ADVERTISEMENT

ದಾವಣಗೆರೆ: ಹೊಸವರ್ಷದ ಕೇಕ್‌ನಲ್ಲಿ ಮಂದಿರ, ಮಸೀದಿ, ಚರ್ಚ್‌

ಸಂಭ್ರಮದಲ್ಲಿ ಮುಳುಗೆದ್ದ ಯುವಜನರು * ಪಟಾಕಿ ಸಿಡಿಸಿ, ಕೇಕ್‌ ಕತ್ತರಿಸಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 6:54 IST
Last Updated 1 ಜನವರಿ 2023, 6:54 IST
ದಾವಣಗೆರೆಯ ‘ಆಹಾರ್‌ 2000’ನಲ್ಲಿ ತಯಾರಿಸಿದ ಕೇಕ್‌ನಲ್ಲಿ ಮಂದಿರ, ಮಸೀದಿ, ಚರ್ಚ್‌ಚಿತ್ರ: ವಿಜಯ್‌ ಜಾಧವ್‌
ದಾವಣಗೆರೆಯ ‘ಆಹಾರ್‌ 2000’ನಲ್ಲಿ ತಯಾರಿಸಿದ ಕೇಕ್‌ನಲ್ಲಿ ಮಂದಿರ, ಮಸೀದಿ, ಚರ್ಚ್‌ಚಿತ್ರ: ವಿಜಯ್‌ ಜಾಧವ್‌   

ದಾವಣಗೆರೆ: ಹೊಸ ವರ್ಷವನ್ನು ಬರಮಾಡಿಕೊಳ್ಳಲು ಎಲ್ಲರಿಗಿಂತ ಮೊದಲು ಬೇಕರಿಗಳು ಸಿದ್ಧವಾದವು. ವಿವಿಧ ಆಕಾರದ, ವಿವಿಧ ವಿನ್ಯಾಸದ, ವಿವಿಧ ರುಚಿಯ ಕೇಕ್‌ಗಳು ಗ್ರಾಹಕರನ್ನು ಸೆಳೆದವು. ವರ್ಷದ ಕೊನೇ ಕ್ಷಣವನ್ನು ಬೀಳ್ಕೊಡಲು, ಹೊಸ ವರ್ಷಕ್ಕೆ ಕಾಲಿಟ್ಟು ಸಂಭ್ರಮಿಸಲು ಹೋಟೆಲ್‌, ರೆಸಾರ್ಟ್‌, ಬಾರ್‌, ರೆಸ್ಟೊರಂಟ್‌ಗಳು ಅವಕಾಶ ಒದಗಿಸಿದವು.

ಎಲ್ಲ ಕಡೆಗಳಲ್ಲಿ ಬೆಳಕಿನ ಚಿತ್ತಾರಗಳು ಕಂಗೊಳಿಸಿದವು. ರಾತ್ರಿ 12 ಆಗುತ್ತಿದ್ದಂತೆ ಪಟಾಕಿಗಳ ಸದ್ದು ಆವರಿಸಿತು. ಬಾನಂಗಳದಲ್ಲಿ ಬಿರುಸು ಬಾಣಗಳು ಸಿಡಿದವು.

ನಗರದ ಆಹಾರ್– 2000 ಬೇಕರಿಯಲ್ಲಿ ಹೊಸವರ್ಷವನ್ನು ಬರ ಮಾಡಿಕೊಳ್ಳಲು ಕೇಕ್‌ನಲ್ಲೇ ಮಂದಿರ‌, ಮಸೀದಿ, ಚರ್ಚ್‌ನ ವಿಶಿಷ್ಟವಾದ ಕೇಕ್‌ಗಳನ್ನು ತಯಾರಿಸಿ ಸಮಾಜಕ್ಕೆ ಭಾವೈಕ್ಯದ ಸಂದೇಶ ರವಾನಿಸಲಾಗಿದೆ. ಈ ಬೇಕರಿಯಲ್ಲಿ 22 ವರ್ಷಗಳಿಂದ ಪ್ರತಿ ಹೊಸವರ್ಷಕ್ಕೆ ವಿಶೇಷ ಕೇಕ್‌ಗಳನ್ನು ತಯಾರಿಸಲಾಗುತ್ತಿದೆ. ಅದರಂತೆ ಈ ವರ್ಷ ಸಹ ಸರ್ವ ಧರ್ಮ ಸಮನ್ವಯ ಸಾರುವ ಉದ್ದೇಶದಿಂದ ನಿರ್ಮಾಣ ಹಂತದ ಅಯೋಧ್ಯೆಯ ಶ್ರೀರಾಮ ಮಂದಿರ, ದೆಹಲಿಯ ಜಾಮೀಯಾ ಮಸೀದಿ, ಉಡುಪಿಯ ಸಂತೆಕಟ್ಟೆ ಚರ್ಚ್‌ಗಳನ್ನು ಕೇಕ್‌ ಮೂಲಕ ತಯಾರಿಸಿರುವುದು ಎಲ್ಲರ ಆಕರ್ಷಣೆಗೆ ಒಳಗಾಗಿದೆ.

