ADVERTISEMENT

ಆ್ಯಪ್‌ ಆಧಾರದಲ್ಲಿ ಅನ್ಯ ಸ್ಥಳಗಳಿಗೆ ನಿಯೋಜನೆ: ಶಿಕ್ಷಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 2:33 IST
Last Updated 24 ಸೆಪ್ಟೆಂಬರ್ 2025, 2:33 IST
ಜಗಳೂರು ತಾಲ್ಲೂಕಿನಲ್ಲಿ ಸಮೀಕ್ಷಾ ಕಾರ್ಯಕ್ಕೆ ಶಿಕ್ಷಕರನ್ನು ಅವೈಜ್ಞಾನಿಕವಾಗಿ ನಿಯೋಜನೆ ಮಾಡಲಾಗಿದೆ ಎಂದು ಶಿಕ್ಷಕರು ತಹಶೀಲ್ದಾರ್ ಹಾಗೂ ಬಿಇಒಗೆ ಮಂಗಳವಾರ ದೂರು ಸಲ್ಲಿಸಿದರು
ಜಗಳೂರು ತಾಲ್ಲೂಕಿನಲ್ಲಿ ಸಮೀಕ್ಷಾ ಕಾರ್ಯಕ್ಕೆ ಶಿಕ್ಷಕರನ್ನು ಅವೈಜ್ಞಾನಿಕವಾಗಿ ನಿಯೋಜನೆ ಮಾಡಲಾಗಿದೆ ಎಂದು ಶಿಕ್ಷಕರು ತಹಶೀಲ್ದಾರ್ ಹಾಗೂ ಬಿಇಒಗೆ ಮಂಗಳವಾರ ದೂರು ಸಲ್ಲಿಸಿದರು   

ಜಗಳೂರು: ಸರ್ಕಾರದ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆ ಕಾರ್ಯದಲ್ಲಿ ಸಮೀಕ್ಷಕ ಶಿಕ್ಷಕರನ್ನು ಕಾರ್ಯಸ್ಥಳದ ಗ್ರಾಮದಿಂದ ಬೇರೆ ಗ್ರಾಮಗಳಿಗೆ ನಿಯೋಜನೆ ಮಾಡಿರುವುದರಿಂದ ಸಾಕಷ್ಟು ತೊಂದರೆಗಳಾಗಿವೆ ಎಂದು ನೂರಾರು ಶಿಕ್ಷಕರು ಪಟ್ಟಣದಲ್ಲಿ ಮಂಗಳವಾರ ತಹಶೀಲ್ದಾರ್‌ಗೆ ದೂರು ನೀಡಿದರು.

‘ನಾವು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಗ್ರಾಮಗಳಲ್ಲೇ ಈ ಹಿಂದೆ ಹಲವು ಗಣತಿ ಹಾಗೂ ಸಮೀಕ್ಷಾ ಕಾರ್ಯಗಳಲ್ಲಿ ಭಾಗವಹಿಸಿದ್ದೇವೆ. ಈಗ ಸಮೀಕ್ಷಾ ಕಾರ್ಯಕ್ಕೆ ದೂರದ ಊರುಗಳಿಗೆ ನಿಯೋಜನೆ ಮಾಡಲಾಗಿದೆ. ಅಲ್ಲದೇ ಆ್ಯಪ್‌ಗಳ ಆಧಾರದ ಮೇಲೆ ಸಮೀಕ್ಷೆಗೆ ನಿಯೋಜಿಸಿದ್ದು, ಪಟ್ಟಣದ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಇರುವ ಮನೆಗಳನ್ನು ಒಬ್ಬ ಶಿಕ್ಷಕರಿಗೆ ವಹಿಸಲಾಗಿದೆ. ಇದರಿಂದ ತೀವ್ರ ಸಮಸ್ಯೆಯಾಗಿದೆ’ ಎಂದು ಶಿಕ್ಷಕರು ದೂರಿದರು.

‘ಈಗ ಸೇವೆ ಸಲ್ಲಿಸುತ್ತಿರುವ ಗ್ರಾಮಗಳಲ್ಲಿರುವ ಪ್ರತಿ ಮನೆಯ ಬಗ್ಗೆ ಮಾಹಿತಿ ಇದೆ. ಈಗ ಹೊಸ ಗ್ರಾಮಗಳಿಗೆ ನಿಯೋಜನೆ ಮಾಡಿರುವುದರಿಂದ ಪ್ರತಿ ಮನೆಯನ್ನೂ ಹುಡುಕಿಕೊಂಡು ಅಲೆದಾಡುವ ಸ್ಥಿತಿ ಉಂಟಾಗಿದೆ. ಯವ ಕಾರಣಕ್ಕೆ ಸ್ವಗ್ರಾಮ ಬಿಟ್ಟು ಬೇರೆಡೆಗೆ ನಿಯೋಜನೆ ಮಾಡಲಾಗಿದೆ. ಆ್ಯಪ್ ತಂತ್ರಾಂಶ ಭಾರಿ ತೊಡಕಿನಿಂದ ಕೂಡಿದ್ದು, ಸದಾ ಸರ್ವರ್ ಸಮಸ್ಯೆಯಿಂದ ಆ್ಯಪ್ ತೆರೆದುಕೊಳ್ಳುವುದಿಲ್ಲ. ಕೂಡಲೇ ಸಮಸ್ಯೆಗಳನ್ನು ಪರಿಹರಿಸಿ’ ಎಂದು ಶಿಕ್ಷಕರು ಆಗ್ರಹಿಸಿದರು.

ADVERTISEMENT

‘ಸರ್ವರ್ ಸಮಸ್ಯೆ ರಾಜ್ಯದ ಎಲ್ಲೆಡೆ ಇದೆ. ಬೇರೆ ಗ್ರಾಮಗಳಿಗೆ ಸಮೀಕ್ಷಾದಾರರನ್ನು ನಿಯೋಜಿಸಿರುವ ಕ್ರಮ ರಾಜ್ಯದ ಎಲ್ಲೆಡೆ ಸಾಮಾನ್ಯವಾಗಿದೆ. ಈ ಬಗ್ಗೆ ಮೇಲಧಿಕಾರಿಗಳಿಗೆ ಮಾತನಾಡುತ್ತೇವೆ’ ಎಂದು ತಹಶೀಲ್ದಾರ್ ಕಲೀಂ ಉಲ್ಲಾ ಹಾಗೂ ಬಿಒ ಹಾಲಮೂರ್ತಿ ಸಮಜಾಯಿಷಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.