ADVERTISEMENT

ದಾವಣಗೆರೆ: ಜಿಲ್ಲಾ ಅತ್ಯುತ್ತಮ ದೈಹಿಕ ಶಿಕ್ಷಣ ಶಿಕ್ಷಕ ಜನಾರ್ದನ ರೆಡ್ಡಿ

ಗಾಂಧಿ ಟೋಪಿ ಶಾಲೆಯ ಶಿಕ್ಷಕನಿಗೆ ಒಲಿದ ಜಿಲ್ಲಾ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 3:22 IST
Last Updated 5 ಸೆಪ್ಟೆಂಬರ್ 2021, 3:22 IST
ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ   

ಹರಪನಹಳ್ಳಿ: ಗಾಂಧೀಜಿ ಟೋಪಿ ಧರಿಸುವುದನ್ನು ಕಡ್ಡಾಯಗೊಳಿಸಿ ನಾಡಿನ ಗಮನ ಸೆಳೆದಿರುವ ತಾಲ್ಲೂಕಿನ ಚಿಗಟೇರಿ ಗ್ರಾಮದ ನಾರದಮುನಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಜನಾರ್ದನ ರೆಡ್ಡಿ ಅವರು ವಿಜಯನಗರ-ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯ 2021-22ನೇ ಸಾಲಿನ ‘ಜಿಲ್ಲಾ ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಚಿಗಟೇರಿ ನಾರದಮುನಿ ವಿದ್ಯಾವರ್ಧಕ ಸಂಘದಿಂದ 1963ರಲ್ಲಿ ಶುರುವಾದ ನಾರದಮುನಿ ಪ್ರೌಢಶಾಲೆಗೆ ದೈಹಿಕ ಶಿಕ್ಷಣ ಶಿಕ್ಷಕರಾಗಿ ಜನಾರ್ದನ ರೆಡ್ಡಿ ವರು 2003ರಲ್ಲಿ ನೇಮಕಗೊಂಡಿದ್ದರು. 19 ವರ್ಷಗಳ ಸುದೀರ್ಘ ಸೇವೆಯಲ್ಲಿ ವಿದ್ಯಾರ್ಥಿಗಳು, ಪೋಷಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಗುಡೆಕೋಟೆ ಸರ್ವೋದಯ ಕೇಂದ್ರ ವಿದ್ಯಾಲಯ, ದೋಣಿಮಲೈ, ಬೆಳಗಾವಿ ಖಾಸಗಿ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿಯೂ ಕೆಲಸ ಮಾಡಿದ್ದಾರೆ. ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೊಕ್ಕೊ ಆಟದಲ್ಲಿ ನಾರದಮುನಿ ಶಾಲೆಯ ತಂಡ ಪ್ರತಿ ವರ್ಷವೂ ರಾಜ್ಯಮಟ್ಟದಲ್ಲಿ ಸ್ಪರ್ಧಿಸಿ ಗಮನ ಸೆಳೆಯುತ್ತದೆ.

ADVERTISEMENT

ಶಿಕ್ಷಕ ಜನಾರ್ದನ ರೆಡ್ಡಿ ಮಾತನಾಡಿ, ‘ನನಗೆ ಪ್ರಶಸ್ತಿ ಬಂದಿರುವುದು ಜವಾಬ್ದಾರಿಯನ್ನು ಹೆಚ್ಚಿಸಿದೆ. ನಾರದಮುನಿ ದೇವರ ಆಶೀರ್ವಾದ, ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು, ಈಗಿರುವ ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿ ಸಂಪೂರ್ಣ ಸಹಕಾರದಿಂದ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ. ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ, ಶಾಲಾಡಳಿತ ಮಂಡಳಿ, ಗ್ರಾಮಸ್ಥರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ತಿಳಿಸಿದರು.

ಅಧ್ಯಕ್ಷ ಬಸವನಗೌಡ ಮತ್ತು ಕಾರ್ಯದರ್ಶಿ ಎಂ. ನಿತ್ಯಾನಂದಪ್ಪ ಮಾತನಾಡಿ, ‘ಜನಾರ್ದನ ರೆಡ್ಡಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.