ADVERTISEMENT

ದಾವಣಗೆರೆ| ಬೀದಿ ನಾಯಿ ನಿಯಂತ್ರಣ: ಸವಾಲಿನ ನಡುವೆ ಬಿರುಸಿನ ಯತ್ನ

ಶ್ವಾನಗಳ ಆರೈಕೆಗೆ ಆಶ್ರಯ ಕೇಂದ್ರ ನಿರ್ಮಾಣಕ್ಕೆ ಸಿದ್ಧತೆ; ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಕಾರ್ಯದಲ್ಲಿ ಪ್ರಗತಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 5:45 IST
Last Updated 22 ಡಿಸೆಂಬರ್ 2025, 5:45 IST
<div class="paragraphs"><p>ದಾವಣಗೆರೆಯ ಕುಂದವಾಡ ಕೆರೆ ಪ್ರವೇಶದ್ವಾರದ ಪಾದಚಾರಿ ಮಾರ್ಗದಲ್ಲಿ ಹತ್ತಕ್ಕೂ ಹೆಚ್ಚು ಬೀದಿ ನಾಯಿಗಳು ಗುಂಪು ಸೇರುತ್ತಿದ್ದು, ಜನರು ಇವುಗಳ ಭೀತಿಯಲ್ಲೇ ವಾಯುವಿಹಾರ ನಡೆಸುವಂತಾಗಿದೆ</p></div>

ದಾವಣಗೆರೆಯ ಕುಂದವಾಡ ಕೆರೆ ಪ್ರವೇಶದ್ವಾರದ ಪಾದಚಾರಿ ಮಾರ್ಗದಲ್ಲಿ ಹತ್ತಕ್ಕೂ ಹೆಚ್ಚು ಬೀದಿ ನಾಯಿಗಳು ಗುಂಪು ಸೇರುತ್ತಿದ್ದು, ಜನರು ಇವುಗಳ ಭೀತಿಯಲ್ಲೇ ವಾಯುವಿಹಾರ ನಡೆಸುವಂತಾಗಿದೆ

   

ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ

ದಾವಣಗೆರೆ: ಶಾಲಾ ಮೈದಾನ, ಬಸ್ ನಿಲ್ದಾಣ, ಮಾರುಕಟ್ಟೆ ಪ್ರದೇಶ ಎನ್ನದೆ ಎಲ್ಲೆಡೆಯೂ ತಮ್ಮ ಗುಂಪಿನೊಂದಿಗೆ ನುಗ್ಗಿ ದಾಳಿಗೆ ಮುಂದಾಗುವ ಬೀದಿ ನಾಯಿಗಳು ಜನವಸತಿ ಪ್ರದೇಶಗಳಲ್ಲೂ ಜನರ ನಿದ್ದೆಗೆಡಿಸಿವೆ. ಮಕ್ಕಳಿಗೂ ಬೆನ್ನುಬಿದ್ದು ಕಾಟ ಕೊಡುತ್ತಿರುವ ಅವುಗಳ ನಿಯಂತ್ರಣ ನಿಜಕ್ಕೂ ಸವಾಲಿನ ಕೆಲಸವಾಗಿದೆ. ಈ ನಿಟ್ಟಿನಲ್ಲಿ, ಬೀದಿ ನಾಯಿಗಳ ನಿಯಂತ್ರಣಕ್ಕೆ ಮುಂದಾಗುವಂತೆ ಸುಪ್ರೀಂ ಕೋರ್ಟ್ ಈಚೆಗೆ ನೀಡಿರುವ ನಿರ್ದೇಶನ ಪಾಲಿಸಲು ನಗರ ಸ್ಥಳೀಯ ಸಂಸ್ಥೆಗಳು ಮುಂದಾಗಿದ್ದು, ಜಿಲ್ಲಾಡಳಿತವೂ ಬಿರುಸಿನ ತಯಾರಿ ನಡೆಸಿದೆ.

