ADVERTISEMENT

ಮೊದಲು ಮನುಷ್ಯ ಪ್ರೀತಿ ಕಲಿಸಿ: ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಸಂತಕುಮಾರ್‌

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 17:45 IST
Last Updated 8 ನವೆಂಬರ್ 2019, 17:45 IST
ದಾವಣಗೆರೆಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಚಾರಸಂಕಿರಣದಲ್ಲಿ ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಡಾ. ಎನ್‌.ಎಸ್‌. ವೀರೇಶ್‌ (ಎಡ ತುದಿ) ಅವರ ನಾಲ್ಕು ಕೃತಿಗಳನ್ನು ಬಿಡುಗಡೆ ಮಾಡಿದರು.
ದಾವಣಗೆರೆಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಚಾರಸಂಕಿರಣದಲ್ಲಿ ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಡಾ. ಎನ್‌.ಎಸ್‌. ವೀರೇಶ್‌ (ಎಡ ತುದಿ) ಅವರ ನಾಲ್ಕು ಕೃತಿಗಳನ್ನು ಬಿಡುಗಡೆ ಮಾಡಿದರು.   

ದಾವಣಗೆರೆ: ‘ಕಲೆ, ವಿಜ್ಞಾನ, ವಾಣಿಜ್ಯ ವಿಷಯಗಳನ್ನು ಕಲಿಸುವುದಕ್ಕಿಂತ ಮೊದಲು ಮನುಷ್ಯನ ಪ್ರೀತಿಸುವುದನ್ನು ಕಲಿಸಬೇಕಾಗಿರುವುದು ಇಂದು ಹೆಚ್ಚು ಅಗತ್ಯವಾಗಿದೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ.ವಿ. ವಸಂತಕುಮಾರ್‌ ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗ ಶುಕ್ರವಾರ ಹಮ್ಮಿಕೊಂಡಿದ್ದ ‘ಮಧ್ಯ ಕರ್ನಾಟಕದ ಕನ್ನಡ ಸಾಹಿತ್ಯ–ತಾತ್ವಿಕ ನೆಲೆಗಳು’ ಕುರಿತ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಅವರು ಆಶಯ ನಡಿಗಳನ್ನಾಡಿದರು.

‘ಅರಣ್ಯಗಳು ಮತ್ತು ಹಳ್ಳಿಗಳುವಿಶ್ವವಿದ್ಯೆಯನ್ನು ಉಳಿಸಿ ಬೆಳೆಸಿರುವ ಕೇಂದ್ರಗಳಾಗಿವೆ. ಅರಣ್ಯಗಳು ಮತ್ತು ಹಳ್ಳಿಗಳಲ್ಲಿ ಬೆಳೆದ ಜ್ಞಾನ ಪರಂಪರೆಗಳನ್ನು ಮಹಾನಗರಗಳು ಕಳೆದುಕೊಂಡರೆ ಅವುಗಳಿಗೆ ಇರುವುದು ಆತ್ಮಹತ್ಯೆಯ ಹಾದಿಯೇ ಹೊರತು ಆತ್ಮವಿಕಾಸದ ಹಾದಿಯಲ್ಲ’ ಎಂದು ಪ್ರತಿಪಾದಿಸಿದರು.

ADVERTISEMENT

‘ಅನ್ನ–ಬಟ್ಟೆಗೆ ಸೀಮಿತವಾದರೆ ಅದನ್ನು ಅರಿವು ಎಂದು ಕರೆಯಲು ಸಾಧ್ಯವಿಲ್ಲ. ಅನ್ನ ಆನಂದದ ಎತ್ತರಕ್ಕೆ ಏರಿದಾಗ ಅದನ್ನು ಅರಿವು ಎಂದು ಕರೆಯಬಹುದು. ಅನ್ನ ಆನಂದ ಆಗಿ ಬೆಳೆಯುವ, ಬೆಳೆಸುವ ವಿದ್ಯೆಯನ್ನು ವಿಶ್ವವಿದ್ಯೆ ಎಂದು ಕರೆದಿದ್ದಾರೆ’ ಎಂದರು.

‘ತಾತ್ವಿಕತೆಯ ನೆಲೆಗಳನ್ನು ಇಂದು ಹೆಚ್ಚು ಚರ್ಚಿಸುವ ಅಗತ್ಯವಿದೆ. ಕನ್ನಡ ಎಂ.ಎ ಹಾಗೂ ಮಾನವಿಕ ವಿಜ್ಞಾನ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಸಾಹಿತ್ಯ ಸೀಮಿತವಾದುದಲ್ಲ. ನಮ್ಮ ನಡುವೆ ಯಾರು ಮನುಷ್ಯನಾಗಿ ಬದುಕಬೇಕು ಎಂದು ಬಯಸುತ್ತಾರೋ ಅವರೆಲ್ಲರೂ ಸಾಹಿತ್ಯವನ್ನು ರಕ್ತದಲ್ಲಿ ಧರಿಸಿಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ’ ಎಂದು ಅಭಿಪ್ರಾಯಪಟ್ಟರು.

