ADVERTISEMENT

ಕೋಮುದ್ವೇಷ ಹರಡಿದರೆ ಕಠಿಣ ಕ್ರಮ: ಬಕ್ರೀದ್ ಶಾಂತಿ ಸಭೆಯಲ್ಲಿ ಪೊಲೀಸರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 14:16 IST
Last Updated 2 ಜೂನ್ 2025, 14:16 IST
ದಾವಣಗೆರೆಯ ಪೊಲೀಸ್‌ ಭವನದಲ್ಲಿ ಬಕ್ರೀದ್‌ ಹಬ್ಬದ ಅಂಗವಾಗಿ ಸೋಮವಾರ ಸೌಹಾರ್ದ ಸಭೆ ನಡೆಯಿತು
ದಾವಣಗೆರೆಯ ಪೊಲೀಸ್‌ ಭವನದಲ್ಲಿ ಬಕ್ರೀದ್‌ ಹಬ್ಬದ ಅಂಗವಾಗಿ ಸೋಮವಾರ ಸೌಹಾರ್ದ ಸಭೆ ನಡೆಯಿತು   

ದಾವಣಗೆರೆ: ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನವನ್ನು ಸಹಿಸುವುದಿಲ್ಲ. ಕೋಮುದ್ವೇಷ ಹರಡುವ ಹಾಗೂ ಹಿಂಸೆಗೆ ಪ್ರಚೋದನೆ ನೀಡುವವರ ಮೇಲೆ ನಿಗಾ ಇಡಲಾಗಿದೆ. ಇಂತಹವರ ವಿರುದ್ಧ ಗೂಂಡಾ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಜೂನ್‌ 7 ರ ಬಕ್ರೀದ್ ಹಬ್ಬದ ಅಂಗವಾಗಿ ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಸೋಮವಾರ ಹಿಂದೂ–ಮುಸ್ಲಿಂ ಮುಖಂಡರ ಸೌಹಾರ್ದ ಸಭೆ ನಡೆಯಿತು. ಸಂಚಾರ ನಿಯಮ ಉಲ್ಲಂಘನೆ, ಸ್ವಚ್ಛತೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಚರ್ಚೆ ನಡೆಯಿತು.

‘ದಾವಣಗೆರೆ ಸೂಕ್ಷ್ಮ ನಗರ. ಹಬ್ಬದ ಸಂದರ್ಭದಲ್ಲಿ ಕೆಲವರು ಹಿಂಸೆಗೆ ಪ್ರಚೋದನೆ ನೀಡುವುದು ಗಮನಕ್ಕೆ ಬಂದಿದೆ. ಗೋವು ರಕ್ಷಣೆಯ ಹೆಸರಿನಲ್ಲಿ ಅನೈತಿಕ ಪೊಲೀಸ್‌ ಗಿರಿ ಕೂಡ ನಡೆಯುತ್ತಿದೆ. ಗೋವು ಅಕ್ರಮ ಸಾಗಣೆ ಕಂಡುಬಂದರೆ ಪೊಲೀಸರ ಗಮನಕ್ಕೆ ತರಬೇಕು. ಕಾನೂನು ಕೈಗೆತ್ತಿಕೊಂಡರೆ ಸುಮ್ಮನೆ ಇರುವುದಿಲ್ಲ’ ಎಂದು ಪೊಲೀಸರು ಎಚ್ಚರಿಕೆ ನೀಡಿದರು.

ADVERTISEMENT

‘ಸಾಮಾಜಿಕ ಜಾಲತಾಣದಲ್ಲಿ ಹರಡುವ ವದಂತಿ ಸವಾಲಾಗಿ ಪರಿಣಮಿಸುತ್ತಿದೆ. ವಾಸ್ತವ ತಿರುಚಿ ಸಂದೇಶ ರವಾನಿಸುವ ಯುವಸಮೂಹ ಸಮಸ್ಯೆಗೆ ಸಿಲುಕುತ್ತಿದೆ. ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇಡಲಾಗಿದ್ದು, ಸಮಾಜದ ಸ್ವಾಸ್ಥ್ಯ ಹಾಳು ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ’ ಎಂದು ಹೇಳಿದರು.

