ADVERTISEMENT

ದಶಕಗಳಿಂದ ಬೀಡುಬಿಟ್ಟಿರುವ ತಹಶೀಲ್ದಾರ್‌ ಕಚೇರಿ ಸಿಬ್ಬಂದಿ!

ಅಹವಾಲು ಆಲಿಸುವವರಿಲ್ಲದೆ ಸಾರ್ವಜನಿಕರ ಪರದಾಟ...

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 7:21 IST
Last Updated 20 ಜುಲೈ 2024, 7:21 IST
ಜಗಳೂರಿನ ತಹಶೀಲ್ದಾರ್ ಕಚೇರಿಯಲ್ಲಿ  ಮಧ್ಯಾಹ್ನ 12 ಗಂಟೆ ವೇಳೆಗೆ ಸಿಬ್ಬಂದಿ ಕುರ್ಚಿಗಳು ಖಾಲಿಯಾಗಿರುವುದು
ಜಗಳೂರಿನ ತಹಶೀಲ್ದಾರ್ ಕಚೇರಿಯಲ್ಲಿ  ಮಧ್ಯಾಹ್ನ 12 ಗಂಟೆ ವೇಳೆಗೆ ಸಿಬ್ಬಂದಿ ಕುರ್ಚಿಗಳು ಖಾಲಿಯಾಗಿರುವುದು   

ಜಗಳೂರು: ತಾಲ್ಲೂಕು ಆಡಳಿತದ ‘ಶಕ್ತಿ ಕೇಂದ್ರ’ ಎನಿಸಿರುವ ಇಲ್ಲಿನ ತಹಶೀಲ್ದಾರ್ ಕಚೇರಿಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಹತ್ತಾರು ವರ್ಷಗಳಿಂದ ಇಲ್ಲೇ ಬೀಡುಬಿಟ್ಟಿದ್ದು, ಆಡಳಿತ ಜಡ್ಡುಗಟ್ಟಿ ಹೋಗಿದೆ. ಸಿಬ್ಬಂದಿಯ ನಿರ್ಲಕ್ಷ್ಯ ಮನೋಭಾವದಿಂದಾಗಿ ಸಾರ್ವಜನಿಕರು ತಮ್ಮ ಕೆಲಸ– ಕಾರ್ಯಗಳಿಗೆ ನಿತ್ಯ ಅಲೆಯಬೇಕಾದ ದುಃಸ್ಥಿತಿ ಇದೆ.

ಸಾರ್ವಜನಿಕ ದಾಖಲೆ ವಿಭಾಗ, ಭೂಮಾಪನ ಇಲಾಖೆ , ಆರ್.ಆರ್.ಟಿ, ಭೂಮಿ ವಿಭಾಗದ ಸಿಬ್ಬಂದಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸೇರಿ ಇಲ್ಲಿನ ಬಹುತೇಕ ಸಿಬ್ಬಂದಿ 10-15 ವರ್ಷಗಳಿಂದ ಇಲ್ಲಿಯೇ ಬೀಡುಬಿಟ್ಟಿದ್ದಾರೆ. ಸುದೀರ್ಘ ಅವಧಿಯಿಂದ ಇಲ್ಲೇ ಕೆಲಸ ಮಾಡಿರುವುದರಿಂದ ‘ಪ್ರಭಾವಿ’ಗಳಾಗಿರುವ ಸಿಬ್ಬಂದಿಯನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ ಎಂಬುದು ಜನರ ದೂರು.