ADVERTISEMENT

ಮಂದಿರ, ಮಸೀದಿ, ಚರ್ಚ್‌ ಕೇಕ್‌ಗಳನ್ನು ಮಾಡಲು 150 ಕೆ.ಜಿ. ಸಕ್ಕರೆ ಹಾಗೂ ಜಿಡ್ಡು ಬಳಸಿದ್ದು, ಒಂದೂವರೆ ತಿಂಗಳಲ್ಲಿ ತಯಾರಿಸಲಾಗಿದೆ ಎಂದು ಮಾಲೀಕ ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಅರ್ಧ ಕೆ.ಜಿ.ಯಿಂದ 2 ಕೆ.ಜಿ.ಯವರೆಗೆ ಸಾಮಾನ್ಯ ಕೇಕ್‌, ವಿವಿಧ ಫ್ಲೇವರ್‌ ಕೇಕ್‌, ಕೋಲ್ಡ್‌ ಕೇಕ್‌ಗಳನ್ನು ತಯಾರಿಸಿಡಲಾಗಿದೆ. ಇದಲ್ಲದೇ ಮೊದಲೇ ಆರ್ಡರ್‌ ನೀಡಿದವರಿಗೆ ಅವರು ಹೇಳಿದ ವಿನ್ಯಾಸ ಮತ್ತು ಆಕಾರದಲ್ಲಿ ಮಾಡಿ ಕೊಡಲಾಗುತ್ತಿದೆ. ಶನಿವಾರ ಸಂಜೆವರೆಗೆ ಗ್ರಾಹಕರು ಬೇಕರಿಗಳ ಕಡೆಗೆ ತಲೆ ಹಾಕಿಲ್ಲ. ಸೂರ್ಯ ಮುಳುಗುತ್ತಿದ್ದಂತೆ ಜನರು ಬರಲು ಆರಂಭಿಸಿದ್ದಾರೆ.

‘ಗ್ರಾಹಕರಿಗೆ ಇಷ್ಟವಾಗುವ ರೀತಿಯಲ್ಲಿ ಕೇಕ್‌ಗಳನ್ನು ತಯಾರಿಸಿದ್ದೆವು. ರಾತ್ರಿ 7 ಕಳೆದರೂ ಗ್ರಾಹಕರು ಖರೀದಿಗೆ ಮನಸ್ಸು ಮಾಡಿರಲಿಲ್ಲ. ಇದರಿಂದ ಗಾಬರಿಯಾಗಿತ್ತು. ರಾತ್ರಿ ಆದ ಮೇಲೆ ಜನ ಬರಲು ಆರಂಭಿಸಿದರು’ ಎಂದು ನಿಟುವಳ್ಳಿ ಇಂಡಿಯನ್‌ ಬೇಕರಿ ಮಾಲೀಕ ರವಿ ತಿಳಿಸಿದರು.

ಮಧ್ಯರಾತ್ರಿವರೆಗೆ ಯುವಜನರು ಬೈಕ್‌, ಕಾರ್‌ ಮತ್ತಿತರ ವಾಹನಗಳಲ್ಲಿ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸುತ್ತಾ ಸಂಭ್ರಮಿಸಿದರು. ಹೋಟೆಲ್‌, ಲಾಡ್ಜ್‌, ರೆಸಾರ್ಟ್‌, ಹಾಸ್ಟೆಲ್‌, ಮನೆಗಳಲ್ಲಿ ಹಲವರು ಕೇಕ್‌ ಕತ್ತರಿಸಿದರೆ, ಕೆಲವರು ರಸ್ತೆಯಲ್ಲೇ ಕೇಕ್‌ ಕತ್ತರಿಸಿ ಖುಷಿಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.