ADVERTISEMENT

ದಾವಣಗೆರೆ ಮಹಾನಗರ ಪಾಲಿಕೆ, ಹರಿಹರ ನಗರಸಭೆ, ಹೊನ್ನಾಳಿ, ಚನ್ನಗಿರಿ, ಮಲೇಬೆನ್ನೂರು ಪುರಸಭೆ, ನ್ಯಾಮತಿ, ಜಗಳೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅನುಷ್ಠಾನ ಕೆಲಸಗಳು ನಡೆಯುತ್ತಿವೆ. ಬೀದಿನಾಯಿಗಳ ಸಂತಾನವನ್ನು ನಿಯಂತ್ರಿಸಬೇಕಿದ್ದು, ಅವುಗಳಿಗೆ ಕಡ್ಡಾಯವಾಗಿ ಜನನ ನಿಯಂತ್ರಣ (ಎಬಿಸಿ) ಶಸ್ತ್ರಚಿಕಿತ್ಸೆ ನಡೆಸಿ, ರೇಬಿಸ್ ಚುಚ್ಚುಮದ್ದು ನೀಡಬೇಕಿದೆ.

ಜಿಲ್ಲೆಯಲ್ಲಿ ನಾಯಿ ಕಡಿತದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. 2024ರಲ್ಲಿ 5,776 ಪ್ರಕರಣ ವರದಿಯಾಗಿದ್ದವು. 2025ರ ನವೆಂಬರ್‌ವರೆಗೆ ಇವುಗಳ ಸಂಖ್ಯೆ 9,263ಕ್ಕೆ ಏರಿಕೆಯಾಗಿರುವುದು ದಿಗಿಲು ಮೂಡಿಸಿದೆ. ಈ ವರ್ಷ ನಾಯಿ ದಾಳಿಯಿಂದ ಇಬ್ಬರು ಮೃತಪಟ್ಟಿದ್ದಾರೆ. 

ಬೀದಿ ನಾಯಿಗಳ ಉಪಟಳ ನಿಯಂತ್ರಣಕ್ಕೆ ಎರಡು ಮಾರ್ಗಗಳನ್ನು ಸೂಚಿಸಲಾಗಿದೆ. ಪ್ರಾಣಿ ಜನನ ನಿಯಂತ್ರಣಕ್ಕೆ ಶಸ್ತ್ರಚಿಕಿತ್ಸೆ ನಡೆಸುವುದು ಹಾಗೂ ಅವುಗಳ ನಿರ್ವಹಣೆಗೆ ಆಶ್ರಯ ಕೇಂದ್ರ ತೆರೆಯುವುದರಿಂದ ಸಮಸ್ಯೆ ತಹಬದಿಗೆ ಬರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಾಸ್ಟೆಲ್, ಆಸ್ಪತ್ರೆ, ಬಸ್ ನಿಲ್ದಾಣ, ರೈಲು ನಿಲ್ದಾಣ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧ ಸಂಸ್ಥೆಗಳ (ಇನ್‌ಸ್ಟಿಟ್ಯೂಷನ್) ಆವರಣಕ್ಕೆ ನುಗ್ಗುವ ಬೀದಿ ನಾಯಿಗಳನ್ನು ಸೆರೆಹಿಡಿದು, ಅವುಗಳನ್ನು ಸ್ಥಳೀಯಾಡಳಿತ ಗೊತ್ತುಪಡಿಸಿದ ಆಶ್ರಯ ಕೇಂದ್ರಕ್ಕೆ ರವಾನಿಸಿ ಅಲ್ಲಿ ಆರೈಕೆ ಮಾಡಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.

ಇನ್ನು, ಜನಸವತಿ ಪ್ರದೇಶಗಳು ಹಾಗೂ ಬೀದಿಗಳಲ್ಲಿ ಅಡ್ಡಾಡುವ ನಾಯಿಗಳನ್ನು ಸೆರೆಹಿಡಿದು ಅವುಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಬೇಕಿದೆ. ಆದರೆ, ಶಸ್ತ್ರಚಿಕಿತ್ಸೆ ಬಳಿಕ ಅವುಗಳನ್ನು ಮೊದಲಿದ್ದ ಜಾಗದಲ್ಲೇ ಬಿಡಬೇಕು ಎಂದು ಸೂಚಿಸಲಾಗಿದೆ.

