ADVERTISEMENT

ದಾವಣಗೆರೆ: ತಾಂತ್ರಿಕ ಸಮಸ್ಯೆಗೆ ಸಮೀಕ್ಷಕರು ಹೈರಾಣ

ಬಗೆಹರಿಯದ ತೊಡಕು, ನಿರೀಕ್ಷಿತ ಪ್ರಗತಿ ಕಾಣದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 2:34 IST
Last Updated 24 ಸೆಪ್ಟೆಂಬರ್ 2025, 2:34 IST
   

ದಾವಣಗೆರೆ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಮಂಗಳವಾರವೂ ತಾಂತ್ರಿಕ ಸಮಸ್ಯೆ ಮುಂದುವರಿದಿದೆ. ಸರ್ವರ್‌ ಸಮಸ್ಯೆ, ನಿಯೋಜಿತ ಮನೆಗಳ ಸ್ಥಳ ಪತ್ತೆ, ಲಾಗಿನ್‌, ಒಟಿಪಿ ಸೇರಿ ಹಲವು ತೊಂದರೆಗಳಿಗೆ 2ನೇ ದಿನವೂ ಪರಿಹಾರ ಸಿಕ್ಕಿಲ್ಲ. ಇದರಿಂದ ಸಮೀಕ್ಷೆ ನಿರೀಕ್ಷಿತ ಪ್ರಗತಿ ಕಂಡಿಲ್ಲ.

ತಾಂತ್ರಿಕ ಸಮಸ್ಯೆಯಿಂದ ಸಮೀಕ್ಷಕರು ಮೊದಲ ದಿನ ಕಾರ್ಯನಿರ್ವಹಿಸಲು ಸಾಧ್ಯವಾಗಿರಲಿಲ್ಲ. 2ನೇ ದಿನ ತಂತ್ರಾಂಶದಲ್ಲಿನ ಸಮಸ್ಯೆಗಳು ಪರಿಹಾರ ಕಾಣಬಹುದು ಎಂಬ ನಿರೀಕ್ಷೆ ಕೂಡ ಹುಸಿಯಾಗಿದೆ. ಮಂಗಳವಾರ ಬೆಳಿಗ್ಗೆ ನಿಯೋಜಿತ ಬ್ಲಾಕ್‌ಗಳಿಗೆ ತೆರಳಿದ ಸಮೀಕ್ಷಕರು ಮನೆ ಹುಡುಕಲು ಪರದಾಡಿದ್ದಾರೆ.

ಸರ್ವರ್‌ ಸಮಸ್ಯೆ

ADVERTISEMENT

ಸಮೀಕ್ಷೆಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರೂಪಿಸಿದ ಆ್ಯಪ್‌ನಲ್ಲಿ ಸರ್ವರ್‌ ಸಮಸ್ಯೆ ಕಾಣಿಸಿಕೊಂಡಿದೆ. ಪ್ರತಿ ಮನೆಯ ವಿವರಗಳನ್ನು ನಮೂದಿಸಲು ಸಾಕಷ್ಟು ಕಾಲಾವಕಾಶ ಹಿಡಿಯುತ್ತಿದೆ. ಪ್ರಶ್ನಾವಳಿ ಆಧರಿಸಿ ಮಾಹಿತಿ ನಮೂದಿಸಿದರೆ ಸರಿಯಾಗಿ ಸ್ವೀಕರಿಸುತ್ತಿಲ್ಲ. ದೃಢೀಕರಣ ಪತ್ರಕ್ಕೆ ಸಹಿ ಹಾಕಿಸಿಕೊಂಡು ಆ್ಯಪ್‌ಗೆ ಅಪ್ಲೋಡ್ ಮಾಡಿದಾಗ ಮಾತ್ರವೇ ಕುಟುಂಬವೊಂದರ ಸಮೀಕ್ಷೆ ಪೂರ್ಣಗೊಳ್ಳುತ್ತದೆ. ಇದಕ್ಕೆ ದಿನಗಟ್ಟಲೆ ಕಾಲಾವಕಾಶ ಹಿಡಿಯುತ್ತಿದೆ.

‘ಸಮೀಕ್ಷೆಗೆ ಚಾಲನೆ ಸಿಕ್ಕ ಮೊದಲ ದಿನವೇ ಮನೆಯೊಂದಕ್ಕೆ ಹಾಜರಾಗಿದ್ದೆ. ಪ್ರಶ್ನಾವಳಿಗಳಲ್ಲಿ ಒಂದು ಭಾಗವನ್ನು ಮಾತ್ರವೇ ಭರ್ತಿ ಮಾಡಲು ಸಾಧ್ಯವಾಯಿತು. ಮಂಗಳವಾರ ಮತ್ತೆ ಅದೇ ಮನೆಗೆ ತೆರಳಿ ಮಾಹಿತಿ ಕಲೆ ಹಾಕಿದೆ. ದೃಢೀಕರಣ ಪತ್ರ ಅಪ್ಲೋಡ್‌ ಮಾಡುವ ಹೊತ್ತಿಗೆ ಸಂಜೆಯಾಯಿತು. ಎರಡು ದಿನಗಳಲ್ಲಿ ಒಂದು ಕುಟುಂಬದ ಸಮೀಕ್ಷೆ ಪೂರ್ಣಗೊಳಿಸಲು ಮಾತ್ರವೇ ಸಾಧ್ಯವಾಗಿದೆ’ ಎಂಬುದು ಸಮೀಕ್ಷಕರೊಬ್ಬರ ಅಳಲು.

