ADVERTISEMENT

ಕಟ್ಟಕಡೆಯ ವ್ಯಕ್ತಿಗೆ ಸೌಲಭ್ಯ ತಲುಪಿಸುವುದೇ ಗುರಿ: ಸಚಿವ ಬೈರತಿ ಬಸವರಾಜ

ಸವಲತ್ತು ವಿತರಣೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 3:01 IST
Last Updated 28 ಸೆಪ್ಟೆಂಬರ್ 2021, 3:01 IST
ದಾವಣಗೆರೆ ತಾಲ್ಲೂಕು ಮಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆನಗೋಡಿನಲ್ಲಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಯಿತು.
ದಾವಣಗೆರೆ ತಾಲ್ಲೂಕು ಮಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆನಗೋಡಿನಲ್ಲಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಯಿತು.   

ದಾವಣಗೆರೆ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ದೊರಕುವಂತಾಗಬೇಕು ಎಂಬ ಗುರಿ ಇಟ್ಟುಕೊಂಡು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಬಸವರಾಜ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಹಾಗೂ ಡಾ. ಬಾಬೂ ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಸೋಮವಾರ ಆನಗೋಡು ಗ್ರಾಮದ ಮರುಳಸಿದ್ದೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕಾಯಕ ಉತ್ತೇಜನ, ಸಮಗ್ರ ಅಭಿವೃದ್ಧಿ ಯೋಜನೆಯಡಿ ಚರ್ಮ ಕುಶಲಕರ್ಮಿಗಳಿಗೆ ವಸತಿ, ಚರ್ಮಶಿಲ್ಪಿ ಮತ್ತು ಮೂಲ ಸೌಕರ್ಯಗಳ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಸವಲತ್ತು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಒಂದೂವರೆ ವರ್ಷದಿಂದ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಸರ್ಕಾರದಿಂದ ಏನೇನು ಕಾರ್ಯಕ್ರಮ ರೂಪಿಸಬೇಕು ಎಂಬುದನ್ನು ತಿಳಿದುಕೊಂಡು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಯಾವುದೇ ಮೂಲ ಸೌಕರ್ಯಗಳಿರಲಿಲ್ಲ. ನಂತರ ಕೋವಿಡ್ ಪರೀಕ್ಷಾ ಕೇಂದ್ರ ಪ್ರಾರಂಭಿಸಿದ್ದು, ತಾಲ್ಲೂಕುವಾರು ಆಮ್ಲಜನಕ ಘಟಕ ಸ್ಥಾಪಿಸಲಾಗಿದೆ’ ಎಂದು ಹೇಳಿದರು.

ADVERTISEMENT

ಸಂಸದರಾದ ಜಿ.ಎಂ.ಸಿದ್ದೇಶ್ವರ, ‘ವಸತಿ ಮತ್ತು ಸಮುದಾಯ ಭವನಕ್ಕೆ ಹಾಲುವರ್ತಿ ಗ್ರಾಮದಲ್ಲಿ 2 ಎಕರೆ ಜಮೀನು ಹಾಗೂ ತ್ಯಾವಣಿಗೆಯಲ್ಲಿ 7 ಗುಂಟೆಯನ್ನು ಜಿಲ್ಲಾಧಿಕಾರಿ ಮಂಜೂರು ಮಾಡಿಕೊಟ್ಟಿದ್ದಾರೆ. ಆನಗೋಡು ಹೋಬಳಿ ಹುಣಸೆಕಟ್ಟೆ ಗ್ರಾಮದಲ್ಲಿ 70 ಕುಶಲಕರ್ಮಿಗಳಿಗೆ ₹ 3 ಕೋಟಿ, ಆಧುನಿಕ ತಾಂತ್ರಿಕ ಉತ್ಪಾದನೆ ನಡೆಸಲು ₹ 80 ಲಕ್ಷ ವೆಚ್ಚದಲ್ಲಿ ಸಾಮಾನ್ಯ ಸವಲತ್ತು ಕೇಂದ್ರ, ಸರ್ವ ಸಿದ್ಧಿ ಭವನ ಹಾಗೂ ತ್ಯಾವಣಿಗೆಯಲ್ಲಿ 30 ಚರ್ಮ ಕುಶಲ ಕರ್ಮಿಗಳಿಗೆ ವಸತಿ ಗೃಹ ನಿರ್ಮಾಣ ಮಾಡಲು ಶಂಕು ಸ್ಥಾಪನೆಯಾಗಿದೆ. 2020-21 ನೇ ಸಾಲಿನಲ್ಲಿ ಚರ್ಮ ಕೈಗಾರಿಕೆಯಲ್ಲಿ ತೊಡಗಿರುವ 126 ಕುಶಲಕರ್ಮಿಗಳಿಗೆ ₹ 45 ಲಕ್ಷ ವೆಚ್ಚದಲ್ಲಿ ಕೌಶಲ ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಮಾಯಕೊಂಡ ಕ್ಷೇತ್ರದಲ್ಲಿ ಚರ್ಮ ಕೈಗಾರಿಕೆಯಡಿ ರಾಜ್ಯ ಸರ್ಕಾದಿಂದ ₹ 4 ಲಕ್ಷ, ಕೇಂದ್ರ ಸರ್ಕಾರದಿಂದ ₹ 5 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಅಮೃತ ಮಹೋತ್ಸವದ ಅಂಗವಾಗಿ 752 ಗ್ರಾಮಗಳನ್ನು ಅಮೃತ ಗ್ರಾಮವನ್ನಾಗಿ ಮಾಡಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ಶಾಸಕ ‌ಪ್ರೊ.ಲಿಂಗಣ್ಣ ಅಧ್ಯಕ್ಷತೆ ವಹಿಸಿ, ‘ಮಾಯಕೊಂಡ ಕ್ಷೇತ್ರದಲ್ಲಿ ಸಮುದಾಯ ಭವನ ನಿರ್ಮಿಸಬೇಕೆಂಬ ಬಹುದಿನದ ಕನಸು ಇದೀಗ ನನಸಾಗುತ್ತಿದೆ. ಸರ್ಕಾರದಿಂದ ಹಲವು ಯೋಜನೆಗಳನ್ನು ಬಡವರಿಗೆ, ತಳ ಮಟ್ಟದ ಸಮುದಾಯಗಳಿಗೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಕೇಂದ್ರ ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗಾಗಿ ₹ 5 ಕೋಟಿ ಪ್ರಸ್ತಾವನೆ ಮಾಡಲಾಗಿದೆ. ಸರ್ಕಾರದ ಹಲವು ಯೋಜನೆಗಳನ್ನು ದೀನ ದಲಿತರು, ರೈತರು, ಬಡವರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಯೋಗ ಮ್ಯಾಟ್, ಸ್ಕೂಲ್ ಯೂನಿಫಾರಂ, ಸ್ಟೇಷನರಿ ಐಟಮ್ಸ್, ಬುಕ್ಸ್ ಸೇರಿ ವಿವಿಧ ಸವಲತ್ತುಗಳುಳ್ಳ ಕಿಟ್ ಹಾಗೂ ಹಾಗೂ ಲಿಡ್ಕಕರ್ ವತಿಯಿಂದ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಸ್ವಂತ ಮನೆ ಕಲ್ಪಿಸಿಕೊಳ್ಳಲು ಚೆಕ್ ವಿತರಣೆ ಮಾಡಲಾಯಿತು.

ಶಾಸಕ ಎಸ್.ಎ.ರವೀಂದ್ರನಾಥ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ವಿಜಯ ಮಹಾಂತೇಶ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಮೇಯರ್‌ ಎಸ್.ಟಿ. ವೀರೇಶ್, ತಹಶೀಲ್ದಾರ್ ಬಿ.ಎನ್‌. ಗಿರೀಶ್, ಬಾಬೂ ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ನಟರಾಜ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಕೌಸರ್‌ ರೇಷ್ಮಾ ಜಿ., ಕೆಆರ್‌ಐಡಿಎಲ್ ಕಾರ್ಯನಿರ್ವಾಹಕ ಎಂಜಿನಿಯರ್‌ ವೀರಣ್ಣ ಅಂಗಡಿ ಇದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.