ADVERTISEMENT

ದಾವಣಗೆರೆ| ಪತಿಗೆ ಒಲಿಯದ ಕ್ಷೇತ್ರದಲ್ಲಿ ಪತ್ನಿಯ ಜಯಭೇರಿ!

ಎರಡು ಬಾರಿ ಸ್ಪರ್ಧಿಸಿದ್ದ ಕೇಶವಮೂರ್ತಿ * ಮೊದಲ ಪ್ರಯತ್ನದಲ್ಲೇ ವಿಧಾನಸಭೆಗೆ ನಾಗಮ್ಮ ಕೇಶವಮೂರ್ತಿ

ಬಾಲಕೃಷ್ಣ ಪಿ.ಎಚ್‌
Published 29 ಮಾರ್ಚ್ 2023, 6:23 IST
Last Updated 29 ಮಾರ್ಚ್ 2023, 6:23 IST
ನಾಗಮ್ಮ ಕೇಶವಮೂರ್ತಿ ಮತ್ತು ಅವರ ಪತಿ ಸಿ. ಕೇಶವಮೂರ್ತಿ
ನಾಗಮ್ಮ ಕೇಶವಮೂರ್ತಿ ಮತ್ತು ಅವರ ಪತಿ ಸಿ. ಕೇಶವಮೂರ್ತಿ   

ದಾವಣಗೆರೆ: ಪತಿ ಎರಡು ಬಾರಿ ಸ್ಪರ್ಧಿಸಿದರೂ ಒಲಿಯದ ಗೆಲುವು, ಪತ್ನಿಯ ಚೊಚ್ಚಲ ಸ್ಪರ್ಧೆಯಲ್ಲೇ ದೊರೆತು ವಿಧಾನಸಭೆಗೆ ಪ್ರವೇಶ ದೊರಕಿಸಿತು. ಇದು ಸಿ.ಕೇಶವಮೂರ್ತಿ ಮತ್ತು ನಾಗಮ್ಮ ಕೇಶವಮೂರ್ತಿ ಅವರ ರಾಜಕೀಯ ಜೀವನ.

‘ನಗರಸಭೆಯ ಅತಿ ಕಿರಿಯ ವಯಸ್ಸಿನ ಅಧ್ಯಕ್ಷ’ ಎಂದು ಹೆಸರು ಪಡೆದಿದ್ದ ಸಿ. ಕೇಶವಮೂರ್ತಿ ಅವರು 1962ರಲ್ಲಿ ದಾವಣಗೆರೆ ವಿಧಾನಸಭಾ ಕ್ಷೇತ್ರದಿಂದ ಪ್ರಜಾ ಸೋಶಿಯಲಿಸ್ಟ್‌ ಪಾರ್ಟಿಯಿಂದ (ಪಿಎಸ್‌ಪಿ) ಸ್ಪರ್ಧಿಸಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೊಂಡಜ್ಜಿ ಬಸಪ್ಪ ಗೆಲುವು ಸಾಧಿಸಿದ್ದರು. 1967ರಲ್ಲಿ ಮತ್ತೆ ಕೊಂಡಜ್ಜಿ ಬಸಪ್ಪ ಮತ್ತು ಸಿ. ಕೇಶವಮೂರ್ತಿ ನಡುವೆಯೇ ಸ್ಪರ್ಧೆ ನಡೆಯಿತು. ಎರಡನೇ ಬಾರಿಯೂ ಕೊಂಡಜ್ಜಿ ಬಸಪ್ಪ ಅವರೇ ಗೆದ್ದರು.

1972ರ ಚುನಾವಣೆಯ ಹೊತ್ತಿಗೆ ಪಿಎಸ್‌ಪಿಯಿಂದ ಕೇಶವಮೂರ್ತಿಯವರು ಕಾಂಗ್ರೆಸ್‌ಗೆ ಬಂದರು. ಕೊಂಡಜ್ಜಿ ಬಸಪ್ಪ ಅವರು ರಾಜ್ಯ ರಾಜಕಾರಣ ಬಿಟ್ಟು ಕೇಂದ್ರ ರಾಜಕಾರಣದತ್ತ ಹೋದರು. ಲೋಕಸಭೆ ಪ್ರವೇಶಿಸಿದರು. 1972ರಲ್ಲಿ ಕೇಶವಮೂರ್ತಿ ಕಣಕ್ಕಿಳಿಯಲಿಲ್ಲ. ಪತ್ನಿ ಸಿ. ನಾಗಮ್ಮ ಕೇಶವಮೂರ್ತಿ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಸಂಯುಕ್ತ ಸೋಶಿಯಲಿಸ್ಟ್‌ ಪಾರ್ಟಿಯ ಕೆ.ಜಿ. ಮಹೇಶ್ವರಪ್ಪ ಅವರನ್ನು 22,000ಕ್ಕೂ ಅಧಿಕ ಮತಗಳಿಂದ ಸೋಲಿಸಿ ಮೊದಲ ಪ್ರಯತ್ನದಲ್ಲಿಯೇ ನಾಗಮ್ಮ ಗೆಲುವು ಸಾಧಿಸಿದ್ದರು.

ADVERTISEMENT

1978ರ ಚುನಾವಣೆಯಲ್ಲಿ ದಾವಣಗೆರೆ ಬಿಟ್ಟು ಮಾಯಕೊಂಡ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಜನತಾ ಪ‍ಕ್ಷದಿಂದ ಸ್ಪರ್ಧಿಸಿದ್ದ ಕೆ.ಜಿ. ಮಹೇಶ್ವರಪ್ಪರನ್ನು ಸೋಲಿಸಿ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಇದೇ ಅವಧಿಯಲ್ಲಿ ಗುಂಡೂರಾವ್‌ ಸರ್ಕಾರದಲ್ಲಿ ಶಿಕ್ಷಣ ಸಚಿವರೂ ಆದರು.

1983ರಲ್ಲಿ ಮತ್ತೆ ದಾವಣಗೆರೆ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಆದರೆ, ಕಮ್ಯುನಿಸ್ಟ್‌ ಪಕ್ಷದ ಪಂಪಾಪತಿ ಗೆದ್ದುಬಿಟ್ಟಿದ್ದರು. ನಾಗಮ್ಮ ಮೂರನೇ ಸ್ಥಾನಕ್ಕೆ ಹೋಗಿದ್ದರು. 1989ರಲ್ಲಿ ಮತ್ತೆ ಮಾಯಕೊಂಡ ಕ್ಷೇತ್ರಕ್ಕೆ ಮರಳಿದರು. ಜನತಾ ಪಕ್ಷದ ಕೆ. ಮಲ್ಲಪ್ಪ ಅವರನ್ನು ಸೋಲಿಸಿ ಮೂರನೇ ಬಾರಿಗೆ ಶಾಸಕರಾದರು.

1994ರಲ್ಲಿ ಮಾಯಕೊಂಡದಿಂದ ಸ್ಪರ್ಧಿಸಿದರೂ ಬಿಜೆಪಿ ಮೊದಲಬಾರಿಗೆ ಅಲ್ಲಿ ಖಾತೆ ತೆರೆಯಿತು. ಎಸ್‌.ಎ. ರವೀಂದ್ರನಾಥ್‌ ಶಾಸಕರಾದರು. ನಾಗಮ್ಮ ಅವರಿಗೆ ಅದೇ ಕೊನೇ ಚುನಾವಣೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.