ADVERTISEMENT

ಚನ್ನಗಿರಿ: ಭರದಿಂದ ಸಾಗಿದ ಜಮೀನಿಗೆ ರಸಗೊಬ್ಬರ ಹಾಕುವ ಕಾರ್ಯ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 5:36 IST
Last Updated 8 ಜುಲೈ 2025, 5:36 IST
ಗರಗ ಗ್ರಾಮದ ಬಳಿ ಮೆಕ್ಕೆಜೋಳ ಬೆಳೆಗೆ ರಸಗೊಬ್ಬರ ಹಾಕುವ ಕಾರ್ಯದಲ್ಲಿ ನಿರತರಾಗಿರುವ ರೈತರು
ಗರಗ ಗ್ರಾಮದ ಬಳಿ ಮೆಕ್ಕೆಜೋಳ ಬೆಳೆಗೆ ರಸಗೊಬ್ಬರ ಹಾಕುವ ಕಾರ್ಯದಲ್ಲಿ ನಿರತರಾಗಿರುವ ರೈತರು   

ಚನ್ನಗಿರಿ: ಎರಡು ಮೂರು ದಿನಗಳಿಂದ ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲೆಡೆ ಜಿಟಿಜಿಟಿ ಮಳೆಯಾಗುತ್ತಿದ್ದು, ಮುಂಗಾರು ಹಂಗಾಮಿನ ಬೆಳೆಗಳಿಗೆ ರಸಗೊಬ್ಬರ ಹಾಕುವ ಕಾರ್ಯ ಭರದಿಂದ ಸಾಗಿದೆ.

ಅಡಿಕೆ ಬಿಟ್ಟರೆ ಎರಡನೇ ಪ್ರಮುಖ ವಾಣಿಜ್ಯ ಬೆಳೆಯನ್ನಾಗಿ ಮೆಕ್ಕೆಜೋಳ ಬೆಳೆಯಲಾಗುತ್ತಿದೆ.  ತಾಲ್ಲೂಕಿನಾದ್ಯಂತ 18 ಸಾವಿರಕ್ಕೂ ಹೆಚ್ಚು ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಉಳಿದಂತೆ ರಾಗಿ, ಹತ್ತಿ, ತೊಗರಿ, ಅಲಸಂದೆ, ಅವರೆ, ಸೋಯಾಬೀನ್, ಈರುಳ್ಳಿ, ಹಸಿಮೆಣಸಿನಕಾಯಿ ಮುಂತಾದ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಎಲ್ಲ ಬೆಳೆಗಳಿಗೆ ರೈತರು ಅಗತ್ಯ ರಸಗೊಬ್ಬರ ಹಾಕುತ್ತಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.

ಹಲವೆಡೆ ಬೆಳೆಗಳ ಎಡೆಕುಂಟೆ ಹೊಡೆಯುವ ಕಾರ್ಯ ನಡೆದಿದ್ದರೆ, ಮತ್ತೆ ಕೆಲವು ಕಡೆ ಬೆಳೆಗಳ ಮಧ್ಯೆ ಬೆಳೆದ ಕಳೆ ತೆಗೆಯುವ ಕೆಲಸ ಸಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೆರೆಕಟ್ಟೆಗಳು ತುಂಬುವಷ್ಟು ದೊಡ್ಡ ಪ್ರಮಾಣದಲ್ಲಿ ಮುಂಗಾರು ಮಳೆಯಾಗದಿದ್ದರೂ, ಬೆಳೆಗಳಿಗೆ ಸಹಾಯವಾಗುವಷ್ಟು ಪ್ರಮಾಣದಲ್ಲಿ ಮಳೆ ಬಿದ್ದಿದೆ. ರೈತರು ಉತ್ಸಾಹದಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗುವಂತಾಗಿದೆ.

ADVERTISEMENT

‘ಎರಡು ಮೂರು ದಿನಗಳಿಂದ ಜಿಟಿಜಿಟಿ ಮಳೆಯಾಗುತ್ತಿದೆ. ರೈತರೆಲ್ಲ ತಾವು ಬೆಳೆದ ಬೆಳೆಗಳಿಗೆ ಅಗತ್ಯ ರಸಗೊಬ್ಬರ ಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ’ ಎಂದು ಗರಗ ಗ್ರಾಮದ ರೈತ ಸಂತೋಷ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.