ADVERTISEMENT

‘ಸೈಬರ್‌ ಸೆಕ್ಯುರಿಟಿ’ ಕೋರ್ಸ್‌ ಆರಂಭಿಸಲು ಚಿಂತನೆ

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ದಾವಣಗೆರೆ ವಿ.ವಿ ಕುಲಪತಿ ಪ್ರೊ. ಹಲಸೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 16:10 IST
Last Updated 15 ಜೂನ್ 2019, 16:10 IST
‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್‌.ವಿ. ಹಲಸೆ
‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್‌.ವಿ. ಹಲಸೆ   

ದಾವಣಗೆರೆ: ಉದ್ಯೋಗಾವಕಾಶ ವಿಪುಲವಾಗಿರುವ ‘ಸೈಬರ್‌ ಸೆಕ್ಯುರಿಟಿ’ ಕೌಶಲಾಧಾರಿತ ವೃತ್ತಿಪರ ಕೋರ್ಸ್‌ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್‌.ವಿ. ಹಲಸೆ ತಿಳಿಸಿದರು.

ವಿಶ್ವವಿದ್ಯಾಲಯದ ಚಟುವಟಿಕೆ ಕುರಿತು ಶನಿವಾರ ಹಮ್ಮಿಕೊಂಡಿದ್ದ ‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಹಲಸೆ, ‘ಇಂದು ಸೈಬರ್‌ ಅಪರಾಧಗಳು ಹೆಚ್ಚುತ್ತಿವೆ. ಸಾಮಾಜಿಕ ಜಾಲತಾಣಗಳ ಬಳಕೆ ಪ್ರಮಾಣವೂ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಕ್ಷೇತ್ರದಲ್ಲಿ ವಿಪುಲವಾದ ಉದ್ಯೋಗಾವಕಾಶಗಳಿವೆ. ಹೀಗಾಗಿ ‘ಸೈಬರ್‌ ಸೆಕ್ಯುರಿಟಿ’ ಕೌಶಲಾಧಾರಿತ ವೃತ್ತಿಪರ ಕೋರ್ಸ್‌ ಆರಂಭಿಸಲು ಯೋಜನೆ ರೂಪಿಸಲಾಗುತ್ತಿದೆ. ಈ ವಿಷಯವನ್ನು ಬೋಧಿಸಲು ಬೇಕಾಗುವ ವಿಷಯ ತಜ್ಞರನ್ನು ಹುಡುಕುತ್ತಿದ್ದೇವೆ. ತಜ್ಞರೊಂದಿಗೆ ಚರ್ಚಿಸಿ ಪಠ್ಯವನ್ನೂ ಸಿದ್ಧಪಡಿಸಲಾಗುವುದು. ವಿದ್ಯಾರ್ಥಿಗಳಿಗೆ ಈ ವಿಷಯದ ಕಲಿಕೆಗೂ ಶೀಘ್ರವೇ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಎಂಪಿಇಡಿ ಕೋರ್ಸ್‌ ಹಾಗೂ ನಾಲ್ಕು ವರ್ಷಗಳ ಎಂ. ಲಿಬ್‌ ಕೋರ್ಸ್‌ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ ನೃತ್ಯ, ಸಂಗೀತ, ಕಲೆ ಆಧಾರಿತ ಪರ್ಫಾರ್ಮೆನ್ಸ್‌ ಆರ್ಟ್ಸ್‌ (ಪ್ರದರ್ಶನ ಕಲೆಗಳು) ಕೋರ್ಸ್‌ ಆರಂಭಿಸಲು ಮುಂದಾಗಿದ್ದೆವು. ಯುಜಿಸಿ ನಿಯಮಾವಳಿ ಪ್ರಕಾರ 15 ವಿದ್ಯಾರ್ಥಿಗಳಿದ್ದರೆ ಹೊಸದಾಗಿ ಕೋರ್ಸ್‌ ಆರಂಭಿಸಬಹುದಾಗಿದೆ. ಮೊದಲ ವರ್ಷವಾಗಿದ್ದರಿಂದ 8 ವಿದ್ಯಾರ್ಥಿಗಳು ಬಂದಿದ್ದರೂ ತರಗತಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ, ಕೇವಲ ಮೂರು ವಿದ್ಯಾರ್ಥಿಗಳು ಬಂದಿದ್ದರಿಂದ ತರಗತಿ ನಡೆಸಿಲ್ಲ. ಈ ಬಾರಿ ಕೋರ್ಸ್‌ ಆರಂಭಿಸಲಾಗುವುದು’ ಎಂದು ಹಲಸೆ ವಿವರಿಸಿದರು.