‘ಈ ನಿಟ್ಟಿನಲ್ಲಿ, ಎಲ್ಲ ನಗರ ಸ್ಥಳೀಯಾಡಳಿತ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಕೈಗೊಳ್ಳಲು ಹಾಗೂ ಆಶ್ರಯ ಕೇಂದ್ರದಲ್ಲಿ ಅವುಗಳನ್ನು ಆರೈಕೆ ಮಾಡುವ ಉದ್ದೇಶದಿಂದ ಟೆಂಡರ್ ಕರೆಯಲಾಗಿದೆ. ಬಹುತೇಕ ಕಡೆ ಆಶ್ರಯ ಕೇಂದ್ರಗಳಿಗೆ ಕಟ್ಟಡಗಳನ್ನು ಗುರುತಿಸುವ ಕೆಲಸ ಪೂರ್ಣಗೊಂಡಿದೆ. ಈ ಉದ್ದೇಶಕ್ಕೆ ದಾವಣಗೆರೆ ಮಹಾನಗರ ಪಾಲಿಕೆಗೆ ₹80 ಲಕ್ಷ ಹಾಗೂ ಹರಿಹರ ನಗರಸಭೆಗೆ ₹30 ಲಕ್ಷ ಅನುದಾನ ಬಿಡುಗಡೆಯಾಗಿದೆ’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾಹಿತಿ ನೀಡಿದರು.

ಬೀದಿ ನಾಯಿ ಸೆರೆ, ಶಸ್ತ್ರಚಿಕಿತ್ಸೆ ಹಾಗೂ ಆಶ್ರಯ ತಾಣ ನಿರ್ವಹಣೆ ವಿಚಾರದಲ್ಲಿ ಪ್ರಾಣಿದಯಾ ಸಂಘಟನೆಗಳನ್ನು ತೊಡಗಿಸಿಕೊಳ್ಳಲಾಗುತ್ತಿದೆ. ಬೀದಿ ನಾಯಿಗಳಿಗೆ ಯಾವುದೇ ರೀತಿಯ ಹಿಂಸೆ ಆಗದಂತೆ ಇಡೀ ಪ್ರಕ್ರಿಯೆಯನ್ನು ನಿರ್ವಹಿಸಬೇಕಿದೆ. ಶ್ವಾನಗಳಿಗೆ ಅಗತ್ಯ ಪ್ರಮಾಣದ ಆಹಾರ ನೀಡಿ‌‌‌ಕೆ, ಅವುಗಳ ಆರೈಕೆ, ಕೇಂದ್ರಗಳ ನಿರ್ವಹಣೆಯ ಮೇಲ್ವಿಚಾರಣೆಯನ್ನು ಸಂಘಗಳು ನೋಡಿಕೊಳ್ಳಲಿವೆ.

ನೋಡಲ್ ಅಧಿಕಾರಿ ನೇಮಕ: 

ಜಿಲ್ಲಾಡಳಿತದ ಸೂಚನೆ ಪ್ರಕಾರ, ಬಸ್‌ ನಿಲ್ದಾಣ ಸೇರಿದಂತೆ ನಗರ ವ್ಯಾಪ್ತಿಯ ಸಂಸ್ಥೆಗಳು ತಮ್ಮ ಒಬ್ಬ ಸಿಬ್ಬಂದಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿವೆ. ತಮ್ಮ ಸಂಸ್ಥೆಯ ಆವರಣದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಆಯಾ ನೋಡಲ್ ಅಧಿಕಾರಿಗೆ ವಹಿಸಲಾಗಿದೆ. ಸಂಸ್ಥೆಯ ಆವರಣಕ್ಕೆ ಬೀದಿ ನಾಯಿಗಳು ನುಗ್ಗದಂತೆ ತಡೆಯಲು ಫೆನ್ಸಿಂಗ್ ಅಳವಡಿಸಿಕೊಳ್ಳುವುದೂ ಸೇರಿದಂತೆ ವಿವಿಧ ಕ್ರಮಗಳನ್ನು ಅವರು ಕೈಗೊಳ್ಳಬೇಕಿದೆ. ಈ ಕ್ರಮದಿಂದ ಸಂಸ್ಥೆಯ ಆವರಣವು ಬೀದಿ ನಾಯಿಗಳ ತೊಂದರೆಯಿಂದ ಮುಕ್ತವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

ಸ್ಥಳೀಯ ಸಂಸ್ಥೆಗಳ ವಸ್ತುಸ್ಥಿತಿ: 

ದಾವಣಗೆರೆ ನಗರದ ಹೊರವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಟ್ಟಡವೊಂದರಲ್ಲಿ ಈಗಾಗಲೇ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ಈ ಘಟಕದಲ್ಲೇ, ಬಾಕಿ ಶ್ವಾನಗಳ ಶಸ್ತ್ರಚಿಕಿತ್ಸೆಯೂ ನಡೆಯಲಿದೆ. ಇದೇ ಘಟಕವನ್ನು ಆಶ್ರಯ ತಾಣವನ್ನಾಗಿ ಪರಿವರ್ತಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು.  

