ಜಗಳೂರು: ‘ರಾಜ್ಯದಲ್ಲಿ ಎಲ್ಲೆಡೆ ಮಾಲ್‌ಗಳು ತಲೆ ಎತ್ತುತ್ತಿದ್ದು, ಬೀದಿಬದಿ ವ್ಯಾಪಾರಿಗಳು ಬೀದಿಗೆ ಬೀಳುತ್ತಿದ್ದಾರೆ’ ಎಂದು ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಕೈದಾಳೆ ಮಂಜುನಾಥ್ ಕಳವಳ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಬುಧವಾರ ನಡೆದ ಬೀದಿಬದಿ ವ್ಯಾಪಾರಸ್ಥರ ಸಮಾವೇಶದಲ್ಲಿ ಅವರು ಮಾತನಾಡಿದರು.
‘ದೇಶದಲ್ಲಿ ಖಾಸಗೀಕರಣ, ಜಾಗತೀಕರಣದ ನಂತರ ನಂತರ ಬಹುರಾಷ್ಟ್ರೀಯ ಕಂಪನಿಗಳು ತಲೆ ಎತ್ತಿದವು. 2014ರಲ್ಲಿ ಜಾರಿಯಾಗಿದ್ದ ಬೀದಿಬದಿ ವ್ಯಾಪಾರಿಗಳ ಸಂರಕ್ಷಣೆ ಕಾಯ್ದೆಯನ್ನು 2019ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ವಿರೂಪಗೊಳಿಸಿ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲಾಯಿತು. ದೇಶದಲ್ಲಿ ಶೇ 50 ರಷ್ಟು ನಿರುದ್ಯೋಗ ಸಮಸ್ಯೆ ಕಾಡುತ್ತಿದ್ದು ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳಲ್ಲಿ ಬಡತನ ಮೇರೆ ಮೀರಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಸರ್ಕಾರಗಳು ಬಂಡವಾಳಶಾಹಿಗಳ ಪರವಾಗಿವೆ. ಸರ್ಕಾರಿ ಸ್ವಾಮ್ಯದಲ್ಲಿನ ಬಿಎಸ್‌ಎನ್‌ಎಲ್, ವಿಮಾನಯಾನ, ಬಂದರು ಮುಂತಾದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ಅದಾನಿಯಂತಹ ಬಂಡವಾಳಶಾಹಿಗಳಿಗೆ ಒಪ್ಪಿಸಲಾಗುತ್ತಿದೆ. ರೈತ, ಕಾರ್ಮಿಕ ಸಂಘಟನೆಗಳು ಒಗ್ಗಟ್ಟಾಗಿ ಸಂಘಟಿತ ಹೋರಾಟ ನಡೆಸಬೇಕಿದೆ’ ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಜೈ ಭಾರತ್ ಟ್ರಸ್ಟ್ ಕಾರ್ಯದರ್ಶಿ ಬರ್ಕತ್ಅಲಿ, ಪ.ಪಂ ಅಧ್ಯಕ್ಷ ನವೀನ್ ಕುಮಾರ್, ಉಪಾಧ್ಯಕ್ಷೆ ಲೋಕಮ್ಮ, ಸದಸ್ಯರಾದ ಲುಕ್ಮಾನ್ ಖಾನ್, ಶಕೀಲ್ ಅಹಮ್ಮದ್, ಮಂಜಮ್ಮ, ಸಂಘಟನೆ, ಸಂಘದ ರಾಜ್ಯ ಮುಖಂಡ ಇಸ್ಮಾಯಿಲ್, ತಾಲ್ಲೂಕು ಅಧ್ಯಕ್ಷ ಹುಸೇನ್, ಪದಾಧಿಕಾರಿಗಳಾದ ರುದ್ರಮ್ಮ, ತಿಪ್ಪಮ್ಮ, ಸಿಕಂದರ್, ಉಪಾಧ್ಯಕ್ಷೆ ಮಂಜುಳಾ, ಜಿಲ್ಲಾ ಪದಾಧಿಕಾರಿಗಳಾದ ಕೃಷ್ಣಮೂರ್ತಿ, ಚಂದ್ರಕಾಂತ್, ರಹಮತ್ ಉಲ್ಲಾ, ಭಾರತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.