ADVERTISEMENT

ಒಮ್ಮೆಲೇ 21 ಪ್ರಕರಣ ಬಂದಾಗ ಆಘಾತವಾಗಿತ್ತು: ದಾವಣಗೆರೆ ಡಿಸಿ ಮಹಾಂತೇಶ ಬೀಳಗಿ

ಕೊರೊನಾ ವಾರಿಯರ್ಸ್ | ಧೃತಿಗೆಡದೇ ಕೆಲಸ ಮಾಡಿ, ತಂಡಕ್ಕೂ ಧೈರ್ಯ ತುಂಬಿದ್ದೆ ಜಿಲ್ಲಾಧಿಕಾರಿ

ಬಾಲಕೃಷ್ಣ ಪಿ.ಎಚ್‌
Published 5 ಜೂನ್ 2020, 10:45 IST
Last Updated 5 ಜೂನ್ 2020, 10:45 IST
   
""
""
""

ದಾವಣಗೆರೆ: ‘ಮೇ ಆರಂಭದಲ್ಲಿ ಒಂದೇ ದಿನ 21 ಪ್ರಕರಣಗಳು ಪತ್ತೆಯಾದಾಗ ಆಘಾತವಾಗಿತ್ತು. ಆದರೆ ಧೃತಿಗೆಟ್ಟಿದೇ ನಾನೂ ಕೆಲಸ ಮಾಡಿ, ನಮ್ಮ ತಂಡಕ್ಕೂ ಧೈರ್ಯ ತುಂಬಿದೆ’.

ಕೊರೊನಾ ವಾರಿಯರ್‌ಗಳಂತೆ ಕೆಲಸ ಮಾಡುತ್ತಿರುವ ಅಧಿಕಾರಿ, ಸಿಬ್ಬಂದಿಯ ತಂಡದ ನಾಯಕನಂತಿರುವ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಕೊರೊನಾ ನಿಯಂತ್ರಣದ ಕಾರ್ಯಗಳನ್ನು ಮಾಡುತ್ತಿರುವಾಗ ಉಂಟಾದ ಆಘಾತದ ಬಗ್ಗೆ ‘ಪ್ರಜಾವಾಣಿ’ಗೆ ವಿವರಿಸಿದರು.

ಮಹಾಂತೇಶ ಬೀಳಗಿ

ವಿದೇಶದಿಂದ ಬಂದು ಸೋಂಕು ಕಾಣಿಸಿಕೊಂಡ ಮೂವರು ಗುಣಮುಖರಾಗಿ ಹೋದಮೇಲೆ ಒಂದು ತಿಂಗಳು ಕೊರೊನಾ ಇರಲಿಲ್ಲ. ಆನಂತರ ಎರಡು ಪ್ರಕರಣಗಳು ಪತ್ತೆಯಾದಾಗ ನಮ್ಮ ಸರ್ವೇಕ್ಷಣಾ ತಂಡ ಪರಿಣಾಮಕಾರಿಯಾಗಿ ಕೆಲಸ ಮಾಡಿತು. ಅವರ ನೇರ, ದ್ವಿತೀಯ ಸಂಪರ್ಕಗಳನ್ನು ಹುಡುಕಿ ಹುಡುಕಿ ತಂದು ಐಸೊಲೇಶನ್‌ ಮಾಡಿದರು. ಎಲ್ಲರ ಸ್ವ್ಯಾಬ್‌ ಅನ್ನು ಪರೀಕ್ಷೆಗೆ ಕಳುಹಿಸಲಾಯಿತು. ಇದರಿಂದ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡವು. 70ರಿಂದ 80ರಷ್ಟು ಈ ಎರಡೇ ಪ್ರಕರಣಗಳ ಕೊಂಡಿಗಳಾಗಿದ್ದರಿಂದ ನಾವು ಭಯಪಡುವ ಅಗತ್ಯ ಬೀಳಲಿಲ್ಲ ಎಂದು ವಿವರಿಸಿದರು.

ADVERTISEMENT

‘ಮಾರ್ಚ್‌ 4ರಿಂದ ಕೊರೊನಾ ವಿರುದ್ಧದ ನಮ್ಮ ಹೋರಾಟ ಆರಂಭಗೊಂಡಿದೆ. ಡಿ ಗ್ರೂಪ್‌ ನೌಕರರಿಂದ ಜಿಲ್ಲಾ ಮಟ್ಟದ ಅಧಿಕಾರಿಗಳ ವರೆಗೆ ನಮ್ಮ ತಂಡ ಧೈರ್ಯದಿಂದ, ಉತ್ಸಾಹದಿಂದ ಕೆಲಸ ಮಾಡಿದೆ. ನಾನು ಬಾಸ್ ಆಗಿ ಅಲ್ಲ, ಅವರ ಸ್ನೇಹಿತನಾಗಿ, ಜತೆಗಾರನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಸೋಂಕು ಪತ್ತೆಯಾದ ಬಳಿಕ ಕೆಲವು ಕಡೆ ಸೀಲ್‌ಡೌನ್‌ ಮಾಡಲು ವಿರೋಧಿಸಿದರು. ಆಗ ಸ್ವತಃ ನಾನೇ ಸ್ಥಳಕ್ಕೆ ಹೋದೆ. ಸೀಲ್‌ಡೌನ್‌ ಮಾಡದೇ ಇದ್ದರೆ ಬೇರೆ ಪ್ರದೇಶಕ್ಕೆ ಹರಡಿದರೆ ಉಂಟಾಗುವ ಅಪಾಯವನ್ನು ಜನಸಾಮಾನ್ಯರ ಭಾಷೆಯಲ್ಲೇ ಅವರಿಗೆ ಮನವರಿಕೆ ಮಾಡಿದೆ. ಆನಂತರ ಜನ ಒಪ್ಪಿದರು’ ಎಂದು ತಿಳಿಸಿದರು.

