ADVERTISEMENT

ಮಾಯಕೊಂಡ ಶಾಸಕರ ಕಾಳಜಿಯಿಂದ ಮುಂಬೈಗೆ ಹೊರಟಿತು ಸಾಂಬಾರ್‌ ಸೌತೆ

ಮಾಯಕೊಂಡ ಶಾಸಕರ ಕಾಳಜಿ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಪರಿಶ್ರಮ

​ಪ್ರಜಾವಾಣಿ ವಾರ್ತೆ
Published 1 ಮೇ 2020, 9:15 IST
Last Updated 1 ಮೇ 2020, 9:15 IST
ದಾವಣಗೆರೆ ತಾಲ್ಲೂಕು ಶಂಕರನಹಳ್ಳಿಯಿಂದ ಮುಂಬಯಿಗೆ ಸಾಗಿಸಲು ಗುರುವಾರ ಸಾಂಬಾರ್‌ ಸೌತೆ ಲೋಡ್‌ ಮಾಡಲಾಯಿತು
ದಾವಣಗೆರೆ ತಾಲ್ಲೂಕು ಶಂಕರನಹಳ್ಳಿಯಿಂದ ಮುಂಬಯಿಗೆ ಸಾಗಿಸಲು ಗುರುವಾರ ಸಾಂಬಾರ್‌ ಸೌತೆ ಲೋಡ್‌ ಮಾಡಲಾಯಿತು   

ದಾವಣಗೆರೆ: ಬೇಡಿಕೆ ಇಲ್ಲದೇ ಹೊಲದಲ್ಲೇ ಹಾಳಾಗಿ ಹೋಗಬೇಕಿದ್ದ ಸಾಂಬಾರ್‌ ಸೌತೆ ಶಾಸಕರ ಕಾಳಜು, ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಮುತುವರ್ಜಿಯಿಂದಾಗಿ ಖರೀದಿಯಾಗಿ ಮುಂಬೈಗೆ ಸಾಗಾಟವಾಗಿದೆ.

ತಾಲ್ಲೂಕಿನ ಅಣಬೇರು ಬಳಿಯ ಶಂಕರನಹಳ್ಳಿಯ ಮಂಜಪ್ಪ ಅವರ ಮಕ್ಕಳಾದ ಮಲ್ಲೇಶ ಮತ್ತು ಅಣ್ಣಪ್ಪ ಅವರು ಐದು ಎಕರೆಯಲ್ಲಿ ಸಾಂಬಾರು ಸೌತೆ ಬೆಳೆದಿದ್ದರು. 1.5 ಕೆ.ಜಿ. ಸೌತೆ ಬೀಜಕ್ಕೆ ₹ 16,500 ನೀಡಿದ್ದು ಸೇರಿ ಸುಮಾರು ₹ 60 ಸಾವಿರ ಖರ್ಚು ಮಾಡಿದ್ದರು. ಆದರೆ ಸಾಂಬಾರ್‌ ಸೌತೆ ಕಟಾವಿಗೆ ಬರುವ ಹೊತ್ತಿಗೆ ಲಾಕ್‌ಡೌನ್‌ ಆಗಿದ್ದರಿಂದ ಮಾರುಕಟ್ಟೆಯೇ ಇಲ್ಲದಂತಾಗಿತ್ತು.

ಸಾಂಬಾರ್‌ ಸೌತೆಗೆ ಮಂಗಳೂರು, ಉಡುಪಿ ಬಿಟ್ಟರೆ ರಾಜ್ಯದ ಬೇರೆಡೆ ಬೇಡಿಕೆಗಳಿಲ್ಲ. ಕೇರಳ, ಮಹಾರಾಷ್ಟ್ರದಲ್ಲಿ ಅಧಿಕ ಬೇಡಿಕೆ. ಆದರೆ ಕೊರೊನಾದಿಂದಾಗಿ ಹೇಗೆ ಸಾಗಾಟ ಮಾಡುವುದು ಎಂದು ಗೊತ್ತಾಗದೇ ಹೊಲದಲ್ಲೇ ಬಿಟ್ಟಿದ್ದರು.

ADVERTISEMENT

ಕೊನೇ ಪ್ರಯತ್ನ ಎಂಬಂತೆ ಮಾಯಕೊಂಡ ಶಾಸಕ ಪ್ರೊ. ಎನ್‌.ಲಿಂಗಣ್ಣ ಅವರನ್ನು ಈ ಮಲ್ಲೇಶ್‌, ಅಣ್ಣಪ್ಪ ಸಹೋದರರು ಬುಧವಾರ ಸಂಪರ್ಕಿಸಿ ತಮ್ಮ ಕಷ್ಟ ತೋಡಿಕೊಂಡಿದ್ದರು. ಶಾಸಕರು ಕೂಡಲೇ ಜಿಲ್ಲಾ ಪಂಚಾಯಿತಿಯ ಹಿರಿಯ ತೋಟಗಾರಿಕಾ ಸಹಾಯಕ ಅಧಿಕಾರಿ ಶಶಿಕಲಾ ಡಿ.ಆರ್‌. ಅವರನ್ನು ಸಂಪರ್ಕಿಸಿ ಈ ರೈತರಿಗೆ ಸಹಾಯ ಮಾಡುವಂತೆ ತಿಳಿಸಿದ್ದಾರೆ.

