ADVERTISEMENT

ಫೇಸ್‌ರೀಡ್‌ ಕ್ಯಾಮೆರಾ ಅಳವಡಿಕೆಗೆ ಚಿಂತನೆ

ಕೇಂದ್ರೀಕೃತ ಕಮಾಂಡೋ ವಾಹನ, ಕಮಾಂಡೋ ಕಂಟ್ರೋಲ್ ರೂಂ ಉದ್ಘಾಟಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 15:26 IST
Last Updated 15 ಜೂನ್ 2020, 15:26 IST
ದಾವಣಗೆರೆ ಎಸ್‌ಪಿ ಕಚೇರಿಯಲ್ಲಿ ಕಮಾಂಡೋ ಕಂಟ್ರೋಲ್ ರೂಂ ಉದ್ಘಾಟಿಸಿದ ಗೃಹಸಚಿವ ಬಸವರಾಜ ಬೊಮ್ಮಾಯಿ ಕಂಟ್ರೋಲ್‌ ರೂಂ ಮಾಹಿತಿ ಪಡೆದರು
ದಾವಣಗೆರೆ ಎಸ್‌ಪಿ ಕಚೇರಿಯಲ್ಲಿ ಕಮಾಂಡೋ ಕಂಟ್ರೋಲ್ ರೂಂ ಉದ್ಘಾಟಿಸಿದ ಗೃಹಸಚಿವ ಬಸವರಾಜ ಬೊಮ್ಮಾಯಿ ಕಂಟ್ರೋಲ್‌ ರೂಂ ಮಾಹಿತಿ ಪಡೆದರು   

ದಾವಣಗೆರೆ: ಜಂಕ್ಷನ್‌ಗಳಲ್ಲಿ 360 ಡಿಗ್ರಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಫೇಸ್ ರೀಡಿಂಗ್ ಕ್ಯಾಮೆರಾಗಳು, ಥರ್ಮಲ್ ಎಂಗೇಜಿಂಗ್, ನಂಬರ್‌ ಪ್ಲೇಟ್ ಪತ್ತೆ ಹಚ್ಚುವ ಕ್ಯಾಮೆರಾಗಳು ಇರಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ ಕೇಂದ್ರೀಕೃತ ಕಮಾಂಡೋ ಮೂರು ವಾಹನಗಳು ಮತ್ತು ಕಮಾಂಡೋ ಕಂಟ್ರೋಲ್ ರೂಂಅನ್ನು ಸೋಮವಾರ ಉದ್ಘಾಟಿಸಿ, ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

‘ನಗರದ 28 ಜಂಕ್ಷನ್‌ಗಳಲ್ಲಿ ಕ್ಯಾಮೆರಾ ಅಳವಡಿಸಿ ಕಂಟ್ರೋಲ್ ರೂಂನಿಂದ ಈ ಕ್ಯಾಮೆರಾಗಳ ಮೂಲಕ ಟ್ರಾಫಿಕ್ ನಿಯಂತ್ರಣ, ಆಟೋಮ್ಯಾಟಿಕ್ ಸಿಗ್ನಲ್‌ಗಳು, ಅಪರಾಧಗಳ ಪ್ರಕರಣಗಳಿಗೆ ಸಂಬಂಧಿಸಿದ ವಿವರ ಕಮಾಂಡ್‌ ರೂಂನಲ್ಲಿಯೇ ಕುಳಿತು ವೀಕ್ಷಣೆ ಮಾಡಬಹುದು. ಅದಕ್ಕೆ ಇನ್ನಷ್ಟು ಆಧುನಿಕ ಪರಿಕರ ಬಳಸಲು ಸೂಚಿಸಿದ್ದೇನೆ’ ಎಂದರು.

