ADVERTISEMENT

ಕಷ್ಟ ಇಲ್ಲದವರು ಸಾಧಕರಾಗಿಲ್ಲ: ಎಸ್‌ಪಿ ಹನುಮಂತರಾಯ

ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌ ಕಾರ್ಯಕ್ರಮದ ಸಮಾರೋಪ ಸಮಾರಂಭ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 11:43 IST
Last Updated 2 ಮಾರ್ಚ್ 2020, 11:43 IST
ಎಸ್ಪಿ ಹನುಮಂತರಾಯ
ಎಸ್ಪಿ ಹನುಮಂತರಾಯ   

ದಾವಣಗೆರೆ: ಬದುಕಿನಲ್ಲಿ ಕಷ್ಟ ಇಲ್ಲದವರು ಮಹಾನ್‌ ಸಾಧನೆ ಮಾಡಿಲ್ಲ. ಕಷ್ಟ, ಸಮಸ್ಯೆಗಳು ಇರುವವರೇ ಸಾಧಕರಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಸಂಯುಕ್ತವಾಗಿ ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2019–20ನೇ ಸಾಲಿನ ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಸ್ಯೆಗಳು ಇಲ್ಲದ ಮನುಷ್ಯರು ಇಲ್ಲ. ಸಮಸ್ಯೆಗಳು ಬಂದಾಗ ಎದೆಗುಂದದೆ ಮುನ್ನುಗ್ಗುವ ಸ್ಥೈರ್ಯ ಬೆಳೆಸಿಕೊಳ್ಳಬೇಕು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದನ್ನು ಕಲಿಯಬೇಕು. ಪರಿಹಾರ ಹುಡುಕಿಕೊಂಡು ಹೋದವರಿಂದಲೇ ಜಗತ್ತಿನಲ್ಲಿ ಸಂಶೋಧನೆಗಳು, ಆವಿಷ್ಕಾರಗಳಾಗಿವೆ ಎಂದು ತಿಳಿಸಿದರು.

ADVERTISEMENT

ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌ ಪದ್ಧತಿ ಕೇರಳದಲ್ಲಿದೆ. ಅದೇ ಮಾದರಿಯಲ್ಲಿ ರಾಜ್ಯದ ಶಾಲೆಗಳಲ್ಲಿಯೂ ನಡೆಸಲು ತೀರ್ಮಾನಿಸಲಾಗಿತ್ತು. ಐಜಿಪಿ ನೋಡಲ್‌ ಅಧಿಕಾರಿಯಾಗಿರುತ್ತಾರೆ. ಪ್ರತಿ ಜಿಲ್ಲೆಯ 10 ಶಾಲೆಗಳನ್ನು ಈ ಯೋಜನೆಯಡಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದ ಪ್ರತಿ ಶಾಲೆಯಲ್ಲಿ 44 ವಿದ್ಯಾರ್ಥಿಗಳ ವಿಂಗ್ ಮಾಡಲಾಗುತ್ತದೆ. ಶಿಸ್ತು, ಧೈರ್ಯ, ಆತ್ಮರಕ್ಷಣೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಗುತ್ತದೆ. ಜತೆಗೆ ಸರ್ಕಾರಿ ಇಲಾಖೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದೂ ತಿಳಿಯುತ್ತದೆ ಎಂದು ಹೇಳಿದರು.

ಶಿಸ್ತು, ಆರೋಗ್ಯ, ಸ್ವಚ್ಛತೆ, ಪರಿಶ್ರಮಗಳ ಜತೆಗೆ ಯೋಚನೆ ಮಾಡುವ ಶಕ್ತಿ ಗಳಿಸಿಕೊಳ್ಳಬೇಕು. ಹಿಂದೆ ಮಹಿಳೆಯರು ಮಿಲಿಟ್ರಿಯಲ್ಲಿ ಅಲ್ಪಾವಧಿಗೆ ಮಾತ್ರ ಕೆಲಸ ಮಾಡಬಹುದಿತ್ತು. ಎರಡು ವರ್ಷ ತರಬೇತಿ, ಐದು ವರ್ಷ ಕೆಲಸ ಒಟ್ಟು ಏಳು ವರ್ಷಗಳಿಗೆ ಸೀಮಿತವಾಗಿತ್ತು. ಮಹಿಳೆಯರು ಕಾಯಂ ಆಗಿ ಕೆಲಸ ಮಾಡಬಹುದು ಮತ್ತು ಮುಂಬಡ್ತಿ ಪಡೆಯಬಹುದು ಎಂದು ಸುಪ್ರೀಂಕೋರ್ಟ್‌ ಆದೇಶ ನೀಡಿದೆ. ಹಾಗಾಗಿ ನೀವು ಸೈನ್ಯದಲ್ಲಿ ಕೂಡ ಸಾಧನೆ ತೋರಬಹುದು ಎಂದು ವಿದ್ಯಾರ್ಥಿನಿಯರನ್ನು ಹುರಿದುಂಬಿಸಿದರು.

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್‌ಪಿ ರುದ್ರಮುನಿ ಎನ್. ಮಾತನಾಡಿ, ‘ಪೊಲೀಸ್‌ ಅಂದರೆ ಹಲವರಿಗೆ ಭಯ ಇದೆ. ಈ ಭಯವನ್ನು ಹೋಗಲಾಡಿಸಲು ಇಂಥ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಹಿಳೆಯರನ್ನು ಪುರುಷರು ವಿಚಿತ್ರವಾಗಿ ನಡೆಸಿಕೊಳ್ಳುವುದು ನಿಲ್ಲಬೇಕು ಎಂದು ಈ ಯೋಜನೆ ಮೂಲಕ ಅರಿವು ಮೂಡಿಸಲಾಗುತ್ತಿದೆ’ ಎಂದು ಹೇಳಿದರು.

ಮೊಬೈಲ್ ಅಗತ್ಯಕ್ಕೆ ತಕ್ಕಷ್ಟೇ ಬಳಕೆ ಮಾಡಬೇಕು. ಮೊಬೈಲ್‌ ಬಳಕೆ ಕಡಿಮೆಯಾದಷ್ಟು ಸಾಧನೆ ದೊಡ್ಡದಾಗಲಿದೆ ಎಂದರು.

ಉಪ ಪ್ರಾಚಾರ್ಯ ಎ.ಆರ್‌. ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ನಿರಂಜನಮೂರ್ತಿ, ಪ್ರಾಚಾರ್ಯ ಎನ್‌.ರಾಜು, ಶಿವಮೊಗ್ಗ ಕೆಎಸ್‌ಆರ್‌ಪಿ ಅಸಿಸ್ಟೆಂಟ್‌ ಕಮಾಂಡೆಂಟ್‌ ದಾವುಲ್‌ಸಾಬ್‌, ಶಿವಮೊಗ್ಗ ಕೆಎಸ್‌ಆರ್‌ಪಿ 8ನೇ ಪಡೆ ಪಿಎಸ್‌ಐ ರಮೇಶ್‌ ಪಿ.ಎಂ, ಪೊಲೀಸ್‌ ಸುರೇಶ್‌ ಎಚ್‌.ಬಿ ಇದ್ದರು.

ತ್ರಿವೇಣಿ ಶಿರಹಟ್ಟಿ ಪ್ರಾರ್ಥನೆ ಮಾಡಿದರು. ಕೆ.ಎಂ. ಕೊಟ್ರೇಶ ಸ್ವಾಗತಿಸಿದರು. ಲಕ್ಷ್ಮಪ್ಪ ಬಣಗಾರ ವಂದಿಸಿದರು. ಪುಟ್ಟಪ್ಪ ಎಸ್‌.ಟಿ. ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.