ADVERTISEMENT

ರಾಂಪುರ ಮಠದಿಂದ ಕಾರ್ಯಕ್ರಮ: ಗ್ರಾಮಸ್ಥರು, ಭಕ್ತರ ನಡುವೆ ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 15:44 IST
Last Updated 29 ಅಕ್ಟೋಬರ್ 2024, 15:44 IST
ಸಾಸ್ವೆಹಳ್ಳಿ ಸಮೀಪದ ರಾಂಪುರ ಬೃಹನ್ಮಠದಲ್ಲಿ ನಡೆದ ಪೂರ್ವಭಾವಿ ಸಭೆಯ ನೋಟ
ಸಾಸ್ವೆಹಳ್ಳಿ ಸಮೀಪದ ರಾಂಪುರ ಬೃಹನ್ಮಠದಲ್ಲಿ ನಡೆದ ಪೂರ್ವಭಾವಿ ಸಭೆಯ ನೋಟ   

ಸಾಸ್ವೆಹಳ್ಳಿ: ಸಮೀಪದ ರಾಂಪುರ ಬೃಹನ್ಮಠದಲ್ಲಿ ಮಠದ ಉಸ್ತುವಾರಿ ಶಿವಕುಮಾರ ಹಾಲಸ್ವಾಮೀಜಿ ಅಧ್ಯಕ್ಷತೆಯಲ್ಲಿ ಶಿಲಾ ಮಂಟಪ ಲೋಕಾರ್ಪಣೆ, ಲಿಂಗೈಕ್ಯ ಶ್ರೀಗಳ ಪ್ರಾಣ ಪ್ರತಿಷ್ಠಾಪನೆ, ಗದ್ದಿಗೆಯ ಕಳಶಾರೋಹಣ, ಕಾಶಿ ಜಗದ್ಗುರು ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಬೃಹನ್ಮಠದ ರಥೋತ್ಸವದ ಪೂರ್ವಭಾವಿ ಸಭೆ ನಡೆಸಲಾಯಿತು.

ಬರುವ ವರ್ಷದ ಫೆಬ್ರುವರಿ 11, 12, 13, 14 ಮತ್ತು 15ರಂದು ಕಾರ್ಯಕ್ರಮಗಳನ್ನು ನಡೆಸಲಾಗುವುದು. ಕಾಶಿ ಪೀಠದ ನೂತನ ಶ್ರೀ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ 12ಕ್ಕೆ, 11ಕ್ಕೆ ಶ್ರೀಗಳ ಶಿಲಾಮೂರ್ತಿ ಮೆರವಣಿಗೆ, 13ರಂದು ಲಿಂಗೈಕ್ಯ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಶಿಲಾಮೂರ್ತಿಯನ್ನು ಸಾಸ್ವೆಹಳ್ಳಿ, ಬುಳ್ಳಾಪುರ, ರಾಂಪುರ ಗ್ರಾಮಗಳಲ್ಲಿ ಮೆರವಣಿಗೆ ಮಾಡಲಾಗುವುದು ಎಂದು ಮಠದ ಭಕ್ತರಾದ ರಾಜಶೇಖರ್ ಮಾಹಿತಿ ನೀಡಿದರು.

ಅಡ್ಡ ಪಲ್ಲಕ್ಕಿ ಉತ್ಸವಕ್ಕೆ ಭಿನ್ನ ಹಾಕಲು ರಾಂಪುರ ಗ್ರಾಮಸ್ಥರನ್ನು ಬಿಟ್ಟು ಹೊರಗಿನವರನ್ನು ಕರೆಸುವುದಕ್ಕೆ ಗ್ರಾಮದ ಷಣ್ಮುಖಪ್ಪ ಆಕ್ಷೇಪ ವ್ಯಕ್ತಪಡಿಸಿದರು.

ಶ್ರೀಮಠದ ಎಲ್ಲಾ ಕಾರ್ಯಕ್ರಮಗಳು ಸ್ವಾಗತಾರ್ಹ. ಆದರೆ, ಕಾಶಿ ಜಗದ್ಗುರು ಅವರು ಶ್ರೀಮಠಕ್ಕೆ ಕಾರ್ತಿಕ ಮಾಸದಲ್ಲಿ ವಟುವನ್ನು ಆಯ್ಕೆ ಮಾಡುವುದಾಗಿ ತಿಳಿಸಿದ್ದಾರೆ. ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಲಿಂಗೈಕ್ಯರಾಗಿ ನಾಲ್ಕು ವರ್ಷಗಳು ಪೂರ್ಣಗೊಂಡಿವೆ. ಅವರ ಪ್ರಾಣ ಪ್ರತಿಷ್ಠಾಪನೆ ಮಠದ ಉತ್ತರಾಧಿಕಾರಿ ನೇತೃತ್ವದಲ್ಲಿ ನಡೆದರೆ ಶೋಭೆ ಎಂದು ಗ್ರಾಮದ ಶಿವಾನಂದಯ್ಯ ಅನಿಸಿಕೆ ವ್ಯಕ್ತಪಡಿಸಿದರು.

ಗ್ರಾಮಸ್ಥರು ಹಾಗೂ ಭಕ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ADVERTISEMENT

ಮಠದ ಉಸ್ತುವಾರಿ ವಹಿಸಿಕೊಂಡಿರುವ ಶಿವಕುಮಾರ ಹಾಲಸ್ವಾಮೀಜಿ, ಶೀಲಾ ಮಂಟಪಕ್ಕೆ ₹ 3 ಕೋಟಿ ಸಾಲ ಮಾಡಲಾಗಿದೆ. ಈ ಸಾಲವನ್ನು ತೀರಿಸಿ, ಮಠದ ಉಸ್ತುವಾರಿಯನ್ನು ಯಾರು ಬೇಕಾದರೂ ನಡೆಸಿಕೊಂಡು ಹೋಗಬಹುದು. ಮುಂದಿನ ಎಲ್ಲಾ ಕಾರ್ಯಕ್ರಮಗಳನ್ನು ರಾಂಪುರ ಗ್ರಾಮಸ್ಥರೇ ನಡೆಸಲಿ ಎಂದರು.

ಗ್ರಾಮಸ್ಥರು ಕಾಶಿ ಜಗದ್ಗುರು ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಲು ತೀರ್ಮಾನಿಸಿದರು. ಸಾಸ್ವೆಹಳ್ಳಿ, ಬುಳ್ಳಾಪುರ, ಐನೂರು, ಕುರುವ ಗ್ರಾಮಗಳ ಮುಖಂಡರು ಸಭೆಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.