ADVERTISEMENT

ರೇಡಿಯೊ– ಟಿವಿ ಸ್ಟುಡಿಯೊ: ಇದುವರೆಗೂ ರೂಸಾ ಅನುದಾನದಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿತ್ತು. ಈಗ ಅನುದಾನದ ಲಭ್ಯತೆ ಆಧಾರದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಮಾಧ್ಯಮ ವಿಭಾಗದಲ್ಲಿ ರೇಡಿಯೊ ಹಾಗೂ ಟಿವಿ ಸ್ಟುಡಿಯೊ ಆರಂಭಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಚಿತ್ರದುರ್ಗದ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಈ ವರ್ಷದಿಂದ ಭೌತವಿಜ್ಞಾನ ಹಾಗೂ ಭೂವಿಜ್ಞಾನ ವಿಷಯಗಳಲ್ಲಿ ಎಂ.ಎಸ್ಸಿ ಕೋರ್ಸ್‌ ಆರಂಭಿಸಲಾಗುವುದು ಎಂದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹ ಪ್ರಾಧ್ಯಾಪಕ ಶಿವಕುಮಾರ ಕಣಸೋಗಿ, ಅಪರಾಧ ಮತ್ತು ವಿಧಿವಿಜ್ಞಾನ ವಿಭಾಗದ ಅತಿಥಿ ಪ್ರಾಧ್ಯಾಪಕ ಪ್ರೊ. ನಟರಾಜ್‌ ಇದ್ದರು.

ಕಂಪ್ಯೂಟರ್‌–ಇಂಗ್ಲಿಷ್‌ ತರಬೇತಿ

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ಅನುಕೂಲವಾಗಲಿದೆ ಎಂದು ಕಳೆದ ವರ್ಷ ಕಂಪ್ಯೂಟರ್‌ ಲ್ಯಾಬ್‌ ಹಾಗೂ ಲ್ಯಾಂಗ್ವೇಜ್‌ ಲ್ಯಾಬ್‌ ಆರಂಭಿಸಲಾಗಿದೆ. ಕಲಾ ನಿಕಾಯದ ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳಿಗೂ ವಾರಕ್ಕೆ ಎರಡು ಗಂಟೆ ಕಡ್ಡಾಯವಾಗಿ ಬೇಸಿಕ್‌ ಕಂಪ್ಯೂಟರ್‌ ತರಬೇತಿ ಕೊಡಲಾಗುತ್ತಿದೆ. ಜೊತೆಗೆ ಲ್ಯಾಂಗ್ವೇಜ್‌ ಲ್ಯಾಬ್‌ನಲ್ಲಿ ತಂತ್ರಾಂಶಗಳನ್ನು ಬಳಸಿಕೊಂಡು ಇಂಗ್ಲಿಷ್‌ ಭಾಷೆಯನ್ನೂ ಕಲಿಸಿಕೊಡಲಾಗುತ್ತಿದೆ. ನೌಕರಿ ಪಡೆಯಲು ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಪ್ರೊ. ಹಲಸೆ ತಮ್ಮ ಅವಧಿಯಲ್ಲಿ ಕೈಗೊಂಡ ಸಾಧನೆಗಳ ವಿವರ ಒಪ್ಪಿಸಿದರು.

