ADVERTISEMENT

ಹಳೇ ಸಾಹಿತ್ಯದ ಅಧ್ಯಯನ ಹೊಸ ಸಾಹಿತ್ಯಕ್ಕೆ ನಾಂದಿ

‘ಹಾಲಕ್ಕಿ ನುಡಿತೈತೆ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ. ಎಚ್‌. ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 4:05 IST
Last Updated 5 ಸೆಪ್ಟೆಂಬರ್ 2022, 4:05 IST
ಶಿಕ್ಷಕ ಸಿ.ಎಚ್. ನಾಗೇಂದ್ರಪ್ಪ ನವಿಲೇಹಾಳು ಅವರ ‘ಹಾಲಕ್ಕಿ ನುಡಿತೈತೆ’ ಕೃತಿಯು ಭಾನುವಾರ ದಾವಣಗೆರೆಯಲ್ಲಿ‌ ಬಿಡುಗಡೆಗೊಂಡಿತು
ಶಿಕ್ಷಕ ಸಿ.ಎಚ್. ನಾಗೇಂದ್ರಪ್ಪ ನವಿಲೇಹಾಳು ಅವರ ‘ಹಾಲಕ್ಕಿ ನುಡಿತೈತೆ’ ಕೃತಿಯು ಭಾನುವಾರ ದಾವಣಗೆರೆಯಲ್ಲಿ‌ ಬಿಡುಗಡೆಗೊಂಡಿತು   

ದಾವಣಗೆರ: ಹಿಂದಿನ ಸಾಹಿತ್ಯದ ಅಧ್ಯಯನ ಮಾಡಿದಾಗ ಹೊಸತನದ ಸಾಹಿತ್ಯವನ್ನು ಸೃಷ್ಟಿಸಲು ಸಾಧ್ಯ ಎಂದು ಜಿ.ಆರ್‌.ಹಳ್ಳಿಯ ಜ್ಞಾನಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಎಚ್‌. ವಿಶ್ವನಾಥ ಹೇಳಿದರು.

ಕನ್ನಡ ಸಾಂಸ್ಕೃತಿಕ ಗತವೈಭವ ಹಾಗೂ ವಿವಿಧೋದ್ದೇಶ ಸಂಸ್ಥೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ದೇವರನಿಂಬರಗಿ ಭೂಮಾತಾ ಪ್ರಕಾಶನದ ಸಹಯೋಗದಲ್ಲಿ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ನಡೆದ ಪ್ರಶಸ್ತಿ ಪ್ರದಾನ, ಸಿ.ಎಚ್. ನಾಗೇಂದ್ರಪ್ಪ ನವಿಲೇಹಾಳ್‌ ಅವರ ಪುಸ್ತಕ ಲೋಕಾರ್ಪಣೆ ಮತ್ತು ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಂಪ, ರನ್ನ, ರಾಘವಾಂಕ, ಕುಮಾರವ್ಯಾಸ ಸಹಿತ ಕನ್ನಡದ ಪ್ರಾಚೀನ ಕಾವ್ಯಗಳ ಅಧ್ಯಯನ ಕ್ಷೀಣಿಸಿದೆ. ಜನಪದ ಅಧ್ಯಯನ ಕೂಡ ಇಂದಿನ ಪೀಳಿಗೆಗೆ ಇಲ್ಲ. ಅಧ್ಯಯನ ಮಾಡಿಕೊಂಡು, ಪ್ರಸ್ತುತ ಕಾಲದ ತಲ್ಲಣಗಳಿಗೆ ಸ್ಪಂದಿಸುವವರಿಗೆ ಶ್ರೇಷ್ಠ ಕಾವ್ಯ ಸಿದ್ಧಿಸುತ್ತದೆ ಎಂದು ವಿಶ್ಲೇಷಿಸಿದರು.

ADVERTISEMENT

ಕವನಗಳು ಕವಿಯ ಮೊದಲ ಹೆರಿಗೆಯಿದ್ದಂತೆ. ನಂತರ ಬೇರೆ ಸಾಹಿತ್ಯ ಪ್ರಕಾರಗಳಿಗೆ ಹೊರಳಿದಾಗ ಕವಿತೆ ಕಣ್ಮರೆಯಾಗುವ ಸಾಧ್ಯತೆ ಇರುತ್ತದೆ ಎಂದು ಸಾಹಿತಿ ಫೈಜ್ನಟ್ರಾಜ್ ಹೇಳಿದರು.

ಕೃತಿಗಳನ್ನು ಕೊಂಡು ಓದಿದಾಗ ಕವಿಗೆ ಆರ್ಥಿಕ ಬೆಂಬಲ ನೀಡಿದಂತಾಗುತ್ತದೆ. ಕೊಂಡು ಓದುವ ಹವ್ಯಾಸ ಕನ್ನಡಿಗರು ರೂಢಿಸಿಕೊಳ್ಳಲಿ ಎಂದು ಚನ್ನಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಲ್.ಜಿ. ಮಧುಕುಮಾರ್ ಸಲಹೆ ನೀಡಿದರು.

ಶಿಕ್ಷಕ ಸಿ.ಎಚ್. ನಾಗೇಂದ್ರಪ್ಪ ನವಿಲೇಹಾಳು ಅವರ ‘ಹಾಲಕ್ಕಿ ನುಡಿತೈತೆ’ ಕೃತಿ ಬಗ್ಗೆಕನ್ನಡ ಸಾಂಸ್ಕೃತಿಕ ಗತವೈಭವ ಸಂಸ್ಥೆಯ ಉಪಾಧ್ಯಕ್ಷ ಕೆ. ಶ್ರೀಧರ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಾಮದೇವಪ್ಪ ಕೃತಿ ಬಿಡುಗಡೆ ಮಾಡಿದರು.

ಅಕ್ಟರ್‌ ಸಿ. ಕಾಲಿಮಿರ್ಚಿ ಅವರ ‘ಹೆಣದ ದಿಬ್ಬ’ ಹಾಗೂ ಡಾ. ನಾಗರಾಜು ಜಿ.ಬಿ. ಅವರ ‘ಮಾಯಾಜಿಂಕೆ’ ಕೃತಿಗಳಿಗೆ ಪ್ರಶಸ್ತಿ, ಮೊಹಮ್ಮದ್ ಸಾಬೀರ್ ಅಝಾದ್‌ ಅವರಿಗೆ ಶೈಕ್ಷಣಿಕ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಚಂದ್ರಮ್ಮ ಚಿರಡೋಣಿ ಹಾಲಪ್ಪ ನವಿಲೇಹಾಳ್‌, ಗಫಾರ್, ಡಾ. ಷಕೀಬ್ ಎಸ್. ಕಣದ್ಮನೆ, ಚಂದ್ರಪ್ಪ.ಬಿ. ಕೆ.ತಲವಾಗಲು, ಎಂ.ಕೆ.ಶೇಖ್, ರಾಮಚಂದ್ರ ಲಕ್ಕಳ್ಳಿ, ಗೋವರ್ಧನ, ಸನಾವುಲ್ಲಾ ನವಿಲೇಹಾಳು ಮುಂತಾದವರಿದ್ದರು.

ಲೀಲಾ ಪ್ರಾರ್ಥಿಸಿದರು. ಶಿವು ಆಲೂರು ಸ್ವಾಗತಿಸಿದರು. ಮೈಬೂಬ ಸಾಹೇಬ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಪ್ಪ ವಂದಿಸಿದರು. ಬಳಿಕ ಕವಿಗೋಷ್ಠಿ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.