ADVERTISEMENT

ಎಂಜಿನಿಯರ್‌ ಸೋಗಿನಲ್ಲಿ ಕಳವು: ಒಬ್ಬನ ಸೆರೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 13:30 IST
Last Updated 11 ಸೆಪ್ಟೆಂಬರ್ 2019, 13:30 IST
ದಾವಣಗೆರೆಯ ಎಸ್‌ಪಿ ಕಚೇರಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಕಳವು ಪ್ರಕರಣದ ವಿವರ ನೀಡಿದರು
ದಾವಣಗೆರೆಯ ಎಸ್‌ಪಿ ಕಚೇರಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಕಳವು ಪ್ರಕರಣದ ವಿವರ ನೀಡಿದರು   

ದಾವಣಗೆರೆ: ಪಾಲಿಕೆಯ ಯುಜಿಡಿ ಎಂಜಿನಿಯರ್‌ ಎಂದು ಹೇಳಿಕೊಂಡು ಮನೆಯೊಳಗೆ ಬಂದ ಮೂರು ಮಂದಿಯ ತಂಡ ಮನೆಯವರ ಗಮನ ಬೇರೆಡೆಗೆ ಸೆಳೆದು ಚಿನ್ನಾಭರಣ, ನಗದು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ದುರ್ಗಾಂಬಿಕಾ ಸ್ಕೂಲ್ ಬಳಿಯ ನಿವಾಸಿ ಎಂ.ಎಸ್‌. ಸುಧಾ ಅವರ ಮನೆಗೆ ಆ.16ರಂದು ಮೂವರು ಬಂದಿದ್ದರು. ಲೈನ್‌ ಡ್ರೈನೇಜ್‌ ಲಿಂಕ್‌ ಮಾಡಬೇಕು ಎಂದು ಹೇಳಿದ್ದರು. ಅವರ ಮಾತನ್ನು ನಂಬಿ ಬಾತ್‌ರೂಂ ತೋರಿಸಲು ಇಬ್ಬರನ್ನು ಮೊದಲ ಮಹಡಿಗೆ ಸುಧಾ ಮತ್ತು ಅವರ ಗಂಡ ಕರೆದುಕೊಂಡು ಹೋಗಿದ್ದರು. ಆಗ ಕೆಳಗಡೆ ಇದ್ದ ಅಜ್ಜಿಯ ಗಮನವನ್ನು ಬೇರೆಡೆಗೆ ತಿರುಗಿಸಿ ಮೂರನೇ ವ್ಯಕ್ತಿ 430 ಗ್ರಾಂ ಚಿನ್ನದ ಒಡವೆಗಳನ್ನು ಮತ್ತು ₹ 29 ಸಾವಿರ ಕಳವು ಮಾಡಿದ್ದ. ಬಳಿಕ ಮೂವರು ಪರಾರಿಯಾಗಿದ್ದರು.

ಈ ಪ್ರಕರಣದ ಪತ್ತೆಗಾಗಿ ವೃತ್ತ ನಿರೀಕ್ಷಕ ತಿಮ್ಮಣ್ಣ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ತಂಡವು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನವನಾದ, ಸದ್ಯ ಇಲ್ಲಿನ ಮಂಡಕ್ಕಿಭಟ್ಟಿ ಬಳಿ ನಿವಾಸಿ ಎಚ್‌ ವೇಣುಗೋಪಾಲ (28) ಎಂಬಾತನನ್ನು ಬಂಧಿಸಿದೆ. ಆತನಿಂದ ₹ 6 ಲಕ್ಷ ಮೌಲ್ಯದ 175 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಇನ್ನಿಬ್ಬರ ಬಗ್ಗೆ ಸುಳಿವು ದೊರೆತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಅಪರಿಚಿತರ ಬಗ್ಗೆ ಎಚ್ಚರದಿಂದಿರಿ’

ಪೊಲೀಸರಿದ್ದಾರೆ, ಕಳ್ಳರಿದ್ದಾರೆ ಎಂದೆಲ್ಲ ಬೇರೆ ಬೇರೆ ಕಾರಣಗಳನ್ನು ನೀಡಿ ಗಮನ ಬೇರೆಡೆಗೆ ಸೆಳೆದು ಕಳವು ಮಾಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಅದೇ ರೀತಿ ಆಸ್ಪತ್ರೆಗಳಲ್ಲಿ ಚಿನ್ನಾಭರಣ ಹಾಕಿಕೊಂಡಿರುವ ಮಹಿಳೆಯರನ್ನು ಮೋಸ ಮಾಡುವವರೂ ಜಾಸ್ತಿಯಾಗಿದ್ದಾರೆ. ಈ ಬಗ್ಗೆ ಎಚ್ಚರದಿಂದ ಇರಬೇಕು. ಫ್ರಿಜ್ಜ್‌, ಎ.ಸಿ, ಯುಜಿಡಿ ರಿಪೇರಿ ಎಂದು ಹೇಳಿಕೊಂಡು ಬರುವ ಅಪರಿಚಿತರನ್ನು ಮನೆಗೆ ಬಿಟ್ಟುಕೊಳ್ಳಬಾರದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್‌ಪಿ ಮಂಜುನಾಥ ಗಂಗಲ್‌, ವೃತ್ತ ನಿರೀಕ್ಷಕ ಎನ್‌. ತಿಮ್ಮಣ್ಣ, ಕೆಟಿಜೆನಗರ ಪಿಎಸ್‌ಐ ನಾಗರಾಜ್‌ ಮತ್ತು ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.