ADVERTISEMENT

ದಾವಣಗೆರೆ | ಅಂತರ್ಜಾತಿ ಪ್ರೇಮ ಪ್ರಕರಣ: ಹುಡುಗನ ಸಂಬಂಧಿಕರ ಮನೆ ಮೇಲೆ ದಾಳಿ

ಗ್ರಾಮ ತೊರೆದ ಹುಡುಗನ ಕಡೆಯವರು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 3:31 IST
Last Updated 1 ಮಾರ್ಚ್ 2021, 3:31 IST
ಹರಪನಹಳ್ಳಿ ತಾಲ್ಲೂಕಿನ ಕನ್ನನಾಯಕನಹಳ್ಳಿಯಲ್ಲಿಯ ದುರುಗೇಶ್‌ ಮನೆಗೆ ನುಗ್ಗಿ ವಸ್ತುಗಳನ್ನು ಧ್ವಂಸ ಮಾಡಿರುವುದು
ಹರಪನಹಳ್ಳಿ ತಾಲ್ಲೂಕಿನ ಕನ್ನನಾಯಕನಹಳ್ಳಿಯಲ್ಲಿಯ ದುರುಗೇಶ್‌ ಮನೆಗೆ ನುಗ್ಗಿ ವಸ್ತುಗಳನ್ನು ಧ್ವಂಸ ಮಾಡಿರುವುದು   

ಹರಪನಹಳ್ಳಿ: ಅನ್ಯಜಾತಿಯ ಪ್ರೇಮಿಗಳು ಗ್ರಾಮದಿಂದ ಓಡಿಹೋಗಿದ್ದಕ್ಕೆ ಆಕ್ರೋಶಗೊಂಡ ಹುಡುಗಿ ಕಡೆಯವರು ಹುಡುಗನ ಸಂಬಂಧಿಕರ ಮನೆಗಳಿಗೆ ನುಗ್ಗಿ ಹಲ್ಲೆ ಮಾಡಿ, ಮನೆಯಲ್ಲಿದ್ದ ನಗದು, ಚಿನ್ನಾಭರಣ ದೋಚಿದ್ದಾರೆ. ಇದರಿಂದ ಭಯಗೊಂಡ ಹುಡುಗನ ಪೋಷಕರು ಹಾಗೂ ಸಂಬಂಧಿಕರು ಗ್ರಾಮ ತೊರೆದಿದ್ದಾರೆ.

ತಾಲ್ಲೂಕಿನ ಕನ್ನನಾಯಕನಹಳ್ಳಿಯ ದುರುಗೇಶ್ ಮತ್ತು ಕವಿತಾ ಪರಸ್ಪರ ಪ್ರೀತಿಸಿದ್ದು, ಫೆ.26ರಂದು ಪರಾರಿಯಾಗಿದ್ದರು. ಇದರಿಂದ ಸಿಟ್ಟಿಗೆದ್ದ ಕವಿತಾ ಮನೆಯವರು ಹುಡುಗನ ಜಾತಿಗೆ ಸೇರಿದ ಐದು ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾರೆ. ಹುಡುಗನ ಕಡೆಯ ನಾಲ್ವರು ಗಾಯಗೊಂಡಿದ್ದಾರೆ. ಜೀವ ರಕ್ಷಣೆ ಕೋರಿ ದುರುಗೇಶ್ ಕಡೆಯವರು ಪೊಲೀಸರ ಮೊರೆ ಹೋಗಿದ್ದಾರೆ. 13 ಜನರ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ.

‘ಹುಡುಗಿ ಕಡೆಯವರು 5 ಮನೆಗಳಿಗೆ ನುಗ್ಗಿ ಮನೆ ಬಾಗಿಲು, ಕಿಟಕಿ ಮುರಿದ್ದಾರೆ. ಮೆಕ್ಕೆಜೋಳ ಮಾರಿ ಮನೆಯಲ್ಲಿ ತಂದಿಟ್ಟಿದ್ದ ₹ 2.50 ಲಕ್ಷ ನಗದು, 6 ಗ್ರಾಂ ಬಂಗಾರದ ಆಭರಣ, 16 ಕ್ವಿಂಟಲ್ ಜೋಳ, ಕುರಿ, ಎಮ್ಮೆಗಳನ್ನು ದೋಚಿ ಪರಾರಿಯಾಗಿದ್ದಾರೆ’ ಎಂದು ದುರುಗೇಶ್‌ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.

ADVERTISEMENT

‘15ಕ್ಕೂ ಅಧಿಕ ಜನರ ಗುಂಪು ನುಗ್ಗಿ, ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದೆ. ಮನೆಯವರು ಜೀವ ರಕ್ಷಣೆಗೆ ಗ್ರಾಮವನ್ನು ತೊರೆದಿದ್ದಾರೆ’ ಎಂದು ಗ್ರಾಮದ ಮುಖಂಡರಾದ ನೀಲಗುಂದ ಮಹಾಂತೇಶ್, ಬೆಂಡಿಗೇರೆ ಗುರುಸಿದ್ದಪ್ಪ, ದುರುಗೇಶ್ ಮಜ್ಜಿಗೇರಿ, ಅಲಮರಸೀಕೆರೆ ಹನುಮಂತಪ್ಪ ಹಾಲೇಶ್ ತಿಳಿಸಿದರು.

ನಾಲ್ಕು ತಿಂಗಳ ಹಿಂದೆ ದುರುಗೇಶ್ ಮತ್ತು ಕವಿತಾ ಮನೆಬಿಟ್ಟು ಓಡಿ ಹೋಗಿದ್ದರು. ಗ್ರಾಮದ ಮುಖಂಡರು ಎರಡು ಮನೆಯವರಿಗೂ ಬುದ್ಧಿಮಾತು ಹೇಳಿ, ಇಬ್ಬರನ್ನೂ ವಾಪಸ್‌ ಕರೆತಂದಿದ್ದರು. ಮತ್ತೆ ಪ್ರೇಮಿಗಳು ಮನೆ ಬಿಟ್ಟು ಹೋಗಿದ್ದರಿಂದ ಘಟನೆ ನಡೆದಿದೆ ಎಂದು ತಿಳಿಸಿದರು.

‘ರಕ್ಷಣೆ ನೀಡಬೇಕು, ಹಲ್ಲೆ ಮಾಡಿ, ಹಣ, ಒಡವೆ ದೋಚಿಕೊಂಡು ಪರಾರಿಯಾಗಿರುವವರನ್ನು ಬಂಧಿಸಬೇಕು. ಇಲ್ಲದಿದ್ದರೆ ಠಾಣೆ ಎದುರು ಪ್ರತಿಭಟನೆ ನಡೆಸುತ್ತೇವೆ’ ಎಂದು ಬೋವಿ ಸಮಾಜದ ಮುಖಂಡರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.