ಸದ್ಯದ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಮುಂದೆ ಮತ್ತೆ ಸ್ಫೋಟ ಆಗುತ್ತದೆಯೇ ಇಲ್ಲವೇ ಎಂಬುದನ್ನು ಊಹೆ ಮಾಡಲು ಆಗುವುದಿಲ್ಲ. ಆದರೂ ಸ್ಫೋಟವಾಗದು ಎಂಬ ನಂಬಿಕೆ ಇದೆ. ಒಮ್ಮೆಲೆ 500–600 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡರೂ ನಿರ್ವಹಿಸುವಷ್ಟು ಸಿದ್ಧತೆಯನ್ನು ನಮ್ಮ ಅಧಿಕಾರಿಗಳು, ಆರೋಗ್ಯ ಇಲಾಖೆಯವರು, ಪೊಲೀಸರು, ಎಲ್ಲ ಸಿಬ್ಬಂದಿ ಮಾಡಿಕೊಂಡಿದ್ದಾರೆ ಎಂದರು.

‘ನನಗೇ ಸೋಂಕು ಬರುತ್ತದೆ ಅಂದರು’

‘ಕಂಟೈನ್‌ಮೆಂಟ್‌ ವಲಯಗಳಲ್ಲಿ ಸುತ್ತಾಡಿದ್ದೆ. ಅದಕ್ಕಾಗಿ ನನಗೂ ಕೊರೊನಾ ಸೋಂಕು ಬರುತ್ತದೆ ಎಂದು ಹಲವರು ನನಗೆ ತಿಳಿಸಿದ್ದರು. ಆದರೆ ನಾನು ಎಲ್ಲ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಂಡಿದ್ದೆ. ಮಾಸ್ಕ್‌, ಗ್ಲೌಸ್‌, ಫೇಸ್‌ಶೀಲ್ಡ್‌ ಬಳಸಿದ್ದೆ. ಕಂಟೈನ್‌ಮೆಂಟ್‌ ವಲಯಕ್ಕೆ ಹೋಗುವಾಗ ಹಾಕಿದ್ದ ಶೂ ಅನ್ನು ತೊಳೆದು ಒಂದು ವಾರ ಹೊರಗಿಟ್ಟು ನಂತರ ಬಳಸುತ್ತಿದ್ದೆ’ ಎಂದು ಸ್ವರಕ್ಷಣೆಯನ್ನು ವಿವರಿಸಿದರು.

‘ನಾನು ನೆಪ ಮಾತ್ರ’

‘ನಾನು ನೆಪ ಮಾತ್ರ. ಸ್ವಚ್ಛತಾ ಸಿಬ್ಬಂದಿ, ಡಿ ಗ್ರೂಪ್‌ ನೌಕರರು, ಆಶಾ ಕಾರ್ಯಕರ್ತೆಯರು, ಎರಡು ಮೆಡಿಕಲ್‌ ಕಾಲೇಜಿನ ವೈದ್ಯರು, ವಿದ್ಯಾರ್ಥಿಗಳು, ಸಿಬ್ಬಂದಿ, ನಮ್ಮ ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿ, ಎಸ್‌ಪಿ, ಸಿಇಒ, ಪಾಲಿಕೆ ಆಯುಕ್ತರು, ಕೋವಿಡ್‌ ನೋಡಲ್‌ ಅಧಿಕಾರಿ, ಸರ್ವಲೆನ್ಸ್‌ ಅಧಿಕಾರಿ ಎಲ್ಲ ಇನ್‌ಸಿಡೆಂಟ್‌ ಕಮಾಂಡರ್‌ಗಳು, ಪೊಲೀಸರು, ಆಸ್ಪತ್ರೆಯಲ್ಲಿ ಕೆಲಸ ಮಾಡುವವರು, ಮನೆ ಮನೆಗೆ ತೆರಳಿ ಕೆಲಸ ಮಾಡುವವರು ಎಲ್ಲರೂ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರಿಗೂ ಹೃದಯಂತರಾಳದಿಂದ ಅಭಿನಂದನೆ ಸಲ್ಲಿಸುವೆ’ ಎಂದು ಎಲ್ಲರ ಕೆಲಸವನ್ನು ಜಿಲ್ಲಾಧಿಕಾರಿ ನೆನಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.