ಪ್ರಶ್ನಾವಳಿಗೆ ಸಿಡಿಮಿಡಿ

ಸಮೀಕ್ಷೆಗೆ 60 ಪ್ರಶ್ನಾವಳಿಗಳನ್ನು ರೂಪಿಸಲಾಗಿದೆ. ಇದರಲ್ಲಿ 20 ಪ್ರಶ್ನಾವಳಿ ಕುಟುಂಬಕ್ಕೆ ಸಂಬಂಧಿಸಿದವು. ಉಳಿದ 40 ಪ್ರಶ್ನೆಗಳಿಗೆ ಕುಟುಂಬದ ಪ್ರತಿ ಸದಸ್ಯರಿಂದ ಮಾಹಿತಿ ಕಲೆಹಾಕಿ ಆ್ಯಪ್‌ನಲ್ಲಿ ಅಪ್ಲೋಡ್‌ ಮಾಡಬೇಕು. ಈ ಕಾರ್ಯ ತೀರಾ ವಿಳಂಬವಾಗುತ್ತಿದೆ.

‘ಪ್ರತಿ ಮನೆಯ ಪಡಿತರ ಚೀಟಿ ಪಡೆದು ಕುಟುಂಬದ ಸದಸ್ಯರ ಸಂಖ್ಯೆಯನ್ನು ಗಮನಿಸುತ್ತೇವೆ. ಪಡಿತರ ಚೀಟಿ, ಮತದಾರರ ಚೀಟಿ ಹಾಗೂ ಆಧಾರ್‌ ಸಂಖ್ಯೆ ನೀಡುತ್ತಿದ್ದಂತೆ ಕೆಲ ಪ್ರಶ್ನೆಗಳಿಗೆ ಸ್ವಯಂಚಾಲಿತವಾಗಿ ಉತ್ತರ ನಮೂದಾಗುತ್ತದೆ. ಆದರೆ, ಇತರ ಪ್ರಶ್ನೆಗಳಿಗೆ ಉತ್ತರಿಸಲು ಮಹಿಳೆಯರು, ವೃದ್ಧರು, ಮಕ್ಕಳು ಸಿಡಿಮಿಡಿಗೊಳ್ಳುತ್ತಿದ್ದಾರೆ’ ಎಂದು ಸಮೀಕ್ಷಕರೊಬ್ಬರು ವಿವರಿಸಿದರು.

ಹಬ್ಬದ ಸಿದ್ಧತೆಯಲ್ಲಿ ಜನ

ನವರಾತ್ರಿ ಉತ್ಸವ ಆರಂಭವಾಗಿರುವುದರಿಂದ ಅನೇಕರು ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಸಮೀಕ್ಷಕರು ಭೇಟಿ ನೀಡಿದಾಗ ಪೂಜೆ ಕೈಂಕರ್ಯ ಅಥವಾ ಮನೆ ಸ್ವಚ್ಛತೆ ಸೇರಿ ಇತರ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಪಡಿತರ ಚೀಟಿ, ಆಧಾರ್‌ ಸಂಖ್ಯೆ ವಿಚಾರಿಸಿದಾಗ ಮತ್ತೊಂದು ದಿನ ಬರಲು ಹೇಳುತ್ತಿದ್ದಾರೆ. ಸಾರ್ವಜನಿಕರ ಮನವೊಲಿಸಿ ಸಮೀಕ್ಷೆಗೆ ಒಳಪಡಿಸುವುದು ಸಮೀಕ್ಷಕರಿಗೆ ಕಷ್ಟವಾಗಿದೆ.

‘ಗ್ರಾಮದ ಬಹುತೇಕರು ಮನೆಯ ಸ್ವಚ್ಛತೆಯಲ್ಲಿ ತೊಡಗಿದ್ದಾರೆ. ಅಗತ್ಯ ದಾಖಲೆಗಳು ಈಗ ಲಭ್ಯವಿಲ್ಲ ಎಂಬುದಾಗಿ ಸಬೂಬು ಹೇಳುತ್ತಿದ್ದಾರೆ. ಕುಟುಂಬದ ಯಜಮಾನ ಮನೆಯಿಂದ ಹೊರಗೆ ತೆರಳಿದಾಗ ನಿರೀಕ್ಷಿತ ಮಾಹಿತಿ ಲಭ್ಯವಾಗುವುದಿಲ್ಲ’ ಎಂಬುದು ಸಮೀಕ್ಷಕರ ಬೇಸರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.