ADVERTISEMENT

ನಾಯಕನಹಟ್ಟಿ | ಕಲ್ಲು ತೂರಿ ಪರಾರಿ; ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 15:12 IST
Last Updated 28 ಜುಲೈ 2024, 15:12 IST
<div class="paragraphs"><p>ಬಂಧನ( ಸಾಂಕೇತಿಕ ಚಿತ್ರ)</p></div>

ಬಂಧನ( ಸಾಂಕೇತಿಕ ಚಿತ್ರ)

   

ನಾಯಕನಹಟ್ಟಿ: ಪೊಲೀಸರ ಜೀಪ್‌ ಮೇಲೆ ಕಲ್ಲು ತೂರಿ ಪರಾರಿಯಾಗಿದ್ದ ಆಂಧ್ರಪ್ರದೇಶ ಮೂಲದ 8 ಜನರ ಕಳ್ಳರ ಗುಂಪಿನಲ್ಲಿದ್ದ ಒಬ್ಬ ಆರೋಪಿಯನ್ನು ನಾಯಕನಹಟ್ಟಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಆಂಧ್ರಪ್ರದೇಶದ ಅನಂತಪುರದಲ್ಲಿ ನೆಲೆಸಿದ್ದ ರಮಣ ಬಂಧಿತ ಆರೋಪಿ. ಕೃತ್ಯಕ್ಕೆ ಬಳಸಿದ್ದ ಬೊಲೆರೋ ಗೂಡ್ಸ್‌ ವಾಹನವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜುಲೈ 20ರ ರಾತ್ರಿ ನಾಯಕನಹಟ್ಟಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಬೊಲೆರೋ ಗೂಡ್ಸ್‌ ವಾಹನವನ್ನು ಪೊಲೀಸರು ತಪಾಸಣೆ ನಡೆಸಲು ಮುಂದಾದಾಗ, ಕಳ್ಳರು ತಪ್ಪಿಸಿಕೊಂಡು ಮುಂದೆ ಸಾಗಿದ್ದರು. ಪಿಎಸ್‌ಐ ಕೆ.ಶಿವಕುಮಾರ್ ಕೂಡಲೇ ಕಳ್ಳರ ಬೆನ್ನಟ್ಟಿದ್ದರು. ಹೋಬಳಿಯ ಕುದಾಪುರ ಗ್ರಾಮದಲ್ಲಿ ಬೊಲೆರೋ ಗೂಡ್ಸ್‌ ವಾಹನವನ್ನು ತಡೆದಾಗ, ಕಳ್ಳರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಪೊಲೀಸ್ ಜೀಪ್ ಜಖಂಗೊಂಡಿತ್ತು. ಪಿಎಸ್‌ಐ ಕೆ.ಶಿವಕುಮಾರ್ 5 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಹೆದರಿದ್ದ ಕಳ್ಳರು ಸಿನಿಮೀಯವಾಗಿ ಪರಾರಿಯಾಗಿದ್ದರು.

ADVERTISEMENT

ಪೊಲೀಸರು 25 ಕಿ.ಮೀ. ದೂರದವರೆಗೆ ಹಿಂಬಾಲಿಸಿದ್ದರೂ, ತಳಕು ಹೋಬಳಿಯ ಬುಕ್ಕಂಬೂದಿ ಗ್ರಾಮದ ಬಳಿ ಕಳ್ಳರು ಕಣ್ಮರೆಯಾಗಿದ್ದರು. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್ ಮೀನಾ ಭೇಟಿ ನೀಡಿ ಪರಿಶೀಲಿಸಿದ್ದರು. ಕಳ್ಳರ ಪತ್ತೆಗಾಗಿ ವಿಶೇಷ ತನಿಖಾ ದಳವನ್ನು ರಚಿಸಿದ್ದರು.

ಪಿಎಸ್‌ಐ ಕೆ.ಶಿವಕುಮಾರ್ ನೇತೃತ್ವದ ಪೊಲೀಸರ ತಂಡ ವಾರದಿಂದ ಅನಂತಪುರ ಜಿಲ್ಲೆಯ ಹಲವೆಡೆ ಕಳ್ಳರಿಗಾಗಿ ಶೋಧ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.