ಹೊನ್ನಾಳಿ: ‘ಪ್ರಧಾನಿ ನರೇಂದ್ರ ಮೋದಿ ಅವರು 11 ವರ್ಷಗಳ ಸುದೀರ್ಘ ಅವಧಿಯಲ್ಲಿ ಕೈಗೊಂಡಿರುವ ಭಾರತದ ಪ್ರಗತಿ ಇಡೀ ವಿಶ್ವಕ್ಕೆ ಅನುಕರಣೀಯ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಮೋದಿ ಅವರ ಮೂರನೇ ಅವಧಿಯ ಮೊದಲನೇ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ನೀತಿ ಭಾರತವನ್ನು ವಿಶ್ವಗುರುವಾಗಿ ಮೋದಿ ಸಾಬೀತುಪಡಿಸಿದ್ದಾರೆ. ಭಾರತ ಅಭಿವೃದ್ಧಿಯಲ್ಲಿ ದಾಪುಗಾಲು ಹಾಕುತ್ತಿದೆ. ದೇಶದಲ್ಲಿ ಶೇ 22ರಷ್ಟು ಇದ್ದ ಕಡುಬಡತನ ಇದೀಗ ಶೇ 5.7ಕ್ಕೆ ಇಳಿದಿರುವುದು ಸಂತಸದ ವಿಷಯ’ ಎಂದು ಹೇಳಿದರು.
‘ಮೇಕ್ ಇನ್ ಇಂಡಿಯಾ’ದಿಂದ ಮತ್ತು ಇತರ ಕ್ಷೇತ್ರಗಳಲ್ಲಿ ಭಾರತ ಸಾಧಿಸಿದ ಪ್ರಗತಿಯಿಂದಾಗಿ ನಮ್ಮ ದೇಶ ಜಪಾನ್‌ನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಿದೆ. ಕೆಲವೇ ವರ್ಷಗಳಲ್ಲಿ ಭಾರತ ವಿವಿಧ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿರುವುದನ್ನು ನೋಡಿ ಜಗತ್ತು ನಿಬ್ಬೆರಗಾಗಿದೆ. ವಿಶ್ವದ ಹಿತವನ್ನು ಬಯಸುತ್ತಿರುವ ಭಾರತವನ್ನು ಜಗತ್ತಿನ ಇತರ ದೇಶಗಳು ಗೌರವಿಸಲು ಮುಂದಾಗಿವೆ ಎಂದರು.
‘ದೇಶದ ರಕ್ಷಣೆ ವಿಚಾರದಲ್ಲಿ ಯಾರೊಂದಿಗೂ ರಾಜೀಯಾಗದೆ, ಶತ್ರು ರಾಷ್ಟ್ರಕ್ಕೆ ಚುರುಕು ಮುಟ್ಟಿಸಿ ಬಾಲ ಮುದುರಿಕೊಳ್ಳುವಂತೆ ಮಾಡಿದ್ದು, ಅಲ್ಲದೆ ‘ಆಪರೇಷನ್ ಸಿಂಧೂರ್’ ನಡೆದಾಗ ಯುದ್ಧವನ್ನು ನಿಲ್ಲಿಸುವಂತೆ ಪಾಕಿಸ್ತಾನ ಭಾರತವನ್ನು ಅಂಗಲಾಚುವಂತೆ ಮಾಡಿದ್ದು ಕೇಂದ್ರ ಸರ್ಕಾರದ ಬಹುದೊಡ್ಡ ಸಾಧನೆ’ ಎಂದರು.
ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕುಬೇಂದ್ರಪ್ಪ ಮಾತನಾಡಿ, ‘ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 10 ವರ್ಷ ಆಡಳಿತ ನಡೆಸಿದ್ದಾಗ, ಉಗ್ರರು ಭಾರತದೊಳಕ್ಕೆ ಸುಲಭವಾಗಿ ನುಸುಳುವುದಕ್ಕೆ ಅವಕಾಶ ಇತ್ತು. ಆದರೆ, ನಮ್ಮ ಕೇಂದ್ರ ಸರ್ಕಾರ ಭಾರತದೊಳಕ್ಕೆ ಒಬ್ಬನೇ ಒಬ್ಬ ಉಗ್ರರು ನಸುಳುವುದಕ್ಕೆ ಬಿಡಲಿಲ್ಲ, ಅಷ್ಟೇ ಅಲ್ಲದೆ ಮೋದಿ ಭ್ರಷ್ಟಾಚಾರ ನಡೆಯಲಿಕ್ಕೆ ಬಿಡಲಿಲ್ಲ’ ಎಂದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ್, ಮುಖಂಡ ಜೆ.ಕೆ. ಸುರೇಶ್ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.