ್ನಿಕೋಡು

ಡಿಡಿಪಿಐ: ‘ನಿಮಗಿದು ತಿಳಿದಿರಲಿ’ ಎಂಬುವ ಅಂಶಗಳು ಖಂಡಿತವಾಗಿಯೂ ಪರೀಕ್ಷೆಯಲ್ಲಿ ಬರುವುದಿಲ್ಲ. ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ‘ನಿಮಗಿದು ತಿಳಿದಿರಲಿ’ ಎಂದು ಹೆಚ್ಚುವರಿ ಮಾಹಿತಿಯನ್ನು ನೀಡಲಾಗಿರುತ್ತದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುವುದು ಹೇಗೆ? ಸಿದ್ಧತೆ ನಡೆಸುವುದು ಹೇಗೆ? ಪರೀಕ್ಷೆಯಲ್ಲಿ ಯಾವ ಪ್ರಶ್ನೆಗೆ ಎಷ್ಟು ಬರೆಯಬೇಕು? –ಪ್ರತಿಭಾ, ಹೊನ್ನಾಳಿ, ಮೋನಿಕಾ, ನ್ಯಾಮತಿ ಹಾಗೂ ಕೀರ್ತಿ ಹೊನ್ನಾಳಿ

ಡಿಡಿಪಿಐ: ಈಗಾಗಲೇ ಪಠ್ಯಕ್ರಮ ಬೋಧನೆ ಮುಗಿದಿದ್ದು, ಸರಣಿ 1, ಸರಣಿ 2ನೇ ಪರೀಕ್ಷೆಗಳೂ ನಡೆದಿವೆ. ಎಲ್ಲಿ ಕಡಿಮೆ ಅಂಕ ಬಂದಿವೆಯೋ ಅದನ್ನು ಗಮನಿಸಿ. ಎಲ್ಲಿ ಕಳೆದುಕೊಂಡಿದ್ದೇವೆಯೋ ಅಲ್ಲಿಯೋ ಹುಡುಕಬೇಕು. ಇಲಾಖೆಯ ವೆಬ್‌ಸೈಟ್‌ನಲ್ಲಿ (https://schooleducation.karnataka.gov.in) ಕೊನೆಯ ವರ್ಷದ ಪ್ರಶ್ನೆಪತ್ರಿಕೆಗಳು ಹಾಗೂ ಹೆಚ್ಚು ಅಂಕ ಪಡೆದ ಉತ್ತರ ಪತ್ರಿಕೆಗಳು ಲಭ್ಯ ಇವೆ. ಅವುಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಅಧ್ಯಯನ ನಡೆಸಿ. ಪರೀಕ್ಷೆ ಮುಗಿಯುವವರೆಗೂ ಟಿ.ವಿ., ಮೊಬೈಲ್‌ ಬಳಕೆ ಮಾಡಬೇಡಿ.

3 ಹಂತದ ಪರೀಕ್ಷೆಗಳು ಒಂದಕ್ಕಿಂತ ಒಂದು ಕಠಿಣವಾಗಿರಲಿವೆಯಾ?–ಸಾಕ್ಷಿ ಎಂ.ಎಲ್‌., ಹೊನ್ನಾಳಿ

ಡಿಡಿಪಿಐ: ಮೂರೂ ಹಂತದ ಪರೀಕ್ಷೆಗಳು ಒಂದೇ ರೀತಿಯಲ್ಲಿರುತ್ತವೆ. ಒಂದು ಸುಲಭ, ಮತ್ತೊಂದು ಕಠಿಣವೆಂದು ಇರಲ್ಲ. ಈಗಾಗಲೇ ಪೂರ್ವ ಸಿದ್ಧತಾ ಪರೀಕ್ಷೆ ಮುಗಿದಿದ್ದು, ಅರ್ಥವಾಗದ್ದನ್ನು ಮತ್ತೊಮ್ಮೆ ಓದಿ, ಶಿಕ್ಷಕರನ್ನೂ ಕೇಳಿ ಅರ್ಥ ಮಾಡಿಕೊಳ್ಳಿ.