ತಹಶೀಲ್ದಾರ್ ಕಚೇರಿಯ ಬಹುತೇಕ ಸಿಬ್ಬಂದಿ ನಿತ್ಯವೂ ದಾವಣಗೆರೆ ಮತ್ತು ಚಿತ್ರದುರ್ಗದಿಂದ ಬರುತ್ತಾರೆ. ಬೆಳಿಗ್ಗೆ 11 ಗಂಟೆಯ ನಂತರ ಒಬೊಬ್ಬರಾಗಿ ಕಚೇರಿಗೆ ಆಗಮಿಸುತ್ತಾರೆ. ಮಧ್ಯಾಹ್ನ 1 ಗಂಟೆ ವೇಳೆಗಾಗಲೇ ಊಟಕ್ಕೆ ತೆರಳುತ್ತಾರೆ. 4 ಗಂಟೆಗೆ ಊರಿಗೆ ಮರಳುವ ತರಾತುರಿಯಲ್ಲಿರುತ್ತಾರೆ. ಕೆಲಸದ ಬಗ್ಗೆ ನಿರ್ಲಕ್ಯ ತೋರುತ್ತಿದ್ದು, ತೀವ್ರ ಸಮಸ್ಯೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ADVERTISEMENT

‘ಇಲ್ಲಿನ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಕುರ್ಚಿಯಲ್ಲಿ ಕುಳಿತುಕೊಳ್ಳುವುದೆಂದರೆ ಅಲರ್ಜಿ. ಎಲ್ಲಾ ವಿಭಾಗಗಳಲ್ಲಿ ಅರ್ಧಕ್ಕರ್ಧ ಸಿಬ್ಬಂದಿಯ ಕುರ್ಚಿಗಳು ಖಾಲಿ ಇರುತ್ತವೆ. ಅವರು ಯಾವಾಗ ಬರುತ್ತಾರೋ, ಯಾವಾಗ ವಾಪಸ್‌ ಹೋಗುತ್ತಾರೋ ತಿಳಿಯುವುದಿಲ್ಲ. 10-15 ವರ್ಷಗಳಿಂದ ಬಹುತೇಕ ಸಿಬ್ಬಂದಿ ಇಲ್ಲೇ ಠಿಕಾಣಿ ಹೂಡಿದ್ದಾರೆ. ಅಧೀನ ಸಿಬ್ಬಂದಿಯನ್ನು ನಿಯಂತ್ರಿಸಬೇಕಾದ ತಹಶೀಲ್ದಾರರೇ ಕಚೇರಿಯಲ್ಲಿ ಸರಿಯಾಗಿ ಇರುವುದಿಲ್ಲ. ದಿನದಲ್ಲಿ ಒಂದೆರೆಡು ಬಾರಿ ಮಾತ್ರ ಕಚೇರಿಯಲ್ಲಿ ಕಾಣಸಿಕೊಳ್ಳುವ ತಹಶೀಲ್ದಾರ್, ಸದಾ ಹೊರಗೆ ಇರುತ್ತಾರೆ. ಸಿಬ್ಬಂದಿಯನ್ನು ಕೇಳಿದರೆ ಸಾಹೇಬರು ಫೀಲ್ಡಿಗೆ ಹೋಗಿದ್ದಾರೆ ಎಂದು ಹೇಳುತ್ತಾರೆ. ನಿತ್ಯ ಹಳ್ಳಿಗಳಿಂದ ಬರುವವರು ಅಹವಾಲು ಕೇಳುವವರಿಲ್ಲದೇ ಬರಿಗೈಲಿ ಹಿಂದಿರುಗುತ್ತಿದ್ದಾರೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಜಿ.ಎಚ್. ಹಜರತ್ ಆಲಿ ದೂರಿದರು.

