ADVERTISEMENT

ದಾವಣಗೆರೆ | ತಾಂಡಾ ಹುಡುಗ ವಾಣಿಜ್ಯ ತೆರಿಗೆ ಅಧಿಕಾರಿ

ಆರ್‌ಎಫ್‌ಒ ತರಬೇತಿ ಪಡೆಯುತ್ತಿರುವ ದೊಡ್ಡ ಓಬಜ್ಜಿಹಳ್ಳಿಯ ದರ್ಶನ್‌ ನಾಯ್ಕ

ವಿನಾಯಕ ಭಟ್ಟ‌
Published 26 ಡಿಸೆಂಬರ್ 2019, 9:46 IST
Last Updated 26 ಡಿಸೆಂಬರ್ 2019, 9:46 IST
ಎಲ್‌.ಆರ್‌. ದರ್ಶನ್‌ ನಾಯ್ಕ
ಎಲ್‌.ಆರ್‌. ದರ್ಶನ್‌ ನಾಯ್ಕ   

ದಾವಣಗೆರೆ: ತಾಲ್ಲೂಕಿನ ದೊಡ್ಡ ಓಬಜ್ಜಿಹಳ್ಳಿ ತಾಂಡಾದ ಪರಿಶಿಷ್ಟ ಜಾತಿಯ ಯುವಕ ಎಲ್‌.ಆರ್‌. ದರ್ಶನ್‌ ನಾಯ್ಕ ಅವರು 2017ರ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರೊಬೆಷನರಿ ವಾಣಿಜ್ಯ ತೆರಿಗೆ ಅಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದಾರೆ.

ವಕೀಲ ರಾಘವೇಂದ್ರ ನಾಯ್ಕ ಹಾಗೂ ಟಿ. ನಾಗರತ್ನ ದಂಪತಿಯ ಪುತ್ರ ದರ್ಶನ್‌ ಅವರು ಈಗಾಗಲೇ ಆರ್‌.ಎಫ್‌.ಒ ಹುದ್ದೆಗೆ ಆಯ್ಕೆಯಾಗಿದ್ದು, ಸದ್ಯ ಹಿಮಾಚಲಪ್ರದೇಶದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ದಾವಣಗೆರೆಯಲ್ಲೇ ಪಡೆದಿರುವ ದರ್ಶನ್‌, ಚಿತ್ರದುರ್ಗದಲ್ಲಿ ಪಿಯು ಓದಿದ್ದರು. ಬಳಿಕ ಬೆಂಗಳೂರಿನಲ್ಲಿ ಮ್ಯಾಕೆನಿಕಲ್‌ ಎಂಜಿನಿಯರಿಂಗ್‌ ಪದವಿ ಮುಗಿಸಿದ್ದರು. ಒಂದು ವರ್ಷ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡಿದ ಬಳಿಕ ಕೆಲಸ ತೃಪ್ತಿ ತಂದುಕೊಡಲಿಲ್ಲ. ಸಾರ್ವಜನಿಕ ಸೇವಾ ವಲಯದಲ್ಲಿ ಕೆಲಸ ಮಾಡಬೇಕು ಎಂಬ ಬಯಕೆಯಿಂದ 2016ರಿಂದ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದರು. ಸರ್ಕಾರದ ಸಹಾಯಧನದಲ್ಲಿ ದೆಹಲಿಗೆ ತೆರಳಿ ಐಎಎಸ್‌ ಕೋಚಿಂಗ್‌ ಪಡೆದುಕೊಂಡರು. ಎರಡು ಬಾರಿ ಯುಪಿಎಸ್‌ಸಿ ಪರೀಕ್ಷೆಯನ್ನು ತೆಗೆದುಕೊಂಡಿದ್ದರೂ ಯಶಸ್ವಿಯಾಗಿರಲಿಲ್ಲ. 2017ರಲ್ಲಿ ಬರೆದ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಲಭಿಸಿದೆ.

ADVERTISEMENT

‘ಒಂದು ತಿಂಗಳಿಂದ ಆರ್‌.ಎಫ್‌.ಒ ತರಬೇತಿ ಪಡೆಯುತ್ತಿದ್ದೇನೆ. ವಾಣಿಜ್ಯ ತೆರಿಗೆ ಅಧಿಕಾರಿ ಹುದ್ದೆಗೆ ಆಯ್ಕೆ ಮಾಡಿಕೊಳ್ಳಬೇಕೆ ಎಂಬ ಗೊಂದಲದಲ್ಲಿದ್ದೇನೆ. ಹಿತೈಷಿಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ದರ್ಶನ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಐಆರ್‌ಟಿಎಸ್‌ ಅಧಿಕಾರಿ ವಾಣಿಜ್ಯ ತೆರಿಗೆ ಎಸಿ

ಕಳೆದ ಏಪ್ರಿಲ್‌ನಲ್ಲಿ ಪ್ರಕಟಗೊಂಡ ಯು.ಪಿ.ಎಸ್‌.ಸಿ ಪರೀಕ್ಷೆ ಫಲಿತಾಂಶದಲ್ಲಿ 336ನೇ ರ‍್ಯಾಂಕ್‌ ಗಳಿಸಿ ಇಂಡಿಯನ್‌ ರೈಲ್ವೆ ಟ್ರಾಫಿಕ್‌ ಸರ್ವೀಸ್‌ (ಐಆರ್‌ಟಿಎಸ್‌) ಅಧಿಕಾರಿಯಾಗಿ ತರಬೇತಿ ಪಡೆಯುತ್ತಿರುವ ನಗರದ ಮಿರ್ಜಾ ಖಾದರ್‌ ಬೇಗ್‌ ಅವರು ಪ್ರೊಬೆಷನರಿ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರ ಹುದ್ದೆಗೆ ಆಯ್ಕೆಯಾಗಿದ್ದಾರೆ.

ವಕೀಲರಾಗಿರುವ ತಂದೆ ಮಿರ್ಜಾ ಇಸ್ಮಾಯಿಲ್‌ ಹಾಗೂ ತಾಯಿ ಹಬಿಬಾ ದಂಪತಿಯ ಪುತ್ರ ಮಿರ್ಜಾ ಖಾದರ್‌ ಬೇಗ್‌ ಅವರು ದಾವಣಗೆರೆಯಲ್ಲೇ ಎಂಜಿನಿಯರಿಂಗ್‌ ಪದವಿ ಪಡೆದಿದ್ದರು. ಬಳಿಕ ಜರ್ಮನಿಯ ಪ್ರತಿಷ್ಠಿತ ಎಬಿಬಿ ಕಂಪನಿಯಲ್ಲಿ ಮೂರು ವರ್ಷ ನೌಕರಿ ಮಾಡಿದ ಅವರು, ತಂದೆಯ ಆಸೆಯಂತೆ ತಾಯತ್ನಾಡಿಗೆ ಮರಳಿ ಸ್ಪರ್ಧಾತ್ಮ ಪರೀಕ್ಷೆ ತೆಗೆದುಕೊಂಡಿದ್ದರು.

2017ರಲ್ಲಿ ಬರೆದಿದ್ದ ಕೆಪಿಎಸ್‌ಸಿ ಪರೀಕ್ಷೆಯ ಫಲಿತಾಂಶದ ಆಧಾರದಲ್ಲಿ ಇದೀಗ ಇವರು ಸಹಾಯಕ ಆಯುಕ್ತರ ಹುದ್ದೆಗೆ ಆಯ್ಕೆಯಾಗಿದ್ದಾರೆ. ಆದರೆ, 2018ರಲ್ಲಿ ಬರೆದಯುಪಿಎಸ್‌ಸಿ ಪರೀಕ್ಷೆ ಆಧಾರದಲ್ಲಿ ಐಆರ್‌ಟಿಎಸ್‌ನಲ್ಲಿ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.

