ADVERTISEMENT

ಗೊಂದಲ ಸೃಷ್ಟಿಸಿದ ಚಿಕಿತ್ಸೆಗೆ ಬಂದ ರೋಗಿ ಸಾವು

​ಪ್ರಜಾವಾಣಿ ವಾರ್ತೆ
Published 11 ಮೇ 2020, 15:48 IST
Last Updated 11 ಮೇ 2020, 15:48 IST
ಹರಿಹರದ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್‍ ಕೇಂದ್ರದಲ್ಲಿ ಸೋಮವಾರ ಚಿಕಿತ್ಸೆ ಪಡೆಯಲು ಬಂದ ರೋಗಿ ಮೃತಪಟ್ಟ ಕಾರಣ ಶಾಸಕ ಎಸ್‍. ರಾಮಪ್ಪ ಭೇಟಿ ನೀಡಿದರು
ಹರಿಹರದ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್‍ ಕೇಂದ್ರದಲ್ಲಿ ಸೋಮವಾರ ಚಿಕಿತ್ಸೆ ಪಡೆಯಲು ಬಂದ ರೋಗಿ ಮೃತಪಟ್ಟ ಕಾರಣ ಶಾಸಕ ಎಸ್‍. ರಾಮಪ್ಪ ಭೇಟಿ ನೀಡಿದರು   

ಹರಿಹರ:ನಗರದ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್‍ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲು ಬಂದ ರೋಗಿ ಚಿಕಿತ್ಸೆ ಸಂದರ್ಭದಲ್ಲಿ ಮೃತಪಟ್ಟ ಕಾರಣ ಆಸ್ಪತ್ರೆ ಆವರಣದಲ್ಲಿ ಸೋಮವಾರ ಮಧ‍್ಯಾಹ್ನ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ತಾಲ್ಲೂಕಿನ ಭಾನುವಳ್ಳಿ ಗ್ರಾಮದ ಎಚ್. ಕನ್ನಪ್ಪ (58) ಮೃತ ಪಟ್ಟವರು. ಅವರು ಆರು ತಿಂಗಳಿಂದ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸುತ್ತಿದ್ದರು. ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ರವರೆಗೆ ಡಯಾಲಿಸಿಸ್ ಪ್ರಕ್ರಿಯೆ ನಡೆದಿತ್ತು. ಬಳಿಕ ಮೃತಪಟ್ಟಿದ್ದಾರೆ ಎನ್ನಲಾಗಿದೆ.

‘6 ತಿಂಗಳಿಂದ ತಂದೆಯವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೇಂದ್ರದಲ್ಲಿ ಸಿಬ್ಬಂದಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಯಾಲಿಸಿಸ್ ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯವಾಗಿದ್ದು, ತಂದೆ ಸಾವಿಗೆ ಕಾರಣ’ ಎಂದು ಕನ್ನಪ್ಪ ಅವರ ಪುತ್ರ ಹರೀಶ್ ಆರೋಪಿಸಿದರು.

ADVERTISEMENT

‘ರೋಗಿಯ ಡಯಾಲಿಸಿಸ್‍ ಪ್ರಕ್ರಿಯೆ ಸಂಪೂರ್ಣವಾಗಿತ್ತು. ನಂತರ, ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಪರೀಕ್ಷೆ ನಡೆಸುತ್ತಿರುವಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಡಯಾಲಿಸಿಸ್‍ ಯಂತ್ರಗಳಿಗೆ ಪ್ರತ್ಯೇಕ ಜನರೇಟರ್‌ ವ್ಯವಸ್ಥೆವಿರುವ ಹಿನ್ನೆಲೆಯಲ್ಲಿ ವಿದ್ಯುತ್‍ ವ್ಯತ್ಯಯದಿಂದ ಯಾವುದೇ ಸಮಸ್ಯೆಯಾಗುವುದಿಲ್ಲ’ ಎಂದು ಆಸ್ಪತ್ರೆ ಸಿಬ್ಬಂದಿ ಸ್ಪಷ್ಟನೆ ನೀಡಿದರು.

ಸ್ಥಳಕ್ಕೆ ಬಂದ ಶಾಸಕ ಎಸ್. ರಾಮಪ್ಪ, ‘ಕೇಂದ್ರದ ಸಿಬ್ಬಂದಿ ಹಾಗೂ ರೋಗಿಯ ಸಂಬಂಧಿಗಳ ಅಭಿಪ್ರಾಯ ಪಡೆದರು. ಇಂತಹ ಘಟನೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳಿ’ ಎಂದು ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಎಲ್. ಹನುಮನಾಯ್ಕ ಅವರಿಗೆ ಸೂಚಿಸಿದರು.

ಸ್ಥಳಕ್ಕೆ ಸಿಪಿಐ ಶಿವಪ್ರಸಾದ್, ಪಿಎಸ್‍ಐ ಶೈಲಶ್ರೀ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.