ADVERTISEMENT

ಸರ್ಕಾರಿ ನೌಕರರ ರಾಜ್ಯ ಮಟ್ಟದ ಸಮಾವೇಶ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 0:42 IST
Last Updated 22 ಜನವರಿ 2021, 0:42 IST

ದಾವಣಗೆರೆ: ಸರ್ಕಾರಿ ನೌಕರರ ರಾಜ್ಯ ಮಟ್ಟದ ಸಮಾವೇಶ ಜ. 23, 24ರಂದು ಹರಿಹರ ತಾಲ್ಲೂಕಿನ ಕೊಂಡಜ್ಜಿಯ ಕೊಂಡಜ್ಜಿ ಬಸಪ್ಪ ಸ್ಕೌಟ್ಸ್ ಅಂಡ್‌ ಗೈಡ್ಸ್‌ ನಿಸರ್ಗಧಾಮದಲ್ಲಿ ನಡೆಯಲಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಮಹದೇವಯ್ಯ ಮಠಪತಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರಿ ನೌಕರರ ಹಲವು ಸಮಸ್ಯೆಗಳ ಕುರಿತು ಚರ್ಚಿಸಲು ಸಮಾವೇಶ ಆಯೋಜಿಸಲಾಗಿದ್ದು, 23ರಂದು ಮಧ್ಯಾಹ್ನ 1.30ಕ್ಕೆ ಮೇಯರ್‌ ಬಿ.ಜಿ. ಅಜಯ್‌ಕುಮಾರ್‌ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿ ಕೆ.ಎಂ. ಸುರೇಶ್‌, ರೇಣುಕಾರಾಧ್ಯ, ಪಿ.ಗುರುಸ್ವಾಮಿ, ಸರ್ಕಾರಿ ನೌಕರರ ಸಂಘದ ಬಿ.ಫಾಲಾಕ್ಷಿ ಸೇರಿ ಹಲವರು ಭಾಗವಹಿಸುವರು’ ಎಂದು ತಿಳಿಸಿದರು.

ರಾಜ್ಯ, ಕೇಂದ್ರ ಸರ್ಕಾರಗಳು ಸರ್ಕಾರಿ ನೌಕರರ ಮೇಲೆ ಗದಾಪ್ರಹಾರ ಮಾಡುತ್ತಿವೆ. ಕೊರೊನಾ ವಾರಿಯರ್‌ಗಳಾಗಿ ನೌಕರರು ದುಡಿದಿದ್ದಾರೆ. ಕೆಲವರು ಮೃತಪಟ್ಟಿದ್ದಾರೆ. ಆದರೂ ಸರ್ಕಾರ ನೌಕರರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. 18 ತಿಂಗಳ ಡಿಎ ಮುಟ್ಟುಗೋಲು ಹಾಕಿಕೊಂಡಿದೆ. ದೇಶದಲ್ಲಿಯೇ ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ನೌಕರರು ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಉತ್ತಮ ಆಡಳಿತದಲ್ಲಿ ದೇಶಕ್ಕೆ 3ನೇ ಸ್ಥಾನದಲ್ಲಿದ್ದರೂ ಬೇಡಿಕೆ ಈಡೇರಿಸಲು ಮುಂದಾಗುತ್ತಿಲ್ಲ ಎಂದು ದೂರಿದರು.

ADVERTISEMENT

ಇಲಾಖೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಕ ಮಾಡಿಕೊಂಡು ಸರ್ಕಾರ ಶೋಷಣೆ ಮಾಡುತ್ತಿದೆ.ಏಜೆನ್ಸಿಗಳು ನೌಕರರಿಂದ ಹಣ ಪಡೆದು ಕನಿಷ್ಠ ವೇತನಕ್ಕೆ ದುಡಿಸಿಕೊಳ್ಳುತ್ತಿದ್ದಾರೆ. ಬಜೆಟ್‌ನಲ್ಲಿ ನೌಕರರ ವೇತನಕ್ಕೆ ಖರ್ಚಾಗುವುದು ಶೇ 28 ಅನುದಾನ. ಆದರೆ ಶೇ 70 ರಷ್ಟು ಖರ್ಚಾಗುತ್ತಿದೆ ಎಂದು ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದರು.

‘ರಾಜ್ಯ ಸರ್ಕಾರಿ ನೌಕರರ ಸಂಘ ಜೂಜು ಅಡ್ಡೆಯಂತಾಗಿದ್ದು, ಸರ್ಕಾರದ ಮರ್ಜಿಗೆ ಕೆಲಸ ಮಾಡುತ್ತಿದೆ. ಇದರಿಂದ ನೌಕರರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ ಎಂದು ದೂರಿದ ಅವರು, ‘ಸರ್ಕಾರ ನೌಕರರ ಸಂಘ ಹಾಗೂ ಒಕ್ಕೂಟಕ್ಕೆ ನೌಕರರ ಸಮಸ್ಯೆ ಪರಿಹರಿಸುವ ಸಂಬಂಧ ಕೆಲ ತಾತ್ವಿಕ ಭಿನ್ನಾಭಿಪ್ರಾಯ ಇದೆ ಹೊರತು ನಾವೆಲ್ಲ ಒಂದೇ’ ಎಂದರು.

ಒಕ್ಕೂಟದ ಕಾರ್ಯಾಧ್ಯಕ್ಷ ಎನ್‌.ಇ. ನಟರಾಜ್‌, ‘ಸರ್ಕಾರಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಕ ಮಾಡುವ ಬದಲು ಹೊಸ ನೇಮಕಾತಿ ಪ್ರಕ್ರಿಯೆ ಆರಂಭಿಸಲಿ. ಇದರಿಂದ ನಿರುದ್ಯೋಗಿಗಳಿಗೆ ಕಾಯಂ ಉದ್ಯೋಗ ಸಿಗಲಿದೆ. ನೌಕರರ ಕಾರ್ಯಕ್ಷಮತೆ ಬಗ್ಗೆ ಪರೀಕ್ಷೆ ಮಾಡುವ ಬದಲು ಹಿರಿಯ ನೌಕರರ ಅನುಭವವನ್ನು ಬಳಸಿಕೊಳ್ಳಲಿ’ ಎಂದು ಸಲಹೆ ನೀಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್‌. ಮಲ್ಲಿಕಾರ್ಜುನಸ್ವಾಮಿ, ಖಜಾಂಚಿ ಗೋವಿಂದರಾಜು, ಕೆ. ರೇವಣಸಿದ್ಧಪ್ಪ, ರಮೇಶ್‌ ರೆಡ್ಡಿ, ಕೆ.ಎನ್‌. ರಂಗೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.