ಮಲೇಬೆನ್ನೂರು: ‘ಹೋಂ ವರ್ಕ್’ ಮಾಡಿಕೊಂಡು ಬಂದಿಲ್ಲ ಎಂಬ ಕಾರಣಕ್ಕೆ ಶಿಕ್ಷೆ ನೀಡಲೆಂದೇ ಸಮೀಪದ ಹಿರೇಹಾಲಿವಾಣ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿಯೊಬ್ಬರು ಸೋಮವಾರ ತರಗತಿಯಲ್ಲಿ ಬಸ್ಕಿ ಹೊಡೆಸಿದ್ದರಿಂದ 9 ಜನ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡು ಚಿಕಿತ್ಸೆ ಪಡೆದಿದ್ದಾರೆ.
ಸೋಮವಾರ ಬಸ್ಕಿ ಹೊಡೆದಿದ್ದ ವಿದ್ಯಾರ್ಥಿನಿಯರು ರಾತ್ರಿಯಿಡೀ ಸುಸ್ತಿನಿಂದ ಬಳಲಿದ್ದರು. ಮಂಗಳವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಸಂಜೆ ವೇಳೆಗೆ ಮನೆಗೆ ವಾಪಸಾದರು.
ಮನೆಯ ಮುಂದೆ ಗಿಡ ನೆಟ್ಟು ಪಾಲಕರ ಜತೆ ಇರುವ ಚಿತ್ರ ತೆಗೆದುಕೊಂಡು ಬರುವಂತೆ ವಿಜ್ಞಾನ ಶಿಕ್ಷಕಿಯು ವಿದ್ಯಾರ್ಥಿಗಳಿಗೆ ತಿಳಿಸಿದ್ದರು. ಆದರೆ ತಮ್ಮ ಬಳಿ ಮೊಬೈಲ್ ಇಲ್ಲದ ಕೆಲವು ವಿದ್ಯಾರ್ಥಿಗಳು ಶಿಕ್ಷಕಿ ಹೇಳಿದಂತೆ ಫೋಟೊ ತಂದಿರಲಿಲ್ಲ. ಹೀಗಾಗಿ, ಶಾಲೆಯ ಕೊಠಡಿಯ ಬಾಗಿಲು ಹಾಕಿಸಿ ಬಸ್ಕಿ ಹೊಡೆಸಿದರು ಎಂದು ವಿದ್ಯಾರ್ಥಿನಿಯರು ಮಾಹಿತಿ ನೀಡಿದರು.
ಬಸ್ಕಿ ಹೊಡೆದು ಶಾಲೆಯಿಂದ ಮನೆಗೆ ತೆರಳಿದ್ದವರ ಪೈಕಿ 9 ಜನ ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದರು. ಇದನ್ನು ಗಮನಿಸಿದ ಮುಖ್ಯ ಶಿಕ್ಷಕ, ಸಹ ಶಿಕ್ಷಕ ಹಾಗೂ ಪಾಲಕರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಅವರನ್ನು ಕರೆದೊಯ್ದು ಚಿಕಿತ್ಸೆ ಕೊಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.