ADVERTISEMENT

ಕಪ್ಪು ಶಿಲೀಂಧ್ರದ ಔಷಧವೇ ಪೂರೈಕೆಯಾಗುತ್ತಿಲ್ಲ: ಎಸ್‌.ಆರ್‌. ‍ಪಾಟೀಲ

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಆರೋಪ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 2:52 IST
Last Updated 6 ಜುಲೈ 2021, 2:52 IST
   

ದಾವಣಗೆರೆ: ಜಿಲ್ಲೆಯಲ್ಲಿ ನೂರಕ್ಕೂ ಅಧಿಕ ಕಪ್ಪು ಶಿಲೀಂಧ್ರ ಪ್ರಕರಣಗಳಿವೆ. ಕಪ್ಪು ಶಿಲೀಂಧ್ರಕ್ಕೆ ಲಿಸೊಸೊಮಲ್‌ ಆ್ಯಂಫೋತೆರಿಸಿನ್‌–ಬಿ ಪ್ರಮುಖ ಔಷಧ. ಅದನ್ನು ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ‍ಪಾಟೀಲ ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊರೊನಾ 2ನೇ ಅಲೆಯನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಮೊದಲನೇ ಅಲೆಯಿಂದ ಯಾವುದೇ ಪಾಠ ಕಲಿಯಲಿಲ್ಲ. ಎರಡನೇ ಅಲೆ ಬರಲಿದೆ ಎಂದು ಕಳೆದ ವರ್ಷ ನವೆಂಬರ್‌ನಲ್ಲಿಯೇ ತಜ್ಞರು ಎಚ್ಚರಿಸಿದ್ದರು. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ಎಚ್ಚೆತ್ತುಕೊಳ್ಳಲಿಲ್ಲ. ಪಂಚರಾಜ್ಯ ಚುನಾವಣೆ, ರಾಜ್ಯದಲ್ಲಿ ಉಪ ಚುನಾವಣೆ ಎಲ್ಲವೂ ಎರಡನೇ ಅಲೆ ವೇಗವಾಗಿ ಹರಡಲು ಕಾರಣವಾಯಿತು. ಜನರ ಸಾವು ನೋವು ಹೆಚ್ಚಿಸಿತು, ಇದರ ಜತೆಗೆ ಕುಂಭಮೇಳದಿಂದಲೂ ಸೋಂಕು ಹರಡಿತು’ ಎಂದು ಹೇಳಿದರು.

ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ ಹೆಚ್ಚಿಸುವುದೂ ಒಳಗೊಂಡಂತೆ ಸೌಲಭ್ಯ ಹೆಚ್ಚಿಸಲಿಲ್ಲ. ಆಮ್ಲಜನಕ ಪೂರೈಕೆ ಇಲ್ಲದ ಕಾರಣಕ್ಕೇ ಹಲವು ಮಂದಿ ಜೀವ ಕಳೆದುಕೊಂಡರು. ರಾಜ್ಯಕ್ಕೆ ಆಮ್ಲಜನಕ ಒದಗಿಸುವಂತೆ ಹೈಕೋರ್ಟ್‌ ಹೇಳಿದ ಮೇಲೆ ಪೂರೈಕೆಯಾಯಿತು. ವಿಕೋಪಗಳಲ್ಲಿ ಜೀವ ಕಳೆದುಕೊಂಡಾಗ ಪರಿಹಾರ ನೀಡಬೇಕು ಎಂಬುದು ನಿಯಮದಲ್ಲಿದೆ. ಕೊರೊನಾವನ್ನು ವಿಕೋಪ ಎಂದು ಘೋಷಿಸಲಾಗಿದೆ. ಆದರೆ ಕೊರೊನಾದಿಂದ ಮೃತಪಟ್ಟವರಿಗೆ ಕೇಂದ್ರ ಸರ್ಕಾರ ಇನ್ನೂ ಪರಿಹಾರ ಘೋಷಿಸಿಲ್ಲ. ಪರಿಹಾರ ನೀಡುವಂತೆ ಈಗ ಸುಪ್ರೀಂ ಕೋರ್ಟ್‌ ಸೂಚಿಸಿದೆ ಎಂದರು.

ADVERTISEMENT

ಕೊರೊನಾದಿಂದ ಮೃತಪಟ್ಟವರ ಪ್ರಮಾಣಕ್ಕೂ ಸರ್ಕಾರ ನೀಡುವ ಲೆಕ್ಕಕ್ಕೂ ಅಜಗಜ ವ್ಯತ್ಯಾಸ ಇದೆ. ಮರಣಗಳನ್ನು ತಾಳೆ ಮಾಡಿ ಸರಿಪಡಿಸಬೇಕು. ರಾಜ್ಯ ಸರ್ಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್‌ ಯಾರಿಗೂ ತಲುಪಿಲ್ಲ. ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿ ಲಾಕ್‌ಡೌನ್‌ ಹೇರಿದ್ದರಿಂದ ವ್ಯಾಪಾರ, ಉದ್ಯೋಗವಿಲ್ಲದೇ ಬದುಕುವುದೇ ಕಷ್ಟದ ಸ್ಥಿತಿ ನಿರ್ಮಾಣವಾಯಿತು ಎಂದು ವಿಶ್ಲೇಷಿಸಿದರು.

ಕಾಂಗ್ರೆಸ್ ಮುಖಂಡರಾದ ಎ.ನಾಗರಾಜ್‌, ನಾಗೇಂದ್ರಪ್ಪ, ನಿಂಗಪ್ಪ, ಕೆ.ಚಮನ್‌ಸಾಬ್‌, ಮಂಜುನಾಥ ಗಡಿಗುಡಾಳ್‌, ಅಲಿ ರಹಮತ್‌, ಎಲ್‌.ಎಚ್‌. ಸಾಗರ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.