ದಾವಣಗೆರೆ ನಗರವನ್ನು ಹೊರತುಪಡಿಸಿದರೆ, ಉಳಿದ ಸ್ಥಳೀಯ ಸಂಸ್ಥೆಗಳಲ್ಲಿ ಬೀದಿ ನಾಯಿಗಳಿಗೆ ಆರೈಕೆ ಕೇಂದ್ರ ತೆರೆಯುವುದು ಹಾಗೂ ಅವುಗಳನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸುವ ಪ್ರಕ್ರಿಯೆಗಳು ಇನ್ನಷ್ಟೇ ಆಗಬೇಕಿವೆ. ಹರಿಹರ, ಚನ್ನಗಿರಿ, ಮಲೇಬೆನ್ನೂರು, ಜಗಳೂರು, ಹೊನ್ನಾಳಿ, ನ್ಯಾಮತಿಯಲ್ಲಿ ಆರೈಕೆ ಕೇಂದ್ರ ತೆರೆಯುವ ಉದ್ದೇಶಕ್ಕೆ ಅಗತ್ಯವಿರುವ ಕಟ್ಟಡವನ್ನು ಬಹುತೇಕ ಅಂತಿಮಗೊಳಿಸಲಾಗಿದೆ.

ಹರಿಹರ ನಗರಸಭೆಯಿಂದ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸುವ ಉದ್ದೇಶದಿಂದ ಈ ಹಿಂದೆ ಟೆಂಡರ್ ಕರೆಯಲಾಗಿತ್ತು. ಸರ್ಕಾರಕ್ಕೆ ಸೇರಿದ ಎಸ್‌ಟಿಪಿ ಲ್ಯಾಂಡ್‌ನಲ್ಲಿ ಬೀದಿ ನಾಯಿಗಳ ಆಶ್ರಯ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ. ಚನ್ನಗಿರಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂಖ್ಯೆ ಕಡಿಮೆಯಿದೆ. ಟೆಂಡರ್‌ ಕರೆದಿದ್ದು, ಯಾರೂ ಮುಂದೆ ಬಾರದಿದ್ದರೆ, ಶಸ್ತ್ರಚಿಕಿತ್ಸೆ ನಡೆಸುವ ಕಾರ್ಯಕ್ಕೆ ಪಶು ವೈದ್ಯಕೀಯ ಇಲಾಖೆಯ ವೈದ್ಯರನ್ನೇ ಬಳಸಿಕೊಂಡು, ತ್ವರಿತವಾಗಿ ಮುಗಿಸಲು ಚಿಂತನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

‘ಶ್ವಾನಗಳನ್ನು ದತ್ತು ಪಡೆಯಲು ಸರ್ಕಾರೇತರ ಸಂಸ್ಥೆಯೊಂದು (ಎನ್‌ಜಿಒ) ಮುಂದೆ ಬಂದಿದೆ. ಬೀದಿ ನಾಯಿಗಳಿಗೆ ಯಾವುದೇ ರೀತಿಯ ಹಿಂಸೆ ನೀಡದೇ, ಅವುಗಳಿಗೆ ಊಟ ನೀಡುವುದು, ಸೂಕ್ತವಾಗಿ ಆರೈಕೆ ಮಾಡುವುದೂ ಸೇರಿದಂತೆ ಇನ್ನಿತರ ನಿಬಂಧನೆಗಳನ್ನು ಪಾಲಿಸಲು ಒಪ್ಪಿದರೆ, ಅದಕ್ಕೆ ಜವಾಬ್ದಾರಿ ನೀಡಲಾಗುವುದು. ಈ ಬಗ್ಗೆ ಇನ್ನಷ್ಟೇ ಸಭೆ ನಡೆಸಬೇಕಿದೆ’ ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದರು.

ದಾವಣಗೆರೆ ನಗರದ ಕುಂದವಾಡ ಕೆರೆಯ ಸಮೀಪ ಶನಿವಾರ ಬೀದಿ ನಾಯಿಯೊಂದನ್ನು ಸೆರೆಹಿಡಿದ ಸಿಬ್ಬಂದಿ
ದಾವಣಗೆರೆಯ ಕುಂದವಾಡ ಮುಖ್ಯರಸ್ತೆಯಲ್ಲಿ ಕಂಡುಬಂದ ಬೀದಿ ನಾಯಿಗಳು
ದಾವಣಗೆರೆ ಮಹಾನಗರ ಪಾಲಿಕೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಿಂದ ಟೆಂಡರ್ ಕರೆಯಲಾಗಿದೆ. ಆಶ್ರಯ ಕೇಂದ್ರಗಳು ಮುಂದಿನ ಒಂದು ತಿಂಗಳಲ್ಲಿ ಕಾರ್ಯಾರಂಭಕ್ಕೆ ಸಜ್ಜುಗೊಳ್ಳಲಿವೆ
ಜಿ.ಎಂ.ಗಂಗಾಧರಸ್ವಾಮಿ ಜಿಲ್ಲಾಧಿಕಾರಿ
ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು 16000 ನಾಯಿಗಳನ್ನು ಎಬಿಸಿ ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಉಳಿದ ಅಂದಾಜು 6000 ನಾಯಿಗಳಿಗೆ ಸದ್ಯದಲ್ಲೇ ಶಸ್ತ್ರಚಿಕಿತ್ಸೆ ಪೂರ್ಣಗೊಳ್ಳಲಿದೆ
ರೇಣುಕಾ ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತೆ

ವಾರ್ಡ್‌ಗೊಂದು ಫುಡ್ ಝೋನ್

ಬಹುತೇಕ ನಗರ ಸ್ಥಳೀಯ ಸಂಸ್ಥೆಗಳು ತ್ಯಾಜ್ಯ ಸಂಗ್ರಹಕ್ಕೆ ವೈಜ್ಞಾನಿಕ ವಿಧಾನ ಅನುಸರಿಸುತ್ತಿವೆ. ಜನರು ಎಲ್ಲೆಂದರಲ್ಲಿ ಎಸೆಯದೇ ಹಸಿಕಸ ಹಾಗೂ ಒಣಕಸವನ್ನು ಪ್ರತ್ಯೇಕಿಸಿ ವಾಹನಕ್ಕೆ ನೀಡಬೇಕಿರುವುದರಿಂದ ನಾಯಿಗಳಿಗೆ ಸಹಜವಾಗಿ ಸಿಗುತ್ತಿದ್ದ ಆಹಾರ ಪದಾರ್ಥಗಳ ಕೊರತೆಯುಂಟಾಗಿದೆ. ಹಸಿವಿನಿಂದ ಹತಾಶೆಗೊಂಡ ಕೆಲ ನಾಯಿಗಳು ಜನರ ಮೇಲೆ ಎರಗುತ್ತಿರಬಹುದು ಎಂದು ನಾಗರಿಕರೊಬ್ಬರು ಅಭಿಪ್ರಾಯಪಟ್ಟರು. ಹೀಗಿದ್ದೂ ನಗರ ಪ್ರದೇಶದಲ್ಲಿ ಬೀದಿ ನಾಯಿಗಳಿಗೆ ಎಲ್ಲೆಂದರಲ್ಲಿ ಆಹಾರ ಹಾಕುವುದನ್ನು ಕೆಲವರು ರೂಢಿ ಮಾಡಿಕೊಂಡಿದ್ದಾರೆ. ಅವು ಜನರ ಸುತ್ತಲೇ ಗಿರಕಿ ಹೊಡೆಯುತ್ತವೆ. ಆಹಾರ ಪದಾರ್ಥ ಹಿಡಿದು ಹೋಗುವವರ ಮೇಲೂ ದಾಳಿ ನಡೆಸುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ದಾವಣಗೆರೆ ನಗರದ ಪ್ರತೀ ವಾರ್ಡ್‌ನಲ್ಲಿ ಬೀದಿನಾಯಿಗಳಿಗೆ ಆಹಾರ ಹಾಕಲು ಒಂದು ಪ್ರತ್ಯೇಕ ಜಾಗವನ್ನು (ಫುಡ್ ಝೋನ್) ಗೊತ್ತುಪಡಿಸಲು ಪಾಲಿಕೆ ಮುಂದಾಗಿದೆ. ವಾರ್ಡ್ ನಿವಾಸಿಗಳು ಬೀದಿ ನಾಯಿಗಳಿಗೆ ಬಿಸ್ಕೇಟ್‌ ಅಥಾವ ಇನ್ನಾವುದೇ ಸ್ವರೂಪದ ಆಹಾರ ನೀಡಬೇಕಿದ್ದರೆ ಗೊತ್ತುಪಡಿಸಿದ ಜಾಗದಲ್ಲೇ ತಂದು ಹಾಕಬೇಕು ಎಂಬ ನಿಯಮ ಜಾರಿಗೆ ತರುವ ಚಿಂತನೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.