ಶಶಿಕಲಾ ಮತ್ತು ಸಹಾಯಕ ತೋಟಗಾರಿಕಾ ಅಧಿಕಾರಿ ಏಕಾಂತ ಅವರು ಕೂಡಲೇ ಸಾಂಬಾರ್‌ ಸೌತೆ ಖರೀದಿದಾರರೆಲ್ಲರನ್ನು ಸಂಪರ್ಕಿಸಿದ್ದಾರೆ. ಖರೀದಿ ಮಾಡಲು ತಯಾರಿದ್ದ ಹನುಮಂತಪ್ಪ ಅವರ ಸಂಖ್ಯೆಯನ್ನು ರೈತರಿಗೆ ನೀಡಿದ್ದಾರೆ. ಅವರು ಫೋನ್‌ನಲ್ಲೇ ವ್ಯವಹಾರ ಮಾತನಾಡಿದ್ದಲ್ಲದೇ ಗುರುವಾರ ಲಾರಿ ತೆಗೆದುಕೊಂಡು ಹೊಲಕ್ಕೆ ಬಂದರು. ಲಾರಿಯಲ್ಲಿ ಬೇರೆ ಕಡೆಯಿಂದ ಬೂದು ಕುಂಬಳಕಾಯಿಯನ್ನು ಅರ್ಧ ತುಂಬಿಸಿಕೊಂಡು ಬಂದಿದ್ದರು. ಉಳಿದ ಅರ್ಧ ಜಾಗದಲ್ಲಿ 5 ಟನ್‌ ಸಾಂಬಾರ್‌ ಸೌತೆ ಒಯ್ದಿದ್ದಾರೆ.

‘ಏಳೆಂಟು ವರ್ಷಗಳಿಂದ ಸಾಂಬಾರ್ ಸೌತೆ ಬೆಳೆಯುತ್ತಿದ್ದೇವೆ. ಕಳೆದ ವರ್ಷ ಒಂದು ಕೆ.ಜಿ.ಗೆ ಗರಿಷ್ಠ ₹ 22ರವರೆಗೆ ಮಾರಾಟವಾಗಿತ್ತು. ಈ ಬಾರಿ ಖರೀದಿಸುವವರೇ ಇಲ್ಲದ ಕಾರಣ ಇನ್ನೆರಡು ದಿನಗಳಲ್ಲಿ ಹೊಲದಲ್ಲೇ ರಂಟೆ ಹೊಡೆದು ನಾಶ ಮಾಡಲು ನಿರ್ಧರಿಸಿದ್ದೆವು. ಅದಕ್ಕಿಂತ ಮೊದಲು ಒಮ್ಮೆ ಶಾಸಕರಿಗೆ ಹೇಳಿ ನೋಡೋಣ ಎಂದು ಕರೆ ಮಾಡಿದೆವು. ಹಾಗಾಗಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾರಾಟಕ್ಕೆ ವ್ಯವಸ್ಥೆ ಮಾಡಿದರು’ ಎಂದು ಮಲ್ಲೇಶ್‌ ಮತ್ತು ಅಣ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸುಮಾರು 20 ಟನ್‌ ಬೆಳೆದಿದ್ದೇವೆ. ₹ 60 ಸಾವಿರ ವೆಚ್ಚವಾಗಿತ್ತು. ಈಗ ಕೆ.ಜಿ.ಗೆ ₹ 3ರಂತೆ ಕೊಡುತ್ತಿದ್ದೇವೆ. ಮಾಡಿದ ಖರ್ಚು ಆದರೂ ಬಂತಲ್ಲ’ ಎಂದು ನಿಟ್ಟುಸಿರು ಬಿಟ್ಟರು.

‘ಮುಂಬೈಯಲ್ಲಿ ಬೇಡಿಕೆ ಇದೆ. ಆದರೆ ಸಾಗಿಸುವುದೇ ಕಷ್ಟ. ಎರಡು ರಾಜ್ಯಗಳಿಂದ ಪರ್ಮಿಶನ್‌ ಪಡೆಯಬೇಕು. ಅಲ್ಲಿ ಕಾಯಬೇಕು. ಇವತ್ತು 5 ಟನ್‌ ಒಯ್ಯುತ್ತಿದ್ದೇವೆ. ಉಳಿದವುಗಳನ್ನು ಕೂಡ ಖರೀದಿ ಮಾಡುತ್ತೇವೆ’ ಎಂದು ಖರೀದಿದಾರ ಹನುಮಂತಪ್ಪ ತಿಳಿಸಿದ್ದಾರೆ.

‘ರೈತರು ಬೆಳೆ ನಾಶ ಮಾಡದಿರಿ’

‘ಹಿಂದೆ ಸಾಂಬಾರ್‌ ಸೌತೆ ಬೆಳೆದ ರೈತನನ್ನು ಹುಡುಕಿಕೊಂಡು ಖರೀದಿದಾರರು ಬರುತ್ತಿದ್ದರು. ಈಗ ರೈತರೇ ಖರೀದಿದಾರರನ್ನು ಹುಡುಕಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ. ರೈತರಿಗೆ ಲಾಭ ಆಗದೇ ಇದ್ದರೂ ಖರ್ಚಾದರೂ ಬರಲಿ ಎಂದು ನಾವು ಪ್ರಯತ್ನ ಪಡುತ್ತಿದ್ದೇವೆ. ರೈತರು ಬೆಳೆ ನಾಶ ಮಾಡುವ ನಿರ್ಧಾರಕ್ಕೆ ಬರಬಾರದು. ಅಧಿಕಾರಿಗಳನ್ನು ಸಂಪರ್ಕಿಸಬೇಕು’ ಎಂದು ಜಿಲ್ಲಾ ಪಂಚಾಯಿತಿಯ ಹಿರಿಯ ತೋಟಗಾರಿಕಾ ಸಹಾಯಕ ಅಧಿಕಾರಿ ಶಶಿಕಲಾ ಡಿ.ಆರ್‌. ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.