ADVERTISEMENT

ಆಸ್ಪತ್ರೆಗೆ ಸೇರಿದ ತಂದೆ ಶವಾಗಾರದಲ್ಲಿ ಸಿಕ್ಕಾಗ...

ಮೃತಪಟ್ಟ ವ್ಯಕ್ತಿ ಬಗ್ಗೆ ನಾಲ್ಕು ದಿನಗಳ ಮೇಲೆ ಮಗನಿಗೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 3:55 IST
Last Updated 8 ಆಗಸ್ಟ್ 2020, 3:55 IST

ದಾವಣಗೆರೆ: ಕೊರೊನಾ ಸೋಂಕು ದೃಢಪಟ್ಟು ಜಿಲ್ಲಾ ಆಸ್ಪತ್ರೆಗೆ ಸೇರಿದ ತಂದೆಯ ಬಗ್ಗೆ ಮಾಹಿತಿಗಾಗಿ ಹುಡುಕಾಡಿದ ಮಗನಿಗೆ ನಾಲ್ಕು ದಿನಗಳ ಮೇಲೆ ತಂದೆ ಸಿಕ್ಕಿದ್ದು ಶವವಾಗಿ. ತಂದೆ ಶವಾಗಾರದಲ್ಲಿ ಸಿಕ್ಕಿದ್ದು ಕಂಡು ಕ್ವಾರಂಟೈನ್‌ನಲ್ಲಿದ್ದ ಮಗ ದಿಗಿಲುಗೊಂಡಿದ್ದಾರೆ.

ಆಧಾರ್‌ ಕಾರ್ಡ್ ಹಿಡಿದು ತಂದೆಯನ್ನು ಅರಸಿ ಬಂದ ಮಗ ನಾಗರಾಜ್‌ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ತಂದೆಯ ಶವ ಕಂಡು ಗುರುತು ಪತ್ತೆಹಚ್ಚಿದ ಸ್ಥಿತಿ ಮನಕಲಕುವಂತಿತ್ತು.

ಆಗಸ್ಟ್‌ 4ರಂದು ಕೋವಿಡ್‌ನಿಂದ ಗುಣಮುಖರಾಗಿ ಬಿಡುಗಡೆಗೊಂಡವರ ಪಟ್ಟಿಯಲ್ಲಿ ತಂದೆಯ ಹೆಸರನ್ನು ಕಂಡು ಪುತ್ರ ಗುರುವಾರ ಬಂದು ಸಿಬ್ಬಂದಿ, ವೈದ್ಯರನ್ನು ಪದೇ ಪದೇ ವಿಚಾರಿಸಿದರು. ಕೊನೆಗೆ ಶವಾಗಾರದಲ್ಲಿ ತಂದೆ ತಿಪ್ಪೇಸ್ವಾಮಿ ಶವ ಸಿಕ್ಕಿದೆ.

ADVERTISEMENT

ಜಗಳೂರು ಪಟ್ಟಣದ ಕೃಷ್ಣ ಬಡಾವಣೆಯ 77 ವರ್ಷದ ಎ. ತಿಪ್ಪೇಸ್ವಾಮಿ ಕೋವಿಡ್ ದೃಢಪಟ್ಟ ಕಾರಣ ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ಜುಲೈ 26ರಂದು ದಾಖಲಾಗಿದ್ದರು. ಅವರಿಗೆ ಪುತ್ರನ ಸಂಪರ್ಕದಿಂದ ಕೊರೊನಾ ಸೋಂಕು ದೃಢಪಟ್ಟಿತ್ತು. ಪುತ್ರ ಹಾಗೂ ಕುಟುಂಬದ ಕೆಲವರನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಈಚೆಗೆ ಮೃತಪಟ್ಟಿದ್ದರು. ಆದರೆ ಈ ಬಗ್ಗೆ ಕುಟುಂಬದವರಿಗೆ ಮಾಹಿತಿಯೇ ಇರಲಿಲ್ಲ.

ತಂದೆಗೆ ಹಲವು ಬಾರಿ ಮೊಬೈಲ್‌ ಕರೆ ಮಾಡಿದರೂ ಸ್ವೀಕರಿಸದ ಕಾರಣ ಅನುಮಾನಗೊಂಡ ನಾಗರಾಜ್‌ ಎಲ್ಲ ಸಿಬ್ಬಂದಿಗೆ, ಅಧಿಕಾರಿಗಳಿಗೆ ಕರೆ ಮಾಡಿದ್ದರೂ ಅವರು ಮಾಹಿತಿ ನೀಡಿರಲಿಲ್ಲ. ಕ್ವಾರಂಟೈನ್‌ನಲ್ಲಿದ್ದರೂ ತಂದೆಯ ಬಗ್ಗೆ ಮಾಹಿತಿಗಾಗಿ ಹಲವು ಪ್ರಯತ್ನ ಮುಂದುವರಿಸಿದ್ದರು.

‘ತಂದೆ ಮೃತಪಟ್ಟು ನಾಲ್ಕು ದಿನಗಳಾದರೂ ನಮಗೆ ತಿಳಿಸಿಲ್ಲ. ನಾನು ಕ್ವಾರಂಟೈನ್‌ನಲ್ಲಿದ್ದರೂ ಅವರ ಬಗ್ಗೆ ಮಾಹಿತಿ ಪಡೆಯಲು ಪದೇ ಪದೇ ಕರೆ ಮಾಡಿದ್ದೆ. ಆದರೂ ಯಾರೂ ಮಾಹಿತಿ ನೀಡಿರಲಿಲ್ಲ. ಮೃತಪಟ್ಟವರ ಹೆಸರು ಆಸ್ಪತ್ರೆಯಿಂದ ಬಿಡುಗಡೆಗೊಂಡವರ ಪಟ್ಟಿಯಲ್ಲಿದೆ. ನಾನು ಮನೆಯ ಸದಸ್ಯರ ಮೊಬೈಲ್‌ ಸಂಖ್ಯೆಯನ್ನು ಆಸ್ಪತ್ರೆಗೆ ನೀಡಿದ್ದೆ. ನಮಗೆ ತಿಳಿಸದಿದ್ದರೂ ಕನಿಷ್ಠ ಜಗಳೂರು ತಾಲ್ಲೂಕಿನ ಅಧಿಕಾರಿಗಳಿಗಾದರೂ ಈ ಬಗ್ಗೆ ತಿಳಿಸಬಹುದಿತ್ತು’ ಎಂದು ನಾಗರಾಜ್‌ ಆಸ್ಪತ್ರೆಯ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲಾ ಆಸ್ಪತ್ರೆಯ ಒಪಿಡಿ ರಸೀತಿಯಲ್ಲಿ ಕೋವಿಡ್‌ನಿಂದ ಮೃತಪಟ್ಟ ಅಥವಾ ಸೋಂಕಿಗೆ ಒಳಗಾದ ವ್ಯಕ್ತಿಯ ಸಂಪೂರ್ಣ ವಿವರ ಬರೆದುಕೊಡಲಾಗುತ್ತದೆ. ಕುಟುಂಬ ದವರಿಗೆ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಮಾಹಿತಿ ನೀಡುತ್ತಾರೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.