‘ಕನ್ನಡ ಸಾಹಿತ್ಯದಲ್ಲಿ ಸಂಸ್ಕೃತಿ, ಪರಂಪರೆ ಅಡಕವಾಗಿದೆ. ಸಾಹಿತ್ಯವನ್ನು ಈ ರೀತಿ ಅಧ್ಯಯನ ಮಾಡುವ ಮೂಲಕ ಹೊಸ ತಲೆಮಾರಿಗೆ ಅದನ್ನು ತಲುಪಿಸಬೇಕಾಗಿದೆ. ಅಳುವವರ ಕಣ್ಣೀರು ಒರೆಸುವುದು ಒಂದು ತಾತ್ವಿಕತೆ. ದುಡಿದು ತಿನ್ನಬೇಕು; ಹಂಚಿ ತಿನ್ನಬೇಕು ಎಂಬುದೂ ತಾತ್ವಿಕತೆಯಾಗಿದೆ. ಇವು ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಬೆಳೆಸಿವೆ. ಇವುಗಳನ್ನು ಅಧ್ಯಯನ ಮಾಡಬೇಕಾಗಿದೆ’ ಎಂದು ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರೊ. ಸ.ಚಿ. ರಮೇಶ್‌, ‘ವಿಶ್ವವಿದ್ಯಾಲಯದ ಅಮರತ್ವವನ್ನು ಪ್ರಸಾರಾಂಗ ವಿಭಾಗ ಸಾರಿ ಹೇಳುತ್ತದೆ. ದಾವಣಗೆರೆ ವಿ.ವಿ.ಯ ಪ್ರಸಾರಾಂಗವು ನೂರಾರು ಮೌಲಿಕ ಪುಸ್ತಕಗಳನ್ನು ಕನ್ನಡನಾಡಿನ ಜನತೆಗೆ ಕೊಡಬೇಕು’ ಎಂದು ಸಲಹೆ ನೀಡಿದರು.

‘ಪ್ರಜ್ಞಾವಂತ ಪ್ರಜೆಗಳನ್ನು ಸೃಷ್ಟಿಸುವಲ್ಲಿ ಗ್ರಂಥಲೋಕದ ಪಾತ್ರ ಬಹಳ ಮುಖ್ಯವಾಗಿದೆ. ವಿಶ್ವವಿದ್ಯಾಲಯವು ಜ್ಞಾನದ ಹಸಿವನ್ನು ತಣಿಸುವ ಕೆಲಸವನ್ನೂ ಮಾಡಬೇಕು’ ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ. ಶರಣಪ್ಪ ವಿ. ಹಲಸೆ, ‘ವಿದ್ಯಾರ್ಥಿಗಳು ಸಮಯದ ಸದ್ಬಳಕೆ ಮಾಡಿಕೊಳ್ಳಬೇಕು. ವಿಷಯವನ್ನು ಗ್ರಹಿಸಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಪ್ರಸಾರಾಂಗ ವಿಭಾಗವನ್ನು ಉದ್ಘಾಟಿಸಿದ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು, ಡಾ. ಎನ್‌.ಎಸ್‌. ವೀರೇಶ ಉತ್ತಂಗಿ ಅವರ ನಾಲ್ಕು ಪುಸ್ತಕಗಳನ್ನೂ ಬಿಡುಗಡೆಗೊಳಿಸಿದರು.

ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಸವರಾಜ ಬಣಕಾರ, ಪರೀಕ್ಷಾಂಗ ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ್‌, ಹಣಕಾಸು ಅಧಿಕಾರಿ ಪ್ರೊ. ಗೋಪಾಲ ಎಂ. ಅಡವಿರಾವ್‌, ಕಲಾ ನಿಕಾಯದ ಡೀನ್‌ ಪ್ರೊ. ಕೆ.ಬಿ. ರಂಗಪ್ಪ, ಸಿಂಡಿಕೇಟ್‌ ಸದಸ್ಯ ಕೊಂಡಜ್ಜಿ ಜಯಪ್ರಕಾಶ್‌ ಹಾಜರಿದ್ದರು.

ಕನ್ನಡ ಅಧ್ಯಯನ ವಿಭಾಗದ ಸಂಯೋಜನಾಧಿಕಾರಿ ಡಾ. ಶಿವಕುಮಾರ ಕಣಸೋಗಿ ಸ್ವಾಗತಿಸಿದರು. ಡಾ. ಎನ್‌.ಎಸ್‌. ವೀರೇಶ ಉತ್ತಂಗಿ ನಿರೂಪಿಸಿದರು. ಬಳಿಕ ವಿವಿಧ ಗೋಷ್ಠಿಗಳು ನಡೆದವು.

***

ದೇಸೀಯ ಸಾಂಪ್ರದಾಯಿಕ ವಿಚಾರ, ತತ್ವ–ಸಿದ್ಧಾಂತಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಿಭಿನ್ನ ಮೆರುಗು ನೀಡಬೇಕಾಗಿದೆ. ಆಗ ಮಾತ್ರ ಸಂಸ್ಕೃತಿ, ಸಂಪ್ರದಾಯಗಳ ಉಳಿವು ಸಾಧ್ಯ.

– ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿರಿಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.