ADVERTISEMENT

ಸ್ಮಾರ್ಟ್‌ಸಿಟಿ ವತಿಯಿಂದ 3 ಕಮ್ಯಾಂಡೋ ವಾಹನಗಳನ್ನು ನೀಡಲಾಗಿದ್ದು, ನಗರದ ರಕ್ಷಣೆಗೆ ಸಂಬಂಧಿಸಿದಂತೆ ಇದು ಸಹಕಾರಿಯಾಗಲಿದೆ ಎಂದರು.

ಜಿಲ್ಲೆಯಲ್ಲಿ ಮುಖ್ಯವಾಗಿ ವಿದೇಶದಿಂದ ಬಂದವರಿಂದ ತಬ್ಲೀಗ್‌ ಜಮಾತ್‌ಗೆ ಹೋಗಿ ಬಂದವರಿಂದ ಹಾಗೂ ಮಹಾರಾಷ್ಟ್ರದಿಂದ ಬಂದವರಿಂದ ಕೊರೊನಾ ಬಂದಿದೆ. ಅದನ್ನು ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಸಮರ್ಪಕವಾಗಿ ನಿರ್ವಹಿಸಿದೆ ಎಂದು ಶ್ಲಾಘಿಸಿದರು.

ಮಾದಕ ವಸ್ತು ಹಾಗೂ ಡಾರ್ಕ್‌ವೆಬ್, ಹ್ಯಾಕಿಂಗ್ ಇತರೆ ಅಪರಾಧ ಪತ್ತೆಗೆ ಒಂದು ತಂಡ ರಚಿಸಲಾಗುವುದು. ಜೊತೆಗೆ ಸುಧಾರಣಾ ಕ್ರಮವಾಗಿ ಇಂಟೆಲಿಜೆನ್ಸ್ ಪೊಲೀಸಿಂಗ್ ನಡೆಸುವಂತೆ ಅಧಿಕಾರಿ, ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಎಫ್‌ಎಸ್‌ಎಲ್ ಲ್ಯಾಬ್ ಸಶಕ್ತೀಕರಣ: ಅಪರಾಧ ಪತ್ತೆಯಲ್ಲಿ ಮುಖ್ಯ ಪಾತ್ರ ವಹಿಸುವ ಎಫ್‌ಎಸ್‌ಎಲ್ ಲ್ಯಾಬ್ ಸಶಕ್ತೀಕರಣಕ್ಕೆ ಒತ್ತು ನೀಡಲಾಗುವುದು. ಎಫ್‌ಎಸ್‌ಎಲ್ ಪರೀಕ್ಷೆಗಾಗಿ ಬೇರೆಡೆ ಕಳುಹಿಸಿ ವರದಿಗಾಗಿ ಕಾಯುವುದರಿಂದ ಪತ್ತೆ ವಿಳಂಬ ಆಗುತ್ತದೆ. ಈ ನಿಟ್ಟಿನಲ್ಲಿ ದಾವಣಗೆರೆ ವಲಯ ವ್ಯಾಪ್ತಿಯಲ್ಲಿ ಅತ್ಯಾಧುನಿಕ ಉಪಕರಣಗಳುಳ್ಳ ಲ್ಯಾಬ್ ತೆರೆಯುವ ಬಗ್ಗೆ ಚಿಂತಿಸಲಾಗಿದೆ. ಸೆಲ್ ಪೊಲೀಸ್ ಠಾಣೆಗಳನ್ನು ಆಧುನೀಕರಿಸಲಾಗುವುದು. ಪೊಲೀಸ್ ಅಧಿಕಾರಿಗಳ ಕ್ವಾಟ್ರರ್ಸ್ ನಿರ್ಮಾಣಕ್ಕೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುವುದು ಎಂದು ಬಸವಾರಜ ಬೊಮ್ಮಾಯಿ ತಿಳಿಸಿದರು.

ಶಾಸಕ ಪ್ರೊ.ಲಿಂಗಣ್ಣ, ಐಜಿಪಿ ರವಿ ಎಸ್,, ಎಸ್‌ಪಿ ಹನುಮಂತರಾಯ, ಎಎಸ್‌ಪಿ ರಾಜೀವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.