ದಾವಣಗೆರೆ: ರಾಜ್ಯದ ಆಡಳಿತಕ್ಕೆ ವಿಧಾನಸೌಧ ಇರುವಂತೆ ಸಣ್ಣ ಸಣ್ಣ ಸಮುದಾಯಗಳಿಗೆ ವಿದ್ಯಾರ್ಥಿ ನಿಲಯಗಳೇ ಶಕ್ತಿಸೌಧಗಳಾಗಿವೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಅಭಿಪ್ರಾಯಪಟ್ಟರು.
ಇಲ್ಲಿನ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿ ‘ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಹಾಗೂ ಮೇದಾರ ಗಿರಿಜನ (ಎಸ್‌ಟಿ) ಅಭ್ಯುದಯ ಸೇವಾ ಸಂಘ’ದಿಂದ ಸೋಮವಾರ ಆಯೋಜಿಸಿದ್ದ ‘ಶಿವಶರಣ ಮೇದಾರ ಕೇತೇಶ್ವರ ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಮಾರಂಭ’ದಲ್ಲಿ ಮಾತನಾಡಿದರು.
ವಿದ್ಯಾರ್ಥಿ ನಿಲಯ ಹಾಗೂ ದೇವಸ್ಥಾನ ನಿರ್ಮಿಸುವುದು ಬಹು ದೊಡ್ಡ ಕೆಲಸವಾಗಿದೆ. ಇವೆರೆಡೂ ಧರ್ಮದ ಕಾರ್ಯಗಳಾಗಿವೆ. ಮನೆಯ ಕೆಲಸ ಬೇಗ ಮುಗಿಯುತ್ತದೆ. ಆದರೆ, ಸಮುದಾಯದ ಕೆಲಸ ಬೇಗ ಮುಗಿಯಲ್ಲ. ಸಮುದಾಯದ ಎಲ್ಲರ ಶ್ರಮದಿಂದ ಕಟ್ಟಡವನ್ನು ನಿರ್ಮಾಣ ಮಾಡಿರುವುದು ಮಾದರಿಯಾಗಿದೆ ಎಂದು ಹೇಳಿದರು.
‘ದಾವಣಗೆರೆ ನಗರವು ಬಹುವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರು. ಹಾಲಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರೂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಯಾರೇ ಬಂದರೂ, ಅಭಿವೃದ್ಧಿ ಕೆಲಸಗಳು ನಡೆಯಬೇಕು’ ಎಂದರು.
‘ಎಸ್‌ಟಿ ಸಮುದಾಯದ 51 ಜಾತಿಗಳಲ್ಲಿ ಮೇದಾರ ಜಾತಿಯೂ ಒಂದು. ಜನಪ್ರತಿನಿಧಿಗಳು ಇದ್ದರೆ ಮಾತ್ರ ಸಮುದಾಯದ ಹಿತ ಕಾಪಾಡಲು ಸಾಧ್ಯ. ರಾಜಕೀಯ ಬದುಕಿನಲ್ಲಿ ಮೇದಾರ ಸಮುದಾಯ ನನಗೆ ಸಾಕಷ್ಟು ಶಕ್ತಿ ನೀಡಿದೆ’ ಎಂದರು.
ಮೇದಾರ ಸಮಾಜದ ಪ್ರಧಾನ ಕಾರ್ಯದರ್ಶಿ ಗಿರೀಶ್ ಹುಗ್ಗಿ ಪ್ರಾಸ್ತಾವಿಕ ನುಡಿದರು.
ಶಿಬಾರದ ಮೇದಾರ ಗುರುಪೀಠದ ಕೇತೇಶ್ವರ ಮಹಾಮಠದ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ, ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಬಿಜೆಪಿ ಮುಖಂಡ ಶ್ರೀನಿವಾಸ್ ದಾಸಕರಿಯಪ್ಪ, ಮೇದಾರ ಸಮಾಜದ ಅಧ್ಯಕ್ಷ ಟಿ.ಬಸವರಾಜ್, ಮುಖಂಡರಾದ ಕೆ.ಹನುಮಂತಪ್ಪ, ಎಂ.ಮೈಲಾರಪ್ಪ, ಎಂ.ತಿಮ್ಮಣ್ಣ, ಟಿ.ಶ್ರೀನಿವಾಸ್, ಎನ್.ಟಿ.ಕೃಷ್ಣಪ್ಪ, ಟಿ.ಶ್ರೀನಿವಾಸ್, ಎಚ್.ರಾಘವೇಂದ್ರ, ಎಸ್.ನರೇಶ್, ಕುಮಾರ್ ಹಾಗೂ ಸಮುದಾಯದ ಜನರು ಭಾಗವಹಿಸಿದ್ದರು.
‘₹3 ಕೋಟಿ ವೆಚ್ಚದಲ್ಲಿ ಭವ್ಯ ಕಟ್ಟಡ’
ವಿದ್ಯಾರ್ಥಿ ವಸತಿ ನಿಲಯ ಹಾಗೂ ವಿದ್ಯಾಸಂಸ್ಥೆಗಳನ್ನು ಕಟ್ಟುವುದು ನಿರ್ವಹಿಸುವುದು ಬಹೊದೊಡ್ಡ ಕಾರ್ಯ. ನಗರದಲ್ಲಿ ಓದುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುವುದನ್ನು ತಪ್ಪಿಸಲು ಸಮುದಾಯದ ಎಲ್ಲರೂ ಒಗ್ಗೂಡಿ ಹಾಸ್ಟೆಲ್ ನಿರ್ಮಿಸಿದ್ದೇವೆ ಎಂದು ಅಖಿಲ ಕರ್ನಾಟಕ ಗುರು ಮೇದಾರ ಕೇತೇಶ್ವರ ಟ್ರಸ್ಟ್‌ನ ಅಧ್ಯಕ್ಷ ಸಿ.ಪಿ.ಪಾಟೀಲ್ ಹೇಳಿದರು. ಸರ್ಕಾರದಿಂದ ₹1 ಕೋಟಿ ಅನುದಾನ ಬಂದಿತ್ತು. ಸಮುದಾಯದವರು ₹2 ಕೋಟಿ ದೇಣಿಗೆ ನೀಡಿದರು. ಒಟ್ಟು ₹3 ಕೋಟಿ ವೆಚ್ಚದಲ್ಲಿ ಭವ್ಯ ಕಟ್ಟಡ ನಿರ್ಮಾಣವಾಗಿದೆ. 2011ರ ಜನಗಣತಿ ಪ್ರಕಾರ ಸಮುದಾಯದ ಜನಸಂಖ್ಯೆ 40 ಸಾವಿರ ಮಾತ್ರ. ಆದರೆ ವಾಸ್ತವದಲ್ಲಿ 4.50 ಲಕ್ಷ ಜನಸಂಖ್ಯೆ ಇದೆ ಎಂದರು. ಬೇರೆ ಜಿಲ್ಲೆಗಳಲ್ಲೂ ಇದೇ ರೀತಿಯ ಮಾದರಿ ಹಾಸ್ಟೆಲ್‌ಗಳನ್ನು ನಿರ್ಮಿಸಿದರೆ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ. ಒಳಮೀಸಲಾತಿಯಿಂದ ಸಮುದಾಯಕ್ಕೆ ಅನ್ಯಾಯವಾಗಲಿದೆ. ಅದು ಜಾರಿಯಾಗಲು ಬಿಡಬಾರದು. ಸರಿಯಾದ ಸಮೀಕ್ಷೆಯಾದ ಬಳಿಕವೇ ಜಾರಿಯಾಗಲಿ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.