ಫೈನ್‌ ಆರ್ಟ್‌ ಕಾಲೇಜಿಗೆ 30 ಕಂಪ್ಯೂಟರ್‌ ನೀಡಲಾಗುತ್ತಿದ್ದು, ಫೋಟೊಗ್ರಫಿ ಹಾಗೂ ಎನಿಮೇಷನ್‌ ಡಿಪ್ಲೊಮಾ ಕೋರ್ಸ್‌ ಅನ್ನೂ ಆರಂಭಿಸಲು ಯೋಜನೆ ರೂಪಿಸಲಾಗಿದೆ ಎಂದರು.

ಬೋಧಕ ಸಿಬ್ಬಂದಿ ನೇಮಕಾತಿಗೆ ಕ್ರಮ

ವಿಶ್ವವಿದ್ಯಾಲಯಕ್ಕೆ ಒಟ್ಟು 125 ಬೋಧಕ ಸಿಬ್ಬಂದಿ ಹುದ್ದೆ ಮಂಜೂರಾಗಿದೆ. ಹೈದರಾಬಾದ್‌ ಕರ್ನಾಟಕ ಕೋಟಾ ಹೊರತುಪಡಿಸಿ 111 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಕೆಲ ದಿನಗಳ ಹಿಂದೆ ಐದು ವಿಭಾಗಗಳಿಗೆ ಒಟ್ಟು 27 ಬೋಧಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ವಾರದೊಳಗೆ ಇನ್ನೂ ಕೆಲ ವಿಭಾಗಗಳಿಗೆ 25 ಸಿಬ್ಬಂದಿ ನೇಮಕಾತಿ ಆಗಲಿದೆ. ಉಳಿದ ಖಾಲಿ ಹುದ್ದೆಗಳಿಗೂ ಶೀಘ್ರವೇ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಪ್ರೊ. ಹಲಸೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿದ್ಯಾರ್ಥಿಗಳ ಮನೋಭಾವ ಬದಲಾಗಲಿ

ವಿಶ್ವವಿದ್ಯಾಲಯಗಳಲ್ಲಿ ಇಂದು ಸಂಶೋಧನೆಗಳ ಗುಣಮಟ್ಟ ಕಡಿಮೆಯಾಗುತ್ತಿವೆ ಎಂಬ ದೂರುಗಳು ಕೇಳಿಬರುತ್ತಿರುವುದು ತಕ್ಕ ಮಟ್ಟಿಗೆ ಸತ್ಯಕ್ಕೆ ಹತ್ತಿರವಾಗಿದೆ. ತಾವು ಮಾಡುವ ಸಂಶೋಧನೆಗಳು ಗುಣಮಟ್ಟದಿಂದ ಕೂಡಿರಬೇಕು ಎಂಬ ಮನೋಭಾವ ವಿದ್ಯಾರ್ಥಿಗಳಲ್ಲೂ ಬೆಳೆಯಬೇಕು. ಕೇವಲ ಸರ್ಟಿಫಿಕೇಟ್‌ಗಾಗಿ ಕಲಿಯುವುದರ ಬದಲು, ಜ್ಞಾನ ಪಡೆಯಬೇಕು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರತಿ ವಿಷಯವನ್ನೂ ಕಲಿಯಬೇಕು ಎಂಬ ಹಂಬಲ ವಿದ್ಯಾರ್ಥಿಗಳಲ್ಲಿ ಇರಬೇಕು ಎಂದು ಕುಲಪತಿ ಕಿವಿಮಾತು ಹೇಳಿದರು.

‘ಇಂದು ದೇಶದಲ್ಲಿ ನಾವು ಸಾಫ್ಟ್‌ವೇರ್‌ ವಿಚಾರದಲ್ಲಿ ಮುಂದಿದ್ದೇವೆ. ಆದರೆ, ಅದಕ್ಕೆ ಅಗತ್ಯವಿರುವ ಎಲೆಕ್ಟ್ರಾನಿಕ್ಸ್‌ ಉಪಕರಣಗಳನ್ನು ತಯಾರಿಸುವಲ್ಲಿ ಹಿಂದುಳಿದಿದ್ದೇವೆ. ಇದಕ್ಕೆ ನಮ್ಮ ಬೋಧನಾ ಪದ್ಧತಿಯೂ ಕಾರಣ’ ಎಂದು ಬೇಸರ ವ್ಯಕ್ತಪಡಿಸಿದರು.

