ದಾವಣಗೆರೆ: ಮೂರನೇ ಶ್ರೇಯಾಂಕದ ಧೀರ್ ಬೆಂಗೇರಿ ಮತ್ತು ನಾಲ್ಕನೇ ಶ್ರೇಯಾಂಕಿತ ಅರ್ಮಾನ್ ಖಾನ್ ಅವರು ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ 17 ವರ್ಷದೊಳಗಿನ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ಹಾಗೂ ದಾವಣಗೆರೆ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯ (ಡಿಡಿಬಿಎ) ಆಶ್ರಯದಲ್ಲಿ ಇಲ್ಲಿನ ನೇತಾಜಿ ಸುಭಾಷ್‌ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ಧೀರ್ 15–11, 15–6ರಿಂದ ಓಂಕಾರ್ ಭಟ್ ವಿರುದ್ಧ ಗೆದ್ದರು.
16ರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ಬೆಂಗಳೂರಿನ ಅರ್ಮಾನ್ 15–10, 15–4ರಿಂದ ಬಿ.ಪ್ರಜ್ವಲ್ ಅವರನ್ನು ಮಣಿಸಿದರು.
ಇತರ ಪ್ರಮುಖ ಪಂದ್ಯಗಳಲ್ಲಿ ನಿಶಾನ್ ಆರ್ಯ 15–9, 15–11ರಿಂದ ಕೆ.ಬಿ.ಚಂದನ್ ಎದುರೂ, ದೇವಿನ್‌ಚಂದ್ರ ಜಿ.ಸಿ 15–9, 15–12ರಿಂದ ದರ್ಶನ್ ಮಣಿಕಂಠನ್ ಮೇಲೂ, ದೇವಾಂಶ್ ಲಾಲ್ 15–4, 15–9ರಿಂದ ಅಮೋಘ್ ಪೊಲೀಸ್ ಪಾಟೀಲ ವಿರುದ್ಧವೂ, ಕಾನಿಷ್ಕ್ ಭೇಂಗ್ರೆ 15–1, 15–11ರಿಂದ ಸಿದ್ಧಾಂತ್ ಬಾಲಕುಮಾರನ್ ಎದುರೂ ಜಯಗಳಿಸಿದರು.
ಪ್ರೀ ಕ್ವಾರ್ಟರ್‌ಗೆ ಚಂದನ: ಬಾಲಕಿಯರ ಸಿಂಗಲ್ಸ್‌ನಲ್ಲಿ ಬೆಂಗಳೂರಿನ ಚಂದನ ಸಿ. ಮತ್ತು ಪ್ರಣಿಕಾ ಪ್ರಭಾಕರನ್ ಪ್ರೀ ಕ್ವಾರ್ಟರ್ ಫೈನಲ್ ಪ‍್ರವೇಶಿಸಿದರು.
ಎರಡನೇ ಸುತ್ತಿನ ಹಣಾಹಣಿಯಲ್ಲಿ ಚಂದನ 15–7, 15–5ರಿಂದ ನಾಗಪ್ರಗ್ನ್ಯಾ ಅವರನ್ನು ಸೋಲಿಸಿದರೆ, ಪ್ರಣಿಕಾ 15–2, 15–4ರಿಂದ ಸಂಜನಾ ಹೀರಾ ಎದುರು ಜಯಿಸಿದರು.
ಇತರ ಪ್ರಮುಖ ಪಂದ್ಯಗಳಲ್ಲಿ ನಿತ್ಯಾ 15–8, 15–9ರಿಂದ ದೀಕ್ಷಾಶ್ರೀ ಬಾಲಾಜಿ ಎದುರೂ, ಆರ್ನಾ ಅಸುಂಡಿ 16–14, 15–11ರಿಂದ ಸೋನಾಲಿ ಎಸ್ ಮೇಲೂ, ಕಾವ್ಯಾ ಬಾಂದೇಕರ್ 15–13, 15–12ರಿಂದ ಕೆ.ಗೆಹ್ನಾ ಭೀಮಯ್ಯ ವಿರುದ್ಧವೂ ಗೆಲುವು ಕಂಡರು.
ಎಂಟರ ಘಟ್ಟಕ್ಕೆ ವಿಶಾಲ್: 15 ವರ್ಷದೊಳಗಿನ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಅಗ್ರ ಶ್ರೇಯಾಂಕಿತ ಆಟಗಾರ ವಿಶಾಲ್ ಡಿ.ಆನಂದ್ ಎಂಟರ ಘಟ್ಟಕ್ಕೆ ಮುನ್ನಡೆದರು. ಮೂರನೇ ಸುತ್ತಿನ ಪಂದ್ಯದಲ್ಲಿ ಇವರು 15–10, 15–1ರಿಂದ ಅಥರ್ವ ತಿಮ್ಮಯ್ಯ ಅವರನ್ನು ಪರಾಭವಗೊಳಿಸಿದರು.
ಇತರ ಪಂದ್ಯಗಳಲ್ಲಿ ಪ್ರಣವ್ ಅಗರವಾಲ್ 17–15, 15–8ರಿಂದ ವೇದಾಂತ್ ರಾಜೀವ ಎದುರೂ, ರಿಷಿಕ್ ಬಸವರಾಜ್ 11–15, 19–17, 15–9ರಿಂದ ಅಶ್ವಿನ್ ಎ.ಶೆಟ್ಟಿ ವಿರುದ್ಧವೂ ಜಯ ಸಾಧಿಸಿದರು.
ಬಾಲಕಿಯರ ವಿಭಾಗದ 16ರ ಘಟ್ಟದ ಹೋರಾಟಗಳಲ್ಲಿ ಸಂಸ್ಕೃತಿ ಚವ್ಹಾಣ್ 15–8, 17–15ರಲ್ಲಿ ಭುವಿ ಮಾನೆ ಎದುರೂ, ಚಂದನ ಬಿ.ಎಸ್ 13–15, 15–13, 15–9ರಲ್ಲಿ ಹರ್ಷಿಣಿ ಶಂಕರ್ ಮೇಲೂ, ಲೇಖನಿ ಶ್ರೀನಿವಾಸ್ 15–7, 15–8ರಿಂದ ಮಧುರ ಪ್ರಸಾದ್ ವಿರುದ್ಧವೂ ವಿಜಯಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.