ಸಾರ್ವಜನಿಕ ದಾಖಲೆ ಕೊಠಡಿ (ರೆಕಾರ್ಡ್‌ ರೂಂ) ಉಸ್ತುವಾರಿ ನೋಡಿಕೊಳ್ಳುವ ಸಿಬ್ಬಂದಿಯೊಬ್ಬರು 14 ವರ್ಷಗಳಿಂದ ಇಲ್ಲೇ ಬೀಡುಬಿಟ್ಟಿದ್ದು, ಹಳೆಯ ಪಹಣಿ, ಮ್ಯುಟೇಷನ್ ಮುಂತಾದ ಭೂ ದಾಖಲೆಗಳನ್ನು ಕೊಡಲು ರೈತರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಾರೆ. ಪವನಯಂತ್ರ ಮತ್ತು ಸೋಲಾರ್ ಕಂಪನಿಗಳಿಗೆ ಮೂಲ ದಾಖಲೆಗಳ ಕಡತಗಳನ್ನು ಹೊರಗೆ ಕೊಟ್ಟು ಕಳುಹಿಸುತ್ತಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಎರಡು ವರ್ಷದ ಹಿಂದೆ ಜಿಲ್ಲಾಧಿಕಾರಿಯವರು ಅವರನ್ನು ಹೊನ್ನಾಳಿಗೆ ವರ್ಗಾ ಮಾಡಿದ್ದರು. ಆದರೆ, ಪ್ರಭಾವ ಬೀರಿ ಮತ್ತೆ ಇಲ್ಲಿಗೇ ವರ್ಗಾ ಆಗಿ ಬಂದಿದ್ದರು. ಆದರೂ ಅವರಿಗೆ ದಾಖಲೆ ಕೊಠಡಿ ಉಸ್ತುವಾರಿ ನೀಡಿರಲಿಲ್ಲ. ಆದರೆ, ಈಗಿನ ತಹಶೀಲ್ದಾರ್ ಅವರು ಮತ್ತೆ ಒತ್ತಡಕ್ಕೆ ಮಣಿದು ಕಳಂಕಿತ ಸಿಬ್ಬಂದಿಗೆ ದಾಖಲೆ ಕೊಠಡಿ ಉಸ್ತುವಾರಿ ನೀಡಿದ್ದಾರೆ’ ಎಂದು ಆರೋಪಿಸಿದರು.

ಜಗಳೂರಿನ ತಹಶೀಲ್ದಾರ್ ಕಚೇರಿಯಲ್ಲಿ ಮಧ್ಯಾಹ್ನ 12 ಗಂಟೆ ವೇಳೆಗೆ ಸಿಬ್ಬಂದಿ ಕುರ್ಚಿಗಳು ಖಾಲಿಯಾಗಿರುವುದು
ಜಗಳೂರು ತಾಲ್ಲೂಕು ಆಡಳಿತದ ಶಕ್ತಿ ಕೇಂದ್ರವಾಗಿರುವ ಮಿನಿ ವಿದಾನಸೌಧ

5 ವರ್ಷ ಮೀರಿದ ಸಿಬ್ಬಂದಿ ವಿವರ ಕೇಳಿದ ಸರ್ಕಾರ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಗುಣಾತ್ಮಕವಾಗಿ ಸ್ಪಂದಿಸಬೇಕು. ಕಚೇರಿಯಲ್ಲಿ ಜನರಿಗೆ ಲಭ್ಯರಾಗಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಒಂದೇ ಸ್ಥಳದಲ್ಲಿ 5 ವರ್ಷ ಮೀರಿ ಸೇವೆಯಲ್ಲಿದ್ದಲ್ಲಿ ಯಾವುದೇ ದೂರುಗಳಿದ್ದಲ್ಲಿ ಅಂತಹ ಅಧಿಕಾರಿಗಳು ಮತ್ತು ಸಿಬ್ಬಂದಿ ಬಗ್ಗೆ ವಿವರವಾದ ವರದಿ ಸಲ್ಲಿಸಿ ಎಂದು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯ ಆದೇಶಿಸಿದ್ದಾರೆ. ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ 5 ವರ್ಷಕ್ಕೂ ಮೀರಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿ ಕುರಿತು ಸರ್ಕಾರಕ್ಕೆ ವಿವರವಾದ ವರದಿ ಕಳುಹಿಸಲಾಗಿದೆ ಎಂದು ತಹಶೀಲ್ದಾರ್ ಕಲೀಂ ಉಲ್ಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.