‘ಹಬ್ಬದಲ್ಲಿ ಸಂಚಾರ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಹಬ್ಬದ ನೆಪದಲ್ಲಿ ದ್ವಿಚಕ್ರ ವಾಹನದಲ್ಲಿ ನಿಗದಿಗಿಂತ ಹೆಚ್ಚು ಜನರು ಸಂಚರಿಸಲು ಅವಕಾಶವಿಲ್ಲ. ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ. ಮಾದಕ ದ್ರವ್ಯ ಕಳ್ಳಸಾಗಣೆ, ಮಾರಾಟ ಕಂಡುಬಂದರೆ ಮಾಹಿತಿ ನೀಡಿ’ ಎಂದು ಮನವಿ ಮಾಡಿದರು.

‘ತ್ಯಾಗ ಮತ್ತು ಸೌಹಾರ್ದ ಸಂಕೇತದ ಹಬ್ಬ ಬಕ್ರೀದ್. ಪ್ರೀತಿ, ಸಹೋದರತ್ವ ಸಾರಲು ಈ ಹಬ್ಬ ಮಾಡಲಾಗುತ್ತದೆ. ಬೇರೆ ಧರ್ಮೀಯರ ಭಾವನೆಗೆ ಧಕ್ಕೆ ಬಾರದ ರೀತಿಯಲ್ಲಿ ಹಬ್ಬ ಆಚರಣೆ ಮಾಡುವ ಅಗತ್ಯ ಇದೆ’ ಎಂದು ಮುಸ್ಲಿಂ ಸಮುದಾಯದ ಮುಖಂಡ ಅಮರುಲ್ಲಾ ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ. ಮಂಜುನಾಥ್ ಹಾಜರಿದ್ದರು.

ಬಕ್ರೀದ್ ಹಬ್ಬದಲ್ಲಿ ‘ಕುರ್ಬಾನಿ’ ಸಹಜ. ಇದರಿಂದ ಜನರಿಗೆ ತೊಂದರೆ ಆಗಬಾರದು. ಮಹಾನಗರ ಪಾಲಿಕೆ ‘ಕುರ್ಬಾನಿ’ಗೆ ವಾಹನದ ವ್ಯವಸ್ಥೆ ಕಲ್ಪಿಸಬೇಕು
ಸುಹಾನ್ ಸಾಬ್ ಬೂದಾಳ್ ರಸ್ತೆ ದಾವಣಗೆರೆ
ದೂ ಮುಸ್ಲಿಮರು ಸೌಹಾರ್ದ ರೀತಿಯಲ್ಲಿದ್ದೇವೆ. ತೊಂದರೆ ಆಗದ ರೀತಿಯಲ್ಲಿ ಹಬ್ಬ ಆಚರಣೆ ಮಾಡಬೇಕಿದೆ. ಸಂಚಾರ ನಿಯಮ ಪಾಲಿಸಿದರೆ ಅನುಕೂಲ
ಮಲ್ಲಪ್ಪ ಎಸ್‌ಪಿಎಸ್‌ ನಗರ ದಾವಣಗೆರೆ

‘ಮದ್ಯದಂಗಡಿ ವಿರುದ್ಧ ಕ್ರಮ ಕೈಗೊಳ್ಳಿ’

‘ಮದ್ಯದ ಅಂಗಡಿಗಳು ಸಮಯ ಪಾಲನೆ ಮಾಡುತ್ತಿಲ್ಲ. ನಸುಕಿನಿಂದ ಮಧ್ಯರಾತ್ರಿವರೆಗೂ ತೆರೆಯುತ್ತಿವೆ. ಅಬಕಾರಿ ಹಾಗೂ ಪೊಲೀಸ್‌ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ಮನವಿ ಮಾಡಿದರು. ‘ಹಬ್ಬದ ಸಂದರ್ಭದಲ್ಲಿ ಸಂಚಾರ ನಿಯಮ ಗಾಳಿಗೆ ತೂರಿ ದ್ವಿಚಕ್ರ ವಾಹನದಲ್ಲಿ ಮೂವರು ಸಂಚರಿಸುವುದು ಸರಿಯಲ್ಲ. ಸಾರ್ವಜನಿಕರಿಗೆ ಇದರಿಂದ ತೊಂದರೆ ಉಂಟಾಗುತ್ತದೆ. ತ್ರಿಬಲ್‌ ರೈಡಿಂಗ್ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.