ಪರೀಕ್ಷೆ ಹತ್ತಿರವಾದಂತೆಲ್ಲ ಭಯ, ಆತಂಕ ಉಂಟಾಗುತ್ತಿದೆ. ಪರಿಹಾರ ತಿಳಿಸಿ – ಗೌರಿ ಬಿ.ಎಂ., ಹೊನ್ನಾಳಿ ಹಾಗೂ ಇಂದೂಶ್ರೀ, ಗುಡ್ಡದಕೋಮಾರನಹಳ್ಳಿ

ಡಿಡಿಪಿಐ: ಅನಾವಶ್ಯಕವಾಗಿ ಒತ್ತಡ ಮಾಡಿಕೊಳ್ಳಬೇಡಿ. ಉತ್ತಮ ಆಹಾರ ಸೇವಿಸಿ, ಉತ್ತಮವಾಗಿ ನಿದ್ರೆ ಮಾಡಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ. ನಿರಂತರ ಅಧ್ಯಯನದ ಜೊತೆಗೆ ಸ್ನೇಹಿತರೊಂದಿಗೆ ಗೊಂದಲದ ಬಗ್ಗೆ ಚರ್ಚಿಸಿ. ಜಾತ್ರೆ ಸಮಯ ಆಗಿರುವುದರಿಂದ ಜಾತ್ರೆ, ಹಬ್ಬಗಳಲ್ಲೇ ಜಾಸ್ತಿ ಸಮಯ ಕಳೆಯಬೇಡಿ.

‌ಹಿಂದಿ ಪರೀಕ್ಷೆಯನ್ನು ಎದುರಿಸುವುದು ಹೇಗೆ ತಿಳಿಸಿ?–ಗೌರಮ್ಮ, ಎಸ್‌ಪಿಎಸ್ ನಗರ, ದಾವಣಗೆರೆ

ಡಿಡಿಪಿಐ: ಹಿಂದಿಯಲ್ಲಿ 3 ಅಂಕದ ಪ್ರಶ್ನೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಶಿಕ್ಷಕರು ಈಗಾಗಲೇ ಯಾವ ಪಾಠದಲ್ಲಿ 3 ಅಂಕದ ಪ್ರಶ್ನೆಗಳು ಹೆಚ್ಚು ಬರುತ್ತವೆ ಎಂಬುದನ್ನು ತಿಳಿಸಿರುತ್ತಾರೆ. ಪ್ರಬಂಧ, ಕಂಠಪಾಠ ಪದ್ಯ, ರಜೆ ಪತ್ರ, ಹಿಂದಿಯಿಂದ ಕನ್ನಡಕ್ಕೆ ಅನುವಾದ, ಭಾವಾರ್ಥ ಪ್ರಶ್ನೆ ಇರುತ್ತದೆ. ಇವುಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡಿದರೆ ಹೆಚ್ಚಿನ ಅಂಕ ಗಳಿಸಬಹುದು.

ಪರೀಕ್ಷೆಯಲ್ಲಿ ಉತ್ತರ ನೆನಪಾಗಲ್ಲ, ನೆನಪಿಟ್ಟುಕೊಳ್ಳಲು ಏನು ಮಾಡಬೇಕು- ಇಂದೂಶ್ರೀ, ಗುಡ್ಡದಕೋಮಾರನಹಳ್ಳಿ, ಕುಂದೂರು ಮಂಜಪ್ಪ, ಹೊನ್ನಾಳಿ

ಡಿಡಿಪಿಐ: ಪರೀಕ್ಷೆ ಹತ್ತಿರ ಬಂದಂತೆ ಆತಂಕ ಸಹಜ. ಆತಂಕ ಮಾಡಿಕೊಳ್ಳುವುದರಿಂದ ಓದಿದ್ದು ನೆನಪಾಗುವುದಿಲ್ಲ. ಹೀಗಾಗಿ ಒತ್ತಡ ಮಾಡಿಕೊಳ್ಳಬೇಡಿ. ಏನಾಗುತ್ತೋ ಏನೋ ಎಂಬ ಭಯ ಬೇಡ. ಉತ್ತಮವಾಗಿ ಅಧ್ಯಯನ ನಡೆಸಿ, ಆತಂಕ ಇಲ್ಲದೇ ಉತ್ತರ ಬರೆಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.