ಸುಸಜ್ಜಿತ ಕ್ರೀಡಾಂಗಣಕ್ಕೆ ಯೋಜನೆ

ರಾಷ್ಟ್ರೀಯ ಹೆದ್ದಾರಿ ಪಕ್ಕದ ಹುಳುಪಿನ ಕಟ್ಟೆ ಬಳಿ ವಿಶ್ವವಿದ್ಯಾಲಯಕ್ಕೆ ಸೇರಿದ 78 ಎಕರೆ ಭೂಮಿ ಇದೆ. ಅಲ್ಲಿ ರೀಸರ್ಚ್‌ ಸೆಂಟರ್‌ ಹಾಗೂ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಪಾರ್ಕ್‌ ನಿರ್ಮಿಸಲು ಉದ್ದೇಶಿಸಲಾಗಿದೆ. ಜೊತೆಗೆ ಅಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಮಾದರಿಯಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಕುಲಪತಿ ಪ್ರೊ. ಹಲಸೆ ಮಾಹಿತಿ ನೀಡಿದರು.

ಪ್ರತಿ ಜಿಲ್ಲೆಗೂ ಸುಸಜ್ಜಿತ ಕ್ರೀಡಾಂಗಣ ಮಾಡಲು ಸರ್ಕಾರ ₹ 2 ಕೋಟಿ ಅನುದಾನ ನೀಡುತ್ತಿದೆ. ಹೀಗಾಗಿ ಸರ್ಕಾರದ ನೆರವು ಪಡೆದು ಇಲ್ಲಿ ಕ್ರೀಡಾಂಗಣ ನಿರ್ಮಿಸಲು ಚಿಂತನೆ ಮಾಡಲಾಗಿದೆ. ಅಂದಾಜು ₹ 300 ಕೋಟಿ ಅನುದಾನ ಇದಕ್ಕೆ ಬೇಕಾಗಲಿದೆ ಎಂದರು.

ಗಿಡ ಬೆಳೆಸುವುದು ಕಡ್ಡಾಯಕ್ಕೆ ಚಿಂತನೆ

ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ ಫಿಲಿಪೈನ್ಸ್‌ ದೇಶಗಳಲ್ಲಿ ಪ್ರತಿ ವಿದ್ಯಾರ್ಥಿಯೂ 10 ಸಸಿಗಳನ್ನು ನೆಟ್ಟು ಪೋಷಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಅದೇ ಮಾದರಿಯಲ್ಲಿ ವಿಶ್ವವಿದ್ಯಾಲಯದಲ್ಲೂ ‘ಸುಸ್ಥಿರ ಪರಿಸರ ನಿರ್ಮಾಣ’ ಯೋಜನೆಯಡಿ ವಿದ್ಯಾರ್ಥಿಗಳಿಗೆ ಕನಿಷ್ಠ ಎರಡು ಸಸಿಗಳನ್ನು ನೆಟ್ಟು ಪೋಷಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಪ್ರೊ. ಹಲಸೆ ತಿಳಿಸಿದರು.

‘ಪ್ರತಿ ಕಾಲೇಜು ಐದು ಹಳ್ಳಿಗಳನ್ನು ದತ್ತು ತೆಗೆದುಕೊಂಡು ಅಲ್ಲಿನ ಜನರಲ್ಲಿ ಪರಿಸರದ ಬಗ್ಗೆ ಕಾಳಜಿ ಹಾಗೂ ನೈರ್ಮಲ್ಯದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಆಶಯ ವ್ಯಕ್ತಪಡಿಸಿದ್ದರು. ಅದಕ್ಕೆ ಪೂರಕವಾಗಿ ನಾವು ಗಿಡ ನೆಡುವ ಯೋಜನೆ ಕೈಗೆತ್ತಿಕೊಳ್ಳಲು ಯೋಚಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.