ADVERTISEMENT

ಜಗಳೂರು|ದಮನಿತರು ಶಿಕ್ಷಿತರಾದಲ್ಲಿ ಪ್ರಜಾಪ್ರಭುತ್ವ ಗಟ್ಟಿ: ಅರುಣ್ ಜೋಳದ ಕೂಡ್ಲಿಗಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 4:38 IST
Last Updated 6 ಸೆಪ್ಟೆಂಬರ್ 2025, 4:38 IST
ಜಗಳೂರಿನಲ್ಲಿ ಶುಕ್ರವಾರ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರು ಹಾಗೂ ನಿವೃತ್ತ ಉಪನ್ಯಾಸಕರನ್ನು ಶಾಸಕ ಬಿ. ದೇವೇಂದ್ರಪ್ಪ ಸನ್ಮಾನಿಸಿದರು 
ಜಗಳೂರಿನಲ್ಲಿ ಶುಕ್ರವಾರ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರು ಹಾಗೂ ನಿವೃತ್ತ ಉಪನ್ಯಾಸಕರನ್ನು ಶಾಸಕ ಬಿ. ದೇವೇಂದ್ರಪ್ಪ ಸನ್ಮಾನಿಸಿದರು    

ಜಗಳೂರು: ‘ಸಂವಿಧಾನದ ಕನಸು ಮತ್ತು ಆಶಯಗಳನ್ನು ಶಿಕ್ಷಕರು ಮಕ್ಕಳ ಮನಸ್ಸಿನಲ್ಲಿ ಬಿತ್ತಿದಲ್ಲಿ ಭವಿಷ್ಯದಲ್ಲಿ ಭಾರತದ ಸಮಗ್ರ ಪ್ರಗತಿ ಸಾಧ್ಯವಾಗುತ್ತದೆ’ ಎಂದು ಲೇಖಕ ಅರುಣ್ ಜೋಳದ ಕೂಡ್ಲಿಗಿ ಅಭಿಪ್ರಾಯಪಟ್ಟರು.

ಶುಕ್ರವಾರ ಪಟ್ಟಣದ ವಾಲ್ಮೀಕಿ ಭವನದಲ್ಲಿ ರಾಧಕೃಷ್ಣನ್ ಜಯಂತಿ ಅಂಗವಾಗಿ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಒಂದು ದೇಶವನ್ನು ಪ್ರಗತಿ ಅಥವಾ ವಿನಾಶದತ್ತ ಕೊಂಡೊಯ್ಯುವಲ್ಲಿ ಶಿಕ್ಷಣದ ಪಾತ್ರ ಮಹತ್ತರವಾಗಿದೆ. ಶಿಕ್ಷಣದಿಂದ ಮಾತ್ರ ಪ್ರಜಾತಂತ್ರ ವ್ಯವಸ್ಥೆ ಯಶಸ್ವಿಯಾಗಿ ಮುಂದುವರಿಯಬಲ್ಲದು. ದಮನಿತರೆಲ್ಲರೂ ಶಿಕ್ಷಿತರಾದಲ್ಲಿ ಮಾತ್ರ ಪ್ರಜಾಪ್ರಭುತ್ವ ಗಟ್ಟಿಗೊಳ್ಳಲು ಸಾಧ್ಯ. ಅಂಬೇಡ್ಕರ್ ಅವರ ಮೂರು ಪ್ರಮುಖ ಸಂದೇಶಗಳಲ್ಲಿ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ. ದೇಶದಲ್ಲಿ ಅಂದಾಜು 1 ಕೋಟಿ ಶಿಕ್ಷಕರು ಶಿಕ್ಷಣ ಕಲಿಸುವಲ್ಲಿ ನಿರತರಾಗಿದ್ದಾರೆ’ ಎಂದರು.

‘ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಫಲವಾಗಿ ಜವಾನನಾಗಿದ್ದ ನಾನು ಇಂದು ಶಾಸಕನಾಗಿದ್ದೇನೆ. ನನ್ನ ಮಗ ಇಂದು ಐಎಎಸ್ ಅಧಿಕಾರಿಯಾಗಿದ್ದಾನೆ. ಶಿಕ್ಷಣದಿಂದ ಮಾತ್ರ ಶೋಷಿತರು ಸಮಾಜದಲ್ಲಿ ಘನತೆ, ಗೌರವದ ಬದುಕು ಸಾಗಿಸಬಲ್ಲರು’ ಎಂದು ಸಮಾರಂಭವನ್ನು ಉದ್ಘಾಟಿಸಿದ ಶಾಸಕ ಬಿ. ದೇವೇಂದ್ರಪ್ಪ ಅಭಿಪ್ರಾಯಪಟ್ಟರು.

ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿ, ಬೆಳ್ಳಿಯ ಸಾರೋಟಿನಲ್ಲಿ ರಾಧಕೃಷ್ಣನ್,ಸಾವಿತ್ರಿ ಭಾಯಿಫುಲೆ, ಭಾವಚಿತ್ರದೊಂದಿಗೆ ಉರಿಮೆ, ತಮಟೆ, ಕಹಳೆ, ಹಲಗೆ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಉರಿಮೆಯ ನಾದಕ್ಕೆ ಶಾಸಕ ದೇವೇಂದ್ರಪ್ಪ ಅವರು ಹೆಜ್ಜೆ ಹಾಕಿ ಗಮನಸೆಳೆದರು.

ಎಸ್ಎಸ್ಎಲ್‌ಸಿ, ಪಿಯು ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕ, ಉಪನ್ಯಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಾಸಕರ ಪತ್ನಿ ತಿಪ್ಪಮ್ಮ ದೇವೇಂದ್ರಪ್ಪ, ತಾಲ್ಲೂಕು ಪಂಚಾಯಿತಿ ಇಓ ಕೆಂಚಪ್ಪ, ಬಿಇಓ ಹಾಲಮೂರ್ತಿ, ಬಿಆರ್‌ಸಿ ಡಿ.ಡಿ. ಹಾಲಪ್ಪ, ಪಟ್ಟಣ ಪಂಚಾಯಿತಿ ಸದಸ್ಯರಾದ ಷಕೀಲ್ ಅಹ್ಮದ್, ರಮೇಶ್, ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎಲ್. ತಿಪ್ಪೇಸ್ವಾಮಿ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಮಹಾಂತೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹಾಲಸ್ವಾಮಿ, ಮುಖಂಡರಾದ ಷಂಷೀರ್ ಅಹ್ಮದ್, ಬಿ.ಮಹೇಶ್ವರಪ್ಪ, ಬೆಂಚಿಕಟ್ಟೆ ದ್ಯಾಮಪ್ಪ ಮತ್ತು ಇದ್ದರು.

ಗಳೂರಿನಲ್ಲಿ ಶುಕ್ರವಾರ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರು ಹಾಗೂ ನಿವೃತ್ತ ಉಪನ್ಯಾಸಕರನ್ನು ಶಾಸಕ ಬಿ. ದೇವೇಂದ್ರಪ್ಪ ಅವರು ಸನ್ಮಾನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.