ADVERTISEMENT

ಪ್ರಭಾರ ಐಜಿಪಿ ಆಗಿ ಅಧಿಕಾರ ಸ್ವೀಕರಿಸಿದ ಎಸ್. ರವಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 10:42 IST
Last Updated 18 ಫೆಬ್ರುವರಿ 2020, 10:42 IST
ರವಿ ಎಸ್.
ರವಿ ಎಸ್.   

ದಾವಣಗೆರೆ: ಸೈಬರ್‌ ಅಪರಾಧವು ಜಗತ್ತಿನ ಸಮಸ್ಯೆಯಾಗಿದೆ. ಎಲ್ಲೋ ಕುಳಿತು ವಂಚನೆ ಮಾಡುವುದನ್ನು ನಿಯಂತ್ರಿಸುವುದು ದೊಡ್ಡ ಸವಾಲು ಎಂದು ಪ್ರಭಾರ ಐಜಿಪಿ ರವಿ ಎಸ್‌. ಹೇಳಿದರು.

ಪೂರ್ವ ವಲಯದ ಪ್ರಭಾರ ಐಜಿಪಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದರು.

ಜಾರ್ಖಂಡ್‌, ನೈಜೀರಿಯಾ ಹೀಗೆ ಎಲ್ಲೋ ಒಂದು ಮೂಲೆಯಲ್ಲಿ ಕುಳಿತು ಆನ್‌ಲೈನ್‌ ಮೂಲಕ ವಂಚನೆ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಒಂದೇ ದಿನ 300 ಪ್ರಕರಣಗಳು ದಾಖಲಾಗಿದ್ದವು ಎಂದು ಪ್ರಕರಣದ ಗಂಭೀರತೆಯನ್ನು ವಿವರಿಸಿದರು.

ADVERTISEMENT

‘ದಾವಣಗೆರೆ ಶಾಂತಿಪ್ರಿಯ ವಲಯವಾಗಿದ್ದು, ಈ ಶಾಂತಿ ಮತ್ತು ಸುವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ಕಾಪಾಡಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು. ದೇಶದಾದ್ಯಂತ ಇರಾನಿ ಗ್ಯಾಂಗ್ ಹಾವಳಿ ಹೆಚ್ಚಾಗಿದೆ. ಅವರ ಕ್ಯಾಂಪ್‌ಗಳು ಎಲ್ಲೆಡೆ ಹರಡಿಕೊಂಡಿವೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಸಮಸ್ಯೆಗಳ ಮಾಹಿತಿ ಪಡೆದು ಕಾರ್ಯಪ್ರವೃತ್ತನಾಗುತ್ತೇನೆ’ ಎಂದು ಹೇಳಿದರು.

ಜೀವರಕ್ಷಕ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ. ಈ ಬಗ್ಗೆ ಜನರೇ ಎಚ್ಚೆತ್ತುಕೊಳ್ಳಬೇಕು. ಆಗ ನಿಜವಾದ ಬದಲಾವಣೆ ಸಾಧ್ಯ. ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸಾರ್ವಜನಿಕರ ಸಹಕಾರ ಮುಖ್ಯ. ಸಂಚಾರಿ ನಿಯಮಗಳನ್ನು ಎಲ್ಲರೂ ಸರಿಯಾಗಿ ಪಾಲಿಸಿದಾಗ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದರು.

ಡ್ರಗ್ಸ್ ಹಾವಳಿ ನಿರ್ಮೂಲನೆ ಹಾಗೂ ಸೈಬರ್‌ಕ್ರೈಂ ಕಡಿವಾಣಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಹಿನ್ನೆಲೆ: 1998ನೇ ಸಾಲಿನ ಐಪಿಎಸ್ ಬ್ಯಾಚ್‌ನ ರವಿ ಅವರು ಕಲ್ಬುರ್ಗಿಯಲ್ಲಿ ಪ್ರೊಬೇಷನರಿ ಸೇವೆ ಮುಗಿಸಿ ಯಾದಗಿರಿಯಲ್ಲಿ ಎಎಸ್‌ಪಿಯಾಗಿದ್ದರು. ಕೊಪ್ಪಳ, ಕಾರವಾರ, ಕಲಬುರ್ಗಿ, ಬೀದರ್‌ಗಳಲ್ಲಿ ಎಸ್‌ಪಿಯಾಗಿ, ಬೆಂಗಳೂರು ದಕ್ಷಿಣ ಡಿಸಿಪಿ, ಕಲಬುರ್ಗಿ ಪಿಟಿಸಿ, ಬೆಂಗಳೂರು ಪ್ರಿಸನ್ ಡಿಐಜಿ, ಜಾಯಿಂಟ್ ಕಮಿಷನರ್ ಆಫ್ ಪೊಲೀಸ್ ಇನ್ ಲಾ ಅಂಡ್ ಆರ್ಡರ್ ವೆಸ್ಟ್ ಬೆಂಗಳೂರು ಸಿಟಿ, ಐಎಸ್‌ಡಿ ಐ.ಜಿ ಟ್ರೈನಿಂಗ್‌ನಲ್ಲಿ ಮುಖ್ಯಸ್ಥರಾಗಿ ಹೀಗೆ ವಿವಿಧ ಹುದ್ದೆಯನ್ನು ನಿರ್ವಹಿಸಿದ್ದರು. ಪ್ರಸ್ತುತ ಆಂತರಿಕ ಭದ್ರತಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜೊತೆಗೆ ಹೆಚ್ಚುವರಿಯಾಗಿ ಪೂರ್ವವಲಯದ ಐಜಿಪಿಯಾಗಿ ಪ್ರಭಾರ ವಹಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.