‘2019ರ ಯುಪಿಎಸ್‌ಸಿ ಪರೀಕ್ಷೆಯನ್ನೂ ಮಗ ಬರೆದಿದ್ದಾನೆ. ಫಲಿತಾಂಶ ಪ್ರಕಟಗೊಂಡ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾನೆ’ ಎಂದು ಮಿರ್ಜಾ ಇಸ್ಮಾಯಿಲ್‌ ಪ್ರತಿಕ್ರಿಯಿಸಿದರು.

ತಂದೆಯ ಕನಸು ನನಸಾಗಿಸಿದ ರುಬಿಯಾಬಾನು

ಪ್ರೊಬೆಷನರಿ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಹುದ್ದೆಗೆ ಆಯ್ಕೆಯಾಗುವ ಮೂಲಕ ಇಲ್ಲಿನ ವಿನೋಬನಗರದ ರುಬಿಯಾ ಬಾನು ತಮ್ಮ ತಂದೆಯ ಕನಸನ್ನು ನನಸಾಗಿಸಿದ್ದಾರೆ.

ಬಿಜಿನೆಸ್‌ಮನ್‌ ಆಗಿದ್ದ ದಿವಂಗತ ಒ.ಎಸ್‌. ಪ್ಯಾರೇಜಾನ್‌ ಹಾಗೂ ಸಾಜಿದಾಬಾನು ದಂಪತಿಯ ಪುತ್ರಿ ನಾಲ್ಕನೇ ಪುತ್ರಿ 1ರಿಂದ 10ನೇ ತರಗತಿವರೆಗೆ ಸೇಂಟ್‌ ಪಾಲ್‌ ಶಾಲೆಯಲ್ಲಿ ಓದಿದ್ದರು. ಎವಿಕೆ ಕಾಲೇಜಿನಲ್ಲಿ ಪಿಯು ಶಿಕ್ಷಣ ಪೂರೈಸಿದ ಇವರು, ಡಿಆರ್‌ಎಂ ಕಾಲೇಜಿನಲ್ಲಿ ಬಿ.ಎಸ್ಸಿ ಮುಗಿಸಿದ್ದರು. ಬಳಿಕ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದರು. ಬಳಿಕ ಸರ್ಕಾರದ ಸಹಾಯಧನದಲ್ಲಿ ದೆಹಲಿಗೆ ತೆರಳಿ ಒಂಬತ್ತು ತಿಂಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆದುಕೊಂಡಿದ್ದರು.

ಈಗಾಗಲೇ ಮೂರು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿರುವ ಇವರು, ಎರಡನೇ ಬಾರಿಗೆ ಬರೆದ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೆ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕುಟುಂಬದ ನೆರವಿನ ಜೊತೆಗೆ ತಾವು ಟ್ಯೂಷನ್‌ ಕ್ಲಾಸ್‌ ನಡೆಸುವ ಮೂಲಕ ಗಳಿಸಿದ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯ ಹಣ ಹೊಂದಿಸಿಕೊಳ್ಳುತ್ತಿದ್ದಾರೆ.

‘ಸ್ಪರ್ಧಾತ್ಮಕ ಪರೀಕ್ಷೆ ಬರೆಯುವಂತೆ ಬಾಲ್ಯದಿಂದಲೂ ತಂದೆ ನನ್ನಲ್ಲಿ ಆಸಕ್ತಿ ಬೆಳೆಸುತ್ತಿದ್ದರು. ದಾವಣಗೆರೆಯ ಐಪಿಎಸ್‌ ಅಧಿಕಾರಿ ಡಿ. ರೂಪಾ ಸುದ್ದಿ ಬಂದಾಗಲೆಲ್ಲ ನನ್ನನ್ನು ಕರೆದು ಒಳ್ಳೆಯ ಅಧಿಕಾರಿಯಾಗುವಂತೆ ಹರಿದುಂಬಿಸುತ್ತಿದ್ದರು. ತಂದೆಯೇ ನನಗೆ ಸ್ಫೂರ್ತಿ. ಅವರ ಆಶೀರ್ವಾದದಿಂದಲೇ ಇಂದು ಈ ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದು ರುಬಿಯಾ ಬಾನು ಅವರು ಸಂತಸವನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.