ತ್ಯಾವಣಿಗೆ: ಕತ್ತಲಗೆರೆ ಗ್ರಾಮದ ಸರ್ವೆ ನಂ. 99/10ರಲ್ಲಿರುವ ಅಂದಾಜು 6.31 ಗುಂಟೆ ಜಮೀನು ಯಾರ ಹೆಸರಿಗೆ ಇದೆ. ಅದನ್ನು ಹೇಗೆ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಖುದ್ದು ಶಾಲೆಗೆ ಭೇಟಿ ನೀಡಿ ಸಮರ್ಪಕ ಮಾಹಿತಿ ನೀಡುವಂತೆ ಶಿಕ್ಷಣ ಇಲಾಖೆ ಉಪರ್ನಿದೇಶಕರು ಸೂಚಿಸಿದ್ದು, ಎರಡು ದಿನಗಳಲ್ಲಿ ಸಮರ್ಪಕ ಮಾಹಿತಿ ನೀಡಲಾಗುವುದು’ ಎಂದು ಶಿಕ್ಷಣಾಧಿಕಾರಿ ಜಯ್ಯಪ್ಪ ಎಲ್ ತಿಳಿಸಿದರು.
ತ್ಯಾವಣಿಗೆ ಸಮೀಪದ ಕತ್ತಲಗೆರೆ ಗ್ರಾಮದ ಸರ್ಕಾರಿ ಬಾಲಕರ ಶಾಲೆಗೆ ಸೋಮವಾರ ಭೇಟಿ ನೀಡಿ, ಶಾಲಾಭಿವೃದ್ಧಿ ಸಮಿತಿ, ಭೂ ದಾನ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಉಪನಿರ್ದೇಶಕರ ಸೂಚನೆಯಂತೆ ಶಾಲೆಗೆ ಭೇಟಿ ನೀಡಲಾಗಿದ್ದು, ವಸ್ತುನಿಷ್ಠ ವರದಿ ನೀಡಲಾಗುವುದು ಎಂದು ಗ್ರಾಮಸ್ಥರಿಗೆ ತಿಳಿಸಿದರು.
‘1950ರಲ್ಲಿ ಗ್ರಾಮದ ಕುಂದೂರು ರುದ್ರಪ್ಪ ಶಾಸಕರಾಗಿದ್ದಾಗ ಬಡ ಮಕ್ಕಳ ಶಿಕ್ಷಣಕ್ಕಾಗಿ ಗ್ರಾಮದ ಸರ್ವೆ ನಂ. 99/10ರಲ್ಲಿ 6.31 ಗುಂಟೆ ಜಮೀನನ್ನು ಮಿಡ್ಲ್ ಸ್ಕೂಲ್ ಹಾಸ್ಟೆಲ್‌ಗೆ ಮೀಸಲಿಡಲಾಗಿತ್ತು. ಅಕ್ಕಪಕ್ಕದ ಜಮೀನಿನವರು 2008ರವರೆಗೆ ಅದನ್ನು ಉಳುಮೆ ಮಾಡಿಕೊಂಡು ಬಂದಿದ್ದರು. ನಂತರದ ದಿನಗಳಲ್ಲಿ ಗ್ರಾಮದ ಮುಖಂಡರು ರೈತರ ಮನವೊಲಿಸಿ ಭೂಮಿ ವಶಪಡಿಸಿಕೊಂಡು ಜಮೀನನ್ನು ಹರಾಜಿನ ಮೂಲಕ ಗುತ್ತಿಗೆ ನೀಡಿ ಅದರಿಂದ ಬಂದ ಆದಾಯವನ್ನು ಶಾಲೆ ಅಭಿವೃದ್ಧಿಗೆ ಬಳಸಿಕೊಳ್ಳಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶಂಕರ ಪಾಟೀಲ್ ದಾಖಲೆ ಸಮೇತ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.
‘ಆ ಜಾಗದಲ್ಲಿ ಹಾಸ್ಟೆಲ್ ನಿರ್ಮಿಸಲು ಗ್ರಾಮಸ್ಥರ ಒಪ್ಪಿಗೆ ಇದೆ. ಸದ್ಯ ಹರಾಜಿನಲ್ಲಿ ಜಮೀನನ್ನು ಉಳುಮೆ ಮಾಡಲು ತೆಗೆದುಕೊಂಡಿರುವ ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸಮಸ್ಯೆ ಬಗೆಹರಿಸಬೇಕು’ ಎಂದು ಒತ್ತಾಯಿಸಿದರು.
ಸಭೆಯಲ್ಲಿ ತಹಶೀಲ್ದಾರ್ ರುಕ್ಮಿಣಿಬಾಯಿ, ಉಪ ತಹಶೀಲ್ದಾರ್ ಮಂಜುನಾಥ್ ಎನ್, ಕಂದಾಯ ನಿರೀಕ್ಷಕ ಬಸಣ್ಣ, ಮುಖಂಡರಾದ ಬಸವನಗೌಡ್ರು, ಪಿ.ಎಚ್.ಮಂಜುನಾಥ್ ಇದ್ದರು.
‘ಭೂ ದಾನ ಕಮಿಟಿಯೇ ನಿರ್ವಹಿಸಲಿ’: ಜಮೀನನ್ನು ಶಾಲಾಭಿವೃದ್ಧಿ ಸಮಿತಿ ನಿರ್ವಹಣೆ ಮಾಡಲು ಸಾಧ್ಯವಾಗುವುದಿಲ್ಲ. ಗ್ರಾಮಸ್ಥರು ಮಾಡಿಕೊಂಡಿರುವ ಭೂ ದಾನ ಕಮಿಟಿಯಿಂದ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿದ್ದು, ಅವರೇ ನಿರ್ವಹಣೆ ಮಾಡಿದರೆ ಸೂಕ್ತ ಎಂದು ಎಸ್‌ಡಿಎಂಸಿ ಅಧ್ಯಕ್ಷ ಹಾಲೇಶ್, ವಿಶ್ವನಾಥ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.