ADVERTISEMENT

ಮನೆಯಂಗಳದಲ್ಲಿ ಇದ್ದ ಬಾಲಕಿಯ ಮೇಲೆ ಬೀದಿನಾಯಿಗಳ ದಾಳಿ: ಸ್ಥಿತಿ ಗಂಭೀರ

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 6:51 IST
Last Updated 6 ಜೂನ್ 2021, 6:51 IST
ಸಂತ್ರಸ್ತ ಬಾಲಕಿ 
ಸಂತ್ರಸ್ತ ಬಾಲಕಿ    

ದಾವಣಗೆರೆ: ಮನೆಯಂಗಳದಲ್ಲಿ ಭಾನುವಾರ ಇದ್ದ ಬಾಲಕಿಯನ್ನು ಎಳೆದುಕೊಂಡು ಹೋಗಿ ಬೀದಿನಾಯಿಗಳು ಕಚ್ಚಿವೆ. ಬಾಲಕಿಯ ಸ್ಥಿತಿ ಗಂಭೀರವಾಗಿದೆ.

ಆಜಾದ್‌ನಗರ ಎರಡನೇ ಮೈನ್‌ ನಿವಾಸಿ ತಲಾಂ ಶೇಖ್‌– ತಬುಸುಂ ಬಾನು ದಂಪತಿಯ ನಾಲ್ಕು ವರ್ಷದ ಮಗು ಕನಿಷ್‌ ಫಾತಿಮಾ ಗಂಭೀರವಾಗಿ ಗಾಯಗೊಂಡವಳು.

ಭಾನುವಾರ ಮುಂಜಾನೆ ಹೆತ್ತವರು ನಮಾಜ್‌ ಮಾಡುತ್ತಿರುವ ಹೊತ್ತಿಗೆ ಮಗು ಅಂಗಳಕ್ಕೆ ಬಂದಾಗ ನಾಲ್ಕೈದು ನಾಯಿಗಳು ಎರಗಿ ಎಳೆದುಕೊಂಡು ಹೋಗಿವೆ. ಕೂಡಲೇ ಮನೆಯವರು ಬಂದು ಬಿಡಿಸಿದ್ದಾರೆ. ಅಷ್ಟು ಹೊತ್ತಿಗೆ ತಲೆ, ಕೈ. ಕಾಲು ಸಹಿತ ದೇಹದ ವಿವಿಧೆಡೆ ನಾಯಿಗಳು ಕಚ್ಚಿವೆ. ಮಗುವನ್ನು ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ತಲಾಂ ಶೇಖ್‌ ತರಗಾರ ಕೆಲಸ ಮಾಡುವವರಾಗಿದ್ದು, ಬಾಡಿಗೆ ಮನೆಯಲ್ಲಿದ್ದಾರೆ. ಈಗ ಕೂಲಿ ಕೆಲಸವೂ ಇಲ್ಲದೇ ಬಾಡಿಗೆ ಕಟ್ಟಲೂ ಆಗದ ಪರಿಸ್ಥಿತಿಯಲ್ಲಿದ್ದಾರೆ. ಇಂಥ ಸಮಯದಲ್ಲಿ ಮಗುವಿಗೆ ನಾಯಿ ಕಚ್ಚಿದೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಬಿಲ್‌ ಕಟ್ಟಲೂ ಹಣ ಇಲ್ಲದ ಪರಿಸ್ಥಿತಿಯಲ್ಲಿದ್ದಾರೆ. ಸರ್ಕಾರ ಅವರ ನೆರವಿಗೆ ಧಾವಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಟಿ. ಜಪ್ಪು, ಉಬೇದುಲ್ಲಾ ತಿಳಿಸಿದ್ದಾರೆ.

ನಾಯಿಗಳ ಉಪಟಳದಿಂದ ಮಕ್ಕಳು, ದೊಡ್ಡವರೆಲ್ಲ ಓಡಾಡುವುದೇ ಕಷ್ಟವಾಗಿದೆ. ಪಾಲಿಕೆ ನಾಯಿಗಳನ್ನು ಹಿಡಿದು ಬೇರೆಡೆಗೆ ಸಾಗಿಸಬೇಕು. ತಲಾಂಶೇಖ್‌ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸ್ಥಳೀಯರು ಆಜಾದ್‌ನಗರದಲ್ಲಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.