ADVERTISEMENT

ನಡೆದಂತೆ ನುಡಿದ ಆತ್ಮಸಾಕ್ಷಿಯೇ ವಚನ: ಡಾ. ಉಷಾ

ಶರಣ ಸಾಹಿತ್ಯ, ಸಂಸ್ಕೃತಿ, ಆಚಾರ, ವಿಚಾರ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 14:01 IST
Last Updated 28 ಜನವರಿ 2020, 14:01 IST
ದಾವಣಗೆರೆ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಲಾಯಿತು
ದಾವಣಗೆರೆ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಲಾಯಿತು   

ದಾವಣಗೆರೆ: ನಡೆ ಹೇಗಿದ್ದರೂ ನುಡಿ ಕಲಾತ್ಮಕವಾಗಿದ್ದರೆ ಅದರನ್ನು ರಚನೆ ಎನ್ನುತ್ತಾರೆ. ನಡೆದಂತೆ ನುಡಿದ ಆತ್ಮಸಾಕ್ಷಿಯೇ ವಚನ ಎಂದು ಜೆಜೆಎಂ ಮೆಡಿಕಲ್‌ ಕಾಲೇಜಿನ ಮೈಕ್ರೋಬಯಾಲಜಿ ಪ್ರೊಫೆಸರ್‌ ಡಾ. ಉಷಾ ಎಂ.ಜಿ. ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಮಂಗಳವಾರ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಶರಣರು, ಶರಣ ಸಾಹಿತ್ಯ, ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ದತ್ತಿ ಉಪನ್ಯಾಸದಲ್ಲಿ ಆವರು ಮಾತನಾಡಿದರು.

ಅರಸರ ಅರಮನೆಯಲ್ಲಿ ಕುಳಿತು ವಿದ್ವಜ್ಜನರು ರಚಿಸಿದ ಸಾಹಿತ್ಯ ಇದಲ್ಲ. ದೈಹಿಕ ಶ್ರಮದ ಸಾಹಿತ್ಯ ಇದು. ಹಾಗಾಗಿಯೇ ರಾಜನಷ್ಟೇ ಪ್ರಜೆಯೂ ಸಮಾನ, ಪುರುಷನಷ್ಟೇ ಸ್ತ್ರೀಯೂ ಸಮಾನ ಎಂಬುದನ್ನು ವಚನಗಳಿಗೆ ಸಾರಲು ಸಾಧ್ಯವಾಯಿತು. ನೇರ ಮತ್ತು ಸರಳ ಪದಗಳಲ್ಲಿ ವಚನ ರಚಿಸಲಾಗಿದೆ ಎಂದರು.

ADVERTISEMENT

ಭಾರತದಲ್ಲಿ ಮಾತೃಪ್ರಧಾನ ಪದ್ಧತಿಯ ದ್ರಾವಿಡರು ಇದ್ದರು. ಪಿತೃ ಪ್ರಧಾನ ಪದ್ಧತಿಯ ಆರ್ಯರ ಆಕ್ರಮಣವಾದ ಮೇಲೆ ಮಹಿಳೆಯನ್ನು ಮನೆಗೆ ಸೀಮಿತಗೊಳಿಸಲಾಯಿತು. ಅಧ್ಯಾತ್ಮ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ ರಂಗದಿಂದ ಆಕೆಯನ್ನು ಹೊರಗಿಡಲಾಯಿತು. ಮಾತೃಪ್ರಧಾನ ಮತ್ತು ಪಿತೃಪ್ರಧಾನ ಪದ್ಧತಿಗಳೆರಡನ್ನೂ ಬಿಟ್ಟು ಸ್ತ್ರೀ, ಪುರುಷ ಇಬ್ಬರೂ ಸಮಾನ ಎಂಬ ಸಂಸ್ಕೃತಿಯೇ ಶರಣಸಂಸ್ಕೃತಿಯಾಯಿತು. 33 ಶರಣೆಯರೂ ವಚನ ರಚಿಸಲು ಅವಕಾಶ ಸಿಕ್ಕಿರುವುದು ದೊಡ್ಡ ಕ್ರಾಂತಿ ಎಂದು ವಿವರಿಸಿದರು.

ಆತ್ಮಕ್ಕೆ ಸ್ತ್ರೀ, ಪುರುಷ ಎಂಬ ಭೇದವಿಲ್ಲ. ಹೆಣ್ಣು, ಹೊನ್ನು, ಮಣ್ಣು ಮಾಯೆಯಲ್ಲ ಮನದ ಮುಂದಣ ಆಸೆಯೇ ಮಾಯೆ. ಜ್ಞಾನಕ್ಕೂ ಲಿಂಗಭೇದವಿಲ್ಲ ಮುಂತಾದ ಸತ್ಯಗಳನ್ನು ವಚನಗಳಲ್ಲಿ ಹೇಳಲಾಗಿದೆ. ಮುಟ್ಟು ಮೈಲಿಗೆಯಲ್ಲ. ಮುಟ್ಟಾದ ಮಹಿಳೆಯೂ ಅಧ್ಯಾತ್ಮ ಸಾಧನೆ ಮಾಡಬಹುದು. ಸನ್ಯಾಸತ್ವ ಶ್ರೇಷ್ಠ ಎಂಬುದು ಸರಿಯಲ್ಲ. ದಾಂಪತ್ಯ ಮಾಡಿಕೊಂಡೇ ಸತ್ಯ ಶುದ್ಧ ಕಾಯಕ, ದಾಸೋಹಗಳ ಜತೆಗೆ ಅಧ್ಯಾತ್ಮ ಸಾಧನೆ ಮಾಡಬಹುದು ಎಂಬುದನ್ನು ಶರಣರು ತೋರಿಸಿದರು ಎಂದು ತಿಳಿಸಿದರು.

ಎಆರ್‌ಜಿ ಕಾಲೇಜು ಪ್ರಾಧ್ಯಾಪಕ ಮಲ್ಲಿಕಾರ್ಜುನ್‌ ಆರ್‌. ಹಲಸಂಗಿ ಉಪನ್ಯಾಸ ನೀಡಿ, ‘ಭಾರತದ ಮೇಲೆ ಶೋಷಕ ಪ್ರವೃತ್ತಿಯ ಸಾಹಸಿಗಳು ಬಂದು ಯಜಮಾನ್ಯ ಸಾಧಿಸಿದ್ದರಿಂದ ಇಲ್ಲಿನ ಮಾನವೀಯ ಸಮಾಜಕ್ಕೆ ತೊಂದರೆ ಉಂಟಾಯಿತು. ಶೇ 3ರಷ್ಟು ಇರುವ ವೈದಿಕರು ಶೇ 10ರಷ್ಟಿರುವ ಆಳುವ ವರ್ಗದ ನೆರವು ಪಡೆದು ಶೇ 85 ಜನರ ಮೇಲೆ ಹಿಡಿತ ಸಾಧಿಸಿದರು. ಹಾಗಾಗಿ ಇವತ್ತಿಗೂ ಮಾನವೀಯ ನಾಗರಿಕ ಸಮಾಜ ದೇಶದಲ್ಲಿ ಕಟ್ಟಲು ಸಾಧ್ಯವಾಗಿಲ್ಲ’ ಎಂದರು.

ಜಾತಿ, ಮತ, ಲಿಂಗ, ಪ್ರದೇಶ, ಭಾಷೆಗಳ ಹೆಸರಲ್ಲಿ ತಾರತಮ್ಯ ಇರುವ ಯಾವ ಸಮಾಜವೂ ನಾಗರಿಕ ಸಮಾಜವಾಗದು. ಇದನ್ನು ತೊಡೆದು ಹಾಕಿ ನಾಗರಿಕ ಸಮಾಜದ ಸ್ಥಾಪನಗೆ ಯತ್ನಿಸಿದವರನ್ನೆಲ್ಲ ಮಟ್ಟ ಹಾಕಲಾಗಿದೆ. ಮಾನವೀಯ ಸಮಾಜವನ್ನು ಸ್ಥಾಪಿಸಲು ಪ್ರಯತ್ನಿಸಿದ ಬುದ್ಧ, ಬಸವಾದಿ ಶರಣರ ಸಹಿತ ಯಾರನ್ನೂ ಬಿಟ್ಟಿಲ್ಲ. ಹೆದರಿಸಿ, ಕೀಳು ಅಭಿಪ್ರಾಯ ಹುಟ್ಟಿಸಿ, ಕೊಂದು ಈ ಯತ್ನವನ್ನು ತಡೆಯಲಾಗಿದೆ ಎಂದು ಹೇಳಿದರು.

ಕಾಲೇಜು ಪ್ರಾಂಶುಪಾಲ ಡಾ. ದಾದಾಪೀರ್‌ ನವಿಲೇಹಾಳ್‌ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಚಿಕ್ಕೋಳ್‌ ಈಶ್ವರಪ್ಪ, ಪ್ರಾಧ್ಯಾಪಕರಾದ ಡಾ. ಕಾವ್ಯಶ್ರೀ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.