ಹರಿಹರ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಡೆಯಲು ಮುಂದಾಗಿರುವ ನಗರಸಭೆ, ಅವುಗಳ ಸಂತಾನಶಕ್ತಿ ಹರಣ ಚಿಕಿತ್ಸೆಗಾಗಿ ₹20 ಲಕ್ಷ ಮೊತ್ತದ ಟೆಂಡರ್ ಕರೆದಿದೆ.
ವಾಯು ವಿಹಾರಿಗಳು, ಬಸ್, ರೈಲು ನಿಲ್ದಾಣದಿಂದ ರಾತ್ರಿ ಸಮಯದಲ್ಲಿ ಮನೆಗೆ ತಲುಪುವವರು, ಶಾಲೆ, ಮನೆಪಾಠಕ್ಕೆ ಹೋಗುವ ವಿದ್ಯಾರ್ಥಿಗಳು ನಾಯಿ ಕಡಿತಕ್ಕೆ ಒಳಗಾದ ಹತ್ತಾರು ಪ್ರಕರಣಗಳು ನಡೆದಿದ್ದು, ಜನರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ನಗರಸಭೆಯು ಬೀದಿ ನಾಯಿಗಳ ಹಾವಳಿಗೆ ಅಂಕುಶ ಹಾಕಲು ಮುಂದಾಗಿದೆ.
ನಗರದ ಒಳ ಭಾಗದಲ್ಲಷ್ಟೇ ಅಲ್ಲದೆ, ಹೊರಭಾಗದ ಬಡಾವಣೆಗಳಲ್ಲೂ ಬೀದಿನಾಯಿಗಳು ಹಿಂಡುಹಿಂಡಾಗಿ ಸಂಚರಿಸುತ್ತ ಪಾದಚಾರಿಗಳ ಮೇಲೆ ಎರಗುತ್ತಿವೆ. ನಾಯಿಗಳ ಕಾಟ ಹೆಚ್ಚಿದ್ದರಿಂದ ಬಸ್, ರೈಲು ನಿಲ್ದಾಣದ ಸಮೀಪದಲ್ಲಿದ್ದವರೂ ಆಟೊ ಹಿಡಿದೇ ಮನೆಗೆ ತಲುಪುವುದು ಅನಿವಾರ್ಯವಾಗಿದೆ.
ಆ.21 ರಂದು ಪ್ರಶಾಂತ ನಗರದ ಬಾಲಕನೊಬ್ಬ ನಾಯಿ ದಾಳಿಯಿಂದ ತಪ್ಪಿಸಿಕೊಳ್ಳುವಾಗ ಆಯತಪ್ಪಿ ಚರಂಡಿಗೆ ಬಿದ್ದು ಮೂಗಿನ ಮೂಳೆ ಮುರಿತ ಹಾಗೂ ಇತರೆಡೆ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.
ಪ್ರವೀಣ್ ಶೆಟ್ಟಿ ಬಣದ ಕರವೇ ಕಾರ್ಯಕರ್ತರು ಈಚೆಗೆ ನಗರಸಭೆ ಮುಂದೆ ಪ್ರತಿಭಟನೆ ನಡೆಸಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಆಗ್ರಹಿಸಿದ್ದರು. ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಜನಪ್ರತಿನಿಧಿಗಳೂ ಈ ಬಗ್ಗೆ